Monday, March 25, 2013

ವೃತ್ತಿ ಮಾರುಕಟ್ಟೆಯಲ್ಲಿ ನಮ್ಮ ಬೆಲೆ ಏನು?

Hi, I am Sharan, fresher. I am B.Tech graduate in Computer Science with 75%. Please let me know if any openings in your company. I have attached my resume with this mail.

Hello, I am Shankar. M.B.A. I have experience of 1 plus years in Marketing. Please let me know if any opening in your company.

Dear Sir, I am Pramod, M.Tech in Computer Science. I am looking for a job in your organization. I have attached my profile here with this mail for your kind reference.

...
...

ನಾನೇನು ಮಾತನಾಡಹೊರಟಿದ್ದೇನೆ ಎಂಬುದು ಎಂಬುದು ನಿಮಗೆ ಗೊತ್ತಿರಬಹುದು. ಅದೇನೆಂದರೆ, ಮೇಲಿನವು ಉದ್ಯೋಗಾಕಾನ್ಷಿಗಳು ಬರೆಯುವ ಇ-ಅಂಚೆ (ಇ-ಮೇಲ್). ಇಂತಹ ಇ-ಅಂಚೆಗಳು ಬಹುಶ ದಿನಕ್ಕೆ ಮಿಲಿಯಗಟ್ಟಲೆ ಬರೆಯಲ್ಪಡುತ್ತವೆ, ಮತ್ತು ಅಂತರ್ಜಾಲದ ತುಂಬೆಲ್ಲ ಓಡಾಡುತ್ತಿರುತ್ತವೆ. ನಮಗೊಂದು ಹೊಸ ಪೆರ್ಮನೆಂಟ್ ಜಾಬ್ ಬೇಕಾಗಿದೆ, ಅದು ಬೆಂಗಳೂರಿನಂಥ ಮೆಟ್ರೋ ಸಿಟಿಯಲ್ಲಿ, ಕೈ ತುಂಬಾ ಸಂಬಳ ಸಿಗುವಂತಹದ್ದು.

"ಪರ್ಮನೆಂಟ್ ಕೆಲಸವೇ ಬೇಕೇ?" ಸುಮ್ಮನೆ, ನನ್ನ ಗೆಳೆಯನೊಬ್ಬನಲ್ಲಿ ಕೇಳಿದೆ.

"ಹೌದಯ್ಯ.. ನನಗೆ ಹೆಚ್ಚಿನ ಸಂಬಳದ ಕೆಲಸ ಬೇಕಾಗಿದೆ, ಈಗಿನ ಸಂಬಳ ನನ್ನ ಖರ್ಚಿಗೆ ಸಾಲುತ್ತಿಲ್ಲ, ಕಂಪನಿಯಲ್ಲಿ ಹೆಚ್ಚಿನ ಬೆನಿಫಿಟ್ಸ್ ಕೊಡುತ್ತಿಲ್ಲ. ನಿಂಗೆ ಗೊತ್ತಲ್ಲಾ, ಬೆಲೆ ಏರಿಕೆ ಬೆನ್ನಿನಮೇಲೆ ಒಂದೊಂದೆ ಬರೆ ಎಳಿತಾ ಇದೆ. ಬದುಕೋದಿಕ್ಕೆ ಏನಾದರೂ ಮಾಡಬೇಕಲ್ಲ," ವಿಷಾದದಿಂದಲೇ ಎಂದ.

"ಎಲ್ಲ ಓಕೆ, ಆದ್ರೆ ಬೆಲೆ ಏರಿಕೆ ಆಗಿದೆ ಅದಕ್ಕಾಗಿ ನಿನಗೆ ಹೊಸ ಪರ್ಮನೆಂಟ್ ಕೆಲಸ ಬೇಕೆನಯ್ಯ? ಅದಕ್ಕೂ ಇದಕ್ಕೂ ಏನಯ್ಯ ಸಂಬಂಧ?" ಕೇಳಿದ್ದಕ್ಕೆ, "ನೀನು ಇದೇ ಭೂಮಿ ಮೇಲೆ ಬದುಕಿದ್ದಿಯ ತಾನೆ? ಯಾಕೆ ಅವೆರಡರಲ್ಲಿ ಸಂಬಂಧ ಇಲ್ಲ ಹೇಳು? ದಿನನಿತ್ಯದ ವಸ್ತುಗಳ ಬೆಲೆ ಏರಿಕೆ ಆದಷ್ಟು ಪ್ರಮಾಣದಲ್ಲಿ ನಿನ್ನ ಸಂಬಳ ಏರಿಕೆ ಆಗ್ತಾ ಇದೆಯೇನಯ್ಯ?". ಅವನ ಒಂದು ಪ್ರಶ್ನೆಗೇ ನನ್ನ ಬಾಯಿ ಮುಚ್ಚಿ ಹೋಯಿತು. ಇದಕ್ಕೆ ನನ್ನ ಯಾವುದೇ ಕಾಮೆಂಟ್ ಇಲ್ಲಾ ಬಿಡಿ. ಇದು ಪ್ರತಿಯೊಬ್ಬನ ಗೋಳು, ನನ್ನನ್ನೂ ಸೇರಿಸಿ. ಅಂದ ಹಾಗೆ ಈ ಕಾರಣಗಳೆಲ್ಲ ನಮ್ಮ ನಮ್ಮ ವಯಕ್ತಿಕ ಮತ್ತು ಅದರಬಗ್ಗೆ ಬೇರೆಯವರು ತಲೆಕೆಡಿಸಿಕೊಳ್ಳುವುದು ನಮಗೆ ಇಷ್ಟವಿಲ್ಲ, ಹಾಗಾಗಿ ನಾನೂ ಅದರಬಗ್ಗೆ ಬರೆಯುವುದಿಲ್ಲ.

ಬಹಳ ಸಮಯದಿಂದ ಅಮೆರಿಕದಂಥ ದೊಡ್ಡ ದೊಡ್ಡ ರಾಷ್ಟ್ರ ಗಳಲ್ಲಿ ಉದ್ಯೋಗಾವಕಾಶವೆನ್ನುವುದು ಏರುಪೇರಾಗಿದೆ. ಇವನ್ನೇ ನಂಬಿರುವ ನಮ್ಮ ದೇಶದ ನಿರುದ್ಯೋಗ ಸಮಸ್ಯೆ ಇನ್ನಷ್ಟು ಜಟಿಲವಾಗಿದೆ. 2012 ರ ಸಣ್ಣ ಅಂಕಿ ಅಂಶಗಳಪ್ರಕಾರ ಭಾರತದ ನಿರುದ್ಯೋಗ ಸಮಸ್ಯೆ ೯.೮% ರಷ್ಟಿದೆ (ಸಂತೋಷದ ವಿಷಯವೆಂದರೆ ಇದು ೨೦೧೦ ರಲ್ಲಿ ೧೦.೧% ರಷ್ಟು ಇದ್ದಿದ್ದು, ಈಗ ಸ್ವಲ್ಪ ಕಡಿಮೆಯಾಗಿದೆ). ಬಿಡಿ, ಇದೂ ನಮಗೆಲ್ಲ ಚೆನ್ನಾಗಿ ಗೊತ್ತಿರುವ ಕಥೆಯೇ, ಮತ್ತೆ ಮತ್ತೆ, ನಾನು ಇದರಬಗ್ಗೆ ಜಾಸ್ತಿ ಹೇಳಲು ಬಯಸುವುದಿಲ್ಲ, ಏಕೆಂದರೆ ನಾನು ಮಾತನಾಡ ಹೊರಟ ವಸ್ತು ಇದಲ್ಲ ಬಿಡಿ.

ಈಗ ಕರ್ನಾಟಕವನ್ನೇ ತೆಗೆದುಕೊಂಡರೆ, ಕಡಿಮೆ ಎಂದರೂ ಪ್ರತಿಯೊಂದು ತಾಲೂಕಿಗೆ ಒಂದೊಂದು ಇಂಜಿನಿಯರಿಂಗ್ ಕಾಲೇಜ್ ಇದೆ. ಒಂದು ಸಣ್ಣ ಅಂಕಿ ಅಂಶಗಳ ಪ್ರಕಾರ ಪ್ರತಿವರ್ಷ ಸರಿ ಸುಮಾರು 18,000 ಕ್ಕೂ ಅಧಿಕ ಇಂಜಿನಿರ್ಸ್ [ಕೇವಲ ಇಂಜಿನಿರ್ಸ್ ಗಳ ಅಂಕಿ ಅಂಶ ಮಾತ್ರ ಹೇಳುತ್ತಿದ್ದೇನೆ] ವಿದ್ಯಾಭ್ಯಾಸ ಮುಗಿಸಿ ಕೆಲಸ ಮಾಡಲು ರೆಡಿಯಾಗಿ ಕಾಲೇಜ್ ನಿಂದ ತೇರ್ಗಡೆ ಹೊಂದಿ ಹೊರಬರುತ್ತಾರೆ. ಇವರಲ್ಲಿ 10% ಹೆಚ್ಚಿನ ವಿದ್ಯಾಭ್ಯಾಸದ [ಎಂ.ಎಸ್ ಇಲ್ಲವೇ ಎಂ.ಟೆಕ್ ಅಥವಾ ಎಂ.ಬಿ.ಎ] ಆಕಾಂಶಿಗಳಾಗಿದ್ದರೆ, 30% ಕ್ಕೂ ಕಡಿಮೆ ಜನರಿಗೆ ಕ್ಯಾಂಪಸ್ ಇಂಟರ್ವ್ಯೂ ನಲ್ಲಿ ಕೆಲಸ ಸಿಕ್ಕಿದ್ದು, ಕೆಲಸಕ್ಕೆ ಸೇರಿಕೊಳ್ಳುವ ಅಧಿಕೃತ ದಿನಕ್ಕಾಗಿ ಕಾಯುತ್ತಾರೆ; ಇನ್ನು ಕೆಲವರು, ಕಾಲೇಜ್ ನಿಂದ ಹೊರಬರುವ ಮೊದಲೇ ಅಲ್ಲಿಯ ಶಿಕ್ಷಕ ವೃತ್ತಿಗೆ ಅಪ್ಲಿಕೇಶನ್ ಹಾಕಿದ್ದರೆ, ಮತ್ತಷ್ಟು ಜನ ಗವರ್ನಮೆಂಟ್ ಜಾಬ್ ಇಲ್ಲವೇ ಬ್ಯಾಂಕ್ ಜಾಬ್ ಗಳಿಗೆ ತಯ್ಯಾರಿ ನಡೆಸುತ್ತಾರೆ; ಇನ್ನೂ ಕೆಲವರು, ಅಂದರೆ ಸರಿಸುಮಾರು 5 ರಿಂದ 6 ಪ್ರತಿಶತ ಜನ 'ಪಿತ್ರಾರ್ಜಿತ' ಬಿಸಿನೆಸ್ ನಲ್ಲಿ ತೂರಿಕೊಂಡು ಬಿಟ್ಟರೆ, ನಮ್ಮ ನಿಮ್ಮಂತ, ಎಲ್ಲಿಯೂ ಸಲ್ಲುವ ಜನ, ಬೆಂಗಳೂರು ಅಥವಾ ಮುಂಬೈ ಇಲ್ಲವೇ ಪುಣೆ ಯಂತಹ ಮೆಟ್ರೋ ಸಿಟಿಗಳಿಗೆ ಬಂದು ಕೆಲಸ ಅರಿಸುವ [ಕೆಲವುಸಲ ಆರಿಸುವ] ಕೆಲಸ ಮಾಡುತ್ತೇವೆ. ಮನೆಯಲ್ಲಿ ಯಾರಾದರು ಕೇಳಿದರೆ "ಏನು ಕೆಲಸ ಮಾಡ್ತಾ ಇದ್ದಿಯಾ?" ಕೆಲಸ ಹುಡುಕುವ ಕೆಲಸ ಮಾಡ್ತಾ ಇದ್ದೇನೆ ಎಂದರಾಯ್ತು. ಇದರಬಗ್ಗೆ ದಿನವೂ ಹತ್ತು ಹಲವು ಪತ್ರಿಕೆಗಳಲ್ಲೋ, ಟಿವಿಯಲ್ಲೊ ಇನ್ನೆಲ್ಲೋ ಒಂದುಕಡೆ ಕೇಳಿ ಕೇಳಿ ಆಗಲೆ ಸುಸ್ತಾಗಿರುತ್ತಿರಿ. ಮತ್ತೆ ನಾನು ಇದರಬಗ್ಗೆ ಹರಿಕಥೆ ಬರೆಯುವ ಅಗತ್ಯ ಇಲ್ಲ ಬಿಡಿ, ಏಕೆಂದರೆ ನಾನು ಮಾತನಾಡ ಹೊರಟ ವಸ್ತು ಇದೂ ಅಲ್ಲ.

ಹಾಗಿದ್ರೆ ನೀನು ಏನನ್ನ ಬರೆಯಬೇಕೆಂದಿದ್ದಿಯ ನೆಟ್ಟಗೆ ಹೇಳಿ ಸಾಯಿ.

ಒಂದೆರಡು ನಿಮಿಷ ತಾಳ್ಮೆ ಇಟ್ಕೊಳ್ಳಿ ಸಾಹೇಬ್ರೆ. ವಿಷಯಕ್ಕೆ ಬರುವ ಮೊದಲು, ಎರಡು ಅಂಶಗಳನ್ನು ನಿಮ್ಮಲ್ಲಿ ವಿಷದಪದಿಸಬೇಕಿದೆ. ಮೊದಲನೆಯದಾಗಿ, "ವೃತ್ತಿ ಮಾರುಕಟ್ಟೆ" ಪದದ ಬಳಕೆ. ಮಾರುಕಟ್ಟೆ ಪದದ ಬಳಕೆ ಅನಿವಾರ್ಯವಾಯ್ತು ಏಕೆಂದರೆ, ಇಂದಿನ ದಿನಗಳಲ್ಲಿ ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪ್ರತೀ ಹೆಜ್ಜೆಗೂ ಯೋಚಿಸಬೇಕಿದೆ, ನಾನು ಅವಶ್ಯಕತೆಗಳ ಪಟ್ಟಿಗಿಂತ ಹೆಚ್ಚಿನದನ್ನೆದಾರೂ ಕೊಳ್ಳುತ್ತಿದ್ದೆನೆಯೇ ಅಥವಾ ಅಪ್ರಯೋಜಕವಾದುದೇನಾದರೂ ಮಾರುತ್ತಿದ್ದೆನೆಯೇ? ಏಕೆಂದರೆ ಎರಡೂ ನಿರರ್ಥಕ. ಹಾ, ಇಲ್ಲಿ ಕೊಳ್ಳುವುದು, ಮಾರುವುದು ಪದಗಳು ವಸ್ತುಗಳಿಗೆ ಮಾತ್ರ ಸೀಮಿತವಾಗಿಲ್ಲ, ಬದಲಾಗಿ ಜೀವನದ ಪ್ರತಿಯೊಂದು ಅಂಶಗಳಿಗೂ ಅನ್ವಯಿಸುತ್ತವೆ. ಜೀವನ ಎಂಬ ಮಾರುಕಟ್ಟೆಯ ಪ್ರತೀ ಹಂತದಲ್ಲಿಯೂ ನೀವು ಅವಶ್ಯಕಥೆಗಳನ್ನೇ ಮಾರಬೇಕೆ ವಿನಃ ಅಪ್ರಯೋಜಕ ಅಂಶಗಳನ್ನಲ್ಲ. ವೃತ್ತಿ ನಮ್ಮ ಜೀವನದ ಒಂದು ಭಾಗವಾಗಿದ್ದರಿಂದ ಇಲ್ಲಿ 'ವೃತ್ತಿ ಎಂಬ ಮಾರುಕಟ್ಟೆ' ಎನ್ನುವ ಪದ ಬಳಕೆ ಮಾಡಿದ್ದೇನೆ. ಎರಡನೇ ಅಂಶ "ನಮ್ಮ ಬೆಲೆ" ಎಂಬ ಪದದ ಬಳಕೆ. ಗುರುಗಳೊಬ್ಬರು ನನಗೆ ಹೇಳಿದ್ದರು, 'ಬೆಲೆ' ಮತ್ತು 'ಮೌಲ್ಯ' ಎರಡೂ ವಿಭಿನ್ನ ಪದಗಳಾಗಿದ್ದು ಅವುಗಳ ಅರ್ಥ ಬೇರೆ ಬೇರೆ. ಬೆಲೆ ಎಂಬುದು ನಿಗದಿಪದಿಸಬಹುದಾದ ಒಂದು ಮಾಪನ, ಹಾಗಾಗಿ ಇಲ್ಲಿ ಅವಶ್ಯಕತೆಗನುಗುಣವಾಗಿ ಬೆಲೆ ಎಂಬ ಪದವನ್ನು ಬಳಸಿದ್ದೇನೆ. ಸಧ್ಯಕ್ಕೆ, ವೃತ್ತಿ ಮಾರುಕಟ್ಟೆಗೆ ಹೋಲಿಸಿದರೆ, ನಾವುಗಳು "ಮೌಲ್ಯ"ದಲ್ಲಿ ಅಳೆಯುವ ಅಂಶವಾಗಿ ಉಳಿದಿಲ್ಲ ಬಿಡಿ.

ಇನ್ನು ವಿಷಯಕ್ಕೆ ಬರೋಣ.

ನಾನು ನನ್ನ ಇಂಜಿನಿಯರಿಂಗ್ ಪದವಿಯನ್ನು ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್[E&C] ವಿಷಯದಲ್ಲಿ ಪಡೆದಿದ್ದರೂ, ವೃತ್ತಿಗಾಗಿ ಸಾಫ್ಟ್ವೇರ್-ಪ್ರೋಗ್ರಾಮಿಂಗ್ ಅನ್ನು ಆರಿಸಿಕೊಂಡೆ; ಯಾಕೋ ಮೊದಲಿನಿಂದ ನನ್ನ ತಲೆ ಹಾರ್ಡ್ವೇರ್ ಬಗ್ಗೆ ಒಲವು ತೋರಲೇ ಇಲ್ಲ, ಸಾಫ್ಟ್ವೇರ್ ಬಗ್ಗೆ ಹೆಚ್ಚೆಚ್ಚು ಆಸಕ್ತಿ ಬೆಳೆಸಿಕೊಂಡಿತ್ತು. ಈ ಸಾಫ್ಟ್ವೇರ್ ಹಾರ್ಡ್ವೇರ್ ಬಗ್ಗೆ ಅರ್ಥವಾಗದಿದ್ದರೆ ಪಕ್ಕಕ್ಕಿಡಿ; ಸಧ್ಯಕ್ಕೆ ಇಷ್ಟು ತಿಳಿದುಕೊಂಡರೆ ಸಾಕು, ವೃತ್ತಿಯಲ್ಲಿ ನಾನೊಬ್ಬ ಸಾಫ್ಟ್ವೇರ್ ಇಂಜಿನಿಯರ್, ಕಂಪ್ಯೂಟರ್ ಸಾಫ್ಟ್ವೇರ್ ತಯಾರಿಸುವುದು ನನ್ನ ಕೆಲಸ. ಸಾಫ್ಟ್ವೇರ್ ತಯಾರಿಕೆಯಲ್ಲಿ "ಪ್ರೋಗ್ರಾಮಿಂಗ್ ಭಾಷೆ [programming language]" ಮಹತ್ವದ ಪಾತ್ರ ವಹಿಸುತ್ತದೆ. ನೀವು ನಿಮ್ಮ ಕಂಪ್ಯೂಟರ್ ನಲ್ಲಿ ಬಳಸುತ್ತಿರುವ ಒಂದೊಂದು ಸಾಫ್ಟ್ವೇರ್ ಗಳ ಹಿಂದೆ ಹತ್ತು ಹಲವು ಪ್ರೋಗ್ರಾಮಿಂಗ್ ಭಾಷೆಗಳ ಇತಿಹಾಸವೇ ಇರಬಹುದು. ಮೂಲ ವಿಷಯ ಇದಲ್ಲ ಬಿಡಿ.

ಆಡು ಮುಟ್ಟದ ಸೊಪ್ಪಿಲ್ಲವಂತೆ[ನಾನು ಸ್ವತಃ ಪರೀಕ್ಷೆ ಮಾಡಿ ನೋಡಿಲ್ಲ], ಅಂತೆಯೇ, ನನ್ನ ಬಗ್ಗೆ ಹೇಳುವುದಾದರೆ, ನನ್ನ ವೃತ್ತಿಯಲ್ಲಿ ನಾನು ಬಳಸದೇ ಇರುವ ಪ್ರೋಗ್ರಾಮಿಂಗ್ ಭಾಷೆಯೇ ಇಲ್ಲ ಎನ್ನಬಹುದು. ಆದರೆ, ಸರಿಸುಮಾರು 4 ವರ್ಷಗಳಿಂದ ನನ್ನ ತಲೆಯಲ್ಲಿ ಒಂದು ಹುಳ[ಸಾಫ್ಟ್ವೇರ್ ಭಾಷೆಯಲ್ಲಿ ಬಗ್] ಕೊರೆಯುತ್ತ ಇದ್ದಿತ್ತು.
"ನನ್ನ ವೃತ್ತಿ ಜೀವನದಲ್ಲಿ ನನಗೆ ಪ್ರತಿಸ್ಪರ್ಧಿಗಳಾಗಿರುವವರಿಗೆ ಹೋಲಿಸಿದರೆ, ಅವರು ಎಲ್ಲರೂ ಮಾಡುವ ಕೆಲಸವನ್ನು ನಾನೂ ಸಹ ಸರಾಗವಾಗಿ ಮಾಡಬಲ್ಲೆ. ನೀವು ಕೇಳಿದ ಪ್ರೋಗ್ರಾಮಿಂಗ್ ಭಾಷೆಯಲ್ಲಿ, ಕೇಳಿದ ಸಾಫ್ಟ್ವೇರ್ ಮಾಡಿಕೊಡುವ ಸಾಮರ್ಥ್ಯ ನನಗಿದೆ. ಈ ವಿಷಯದಲ್ಲಿ ನನಗೆ ನನ್ನ ಬಗ್ಗೆ ಹೆಮ್ಮೆ ಇದೆ, ಅಹಂಕಾರ ಇಲ್ಲ. ಹಾಗಿದ್ದರೆ, ನನ್ನ ವೃತ್ತಿ ಜೀವನಕ್ಕೆ ಹೋಲಿಸಿದರೆ, ನನಗೂ ನನ್ನ ಪ್ರತಿಸ್ಪರ್ಧಿಗಳಿಗೂ ಏನು ವ್ಯತ್ಯಾಸ?".

ಈ ಹುಳ, ಮೊನ್ನೆ ಮೊನ್ನೆ ಸುಮಾರು ಒಂದು ತಿಂಗಳ ಹಿಂದೆ ನಾನು "ಅಮೇಜೋನ್"[Amazon] ಕಂಪನಿಗೆ ಸಂದರ್ಶನ ಕೊಡುವವರೆಗೂ ನನ್ನ ತಲೆಯಿಂದ ತೊಲಗಿರಲಿಲ್ಲ. ನನ್ನ ಅಮೇಜೋನ್ ಕಂಪನಿಯೊಂದಿಗಿನ ಸಂದರ್ಶನ ನನ್ನ ಜೀವನದ ಅಮೂಲ್ಯ ಅನುಭವಗಳಲ್ಲೊಂದು ಎಂದರೆ ತಪ್ಪಾಗಲಾರದು. ನನ್ನ ತಲೆಯಲ್ಲಿದ್ದ ಹುಳ, ವಸ್ತು ವಿಚಾರದಲ್ಲಿ ಸರಳವಿದ್ದರೂ, ಸಂದರ್ಶನದಲ್ಲಿ ಆದ ನನ್ನ ಅನುಭವದಿಂದಲೇ ಅದಕ್ಕೆ ಸೂಕ್ತ ಉತ್ತರ ಸಿಕ್ಕಿದ್ದು ಆಶ್ಚರ್ಯಕರ. ಅದಕ್ಕಾಗಿಯೆ ಸಂದರ್ಭ ಒದಗಿ ಬಂದಿದ್ದು ಇನ್ನೊಂದು ಅಚ್ಚರಿ. ನನಗೆ ಆ ಕೆಲಸವನ್ನು ಗಿಟ್ಟಿಸಲು ಸಾಧ್ಯವಾಗಲಿಲ್ಲ, ಕೊನೆಯ ಟೆಕ್ನಿಕಲ್ ಸುತ್ತಿನಲ್ಲಿ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ. ಆದರೆ, ಆದಿನ ನಾನು ಸೋಲದಿದ್ದರೆ ಬಹುಶ ನನ್ನ ತಲೆಯಲ್ಲಿದ್ದ ಹುಳಕ್ಕೆ ಮುಕ್ತಿ ಖಂಡಿತ ಸಿಗುತ್ತಿರಲಿಲ್ಲ ಎನ್ನಿಸುತ್ತದೆ.

ಮೂರು ಟೆಕ್ನಿಕಲ್ ಸುತ್ತಿನಲ್ಲಿ ಎರಡನ್ನು ಕ್ಲಿಯರ್ ಮಾಡಿದ್ದೆ. ಕೊನೆಯ ಸುತ್ತಿನಲ್ಲಿ ನನ್ನ ಸಂದರ್ಶಕ, ಸರಳವಾದ ಪ್ರಶ್ನೆಗಳನ್ನೇ ಕೇಳಿದ್ದ. ಎಲ್ಲಾ ಪ್ರಶ್ನೆಗಳಿಗೆ ಉತ್ತಮವಾದ ಉತ್ತರಗಳನ್ನೆ ಕೊಟ್ಟಿದ್ದೆ. ಹೀಗಿರುವಾಗ ಯಾವ ಕಂಟಕ ಎದುರಾಯ್ತು? ಕೇಳಿ. ಅಲ್ಲಿ ನಡೆದ ಸನ್ನಿವೇಶವನ್ನು ಸರಳವಾಗಿ ಸಂಕ್ಷಿಪ್ತವಾಗಿ ಬಿಡಿಸಿ ಬರೆಯಲು ಪ್ರಯತ್ನಿಸುತ್ತೇನೆ. ಇಲ್ಲಿ ನಾನು ಬಳಸಿದ ತಾಂತ್ರಿಕ ಪದಗಳು [technical terms] ಅರ್ಥವಾಗದಿದ್ದಲ್ಲಿ ಹೆಚ್ಚು ತಲೆಕೆಡಿಸಿಕೊಳ್ಳ ಹೋಗಬೇಡಿ. ಆ ತರಹದ ಒಂದು ವಸ್ತು/ವಿಷಯ ಇದೆ ಎಂದು ಪರಿಗಣಿಸಿ ಮುಂದೆ ಓದಿಕೊಂಡು ಹೋಗಿ.

ಪ್ರತಿಯೊಂದು ಸಾಫ್ಟ್ವೇರ್ ಸಂದರ್ಶನದ ಮುನ್ನಾ ಅವರಿಗೆ ಅಗತ್ಯವಿರುವ ಅಭ್ಯರ್ಥಿಗಳ ಅನುಭವ, ಅನುಭವದ ವಿಷಯ ಹಾಗೂ ಅನುಭವದ ಮಟ್ಟ ಎಷ್ಟಿರಬೇಕು ಎಂಬುದರ ವಿವರಣೆ ನೀಡಿರುತ್ತಾರೆ. ಮುಖ್ಯ ಪ್ರೋಗ್ರಾಮಿಂಗ್ ಭಾಷೆಯೊಂದರ ಮೇಲೆ ಅಭ್ಯರ್ಥಿಗೆ ಅನುಭವವಿರಬೇಕೆಂದೂ, ಮತ್ತು ಇತರೇ ಕೆಲವು, ಆತನ ಮುಂದಿನ ಕೆಲಸದಲ್ಲಿ ಉಪಯೋಗವಾಗುವಂತಹ, ಪ್ರೋಗ್ರಾಮಿಂಗ್ ಭಾಷೆಗಳ ಮೇಲೆ ಅನುಭವವಿದ್ದರೆ ಒಳ್ಳೆಯದು ಎಂದು ಉಲ್ಲೇಖಗಳೂ ಇರುತ್ತವೆ. ಅಂತೆಯೇ, ಈ ಸಂದರ್ಶನದಲ್ಲಿ "ಶೆಲ್-ಸ್ಕ್ರಿಪ್ಟ್ [Shell Script]" ಎಂಬ ಭಾಷೆ ಮುಖ್ಯ ಪ್ರೋಗ್ರಾಮಿಂಗ್ ಭಾಷೆಯಾಗಿದ್ದು, ಯಾವುದೇ "ಆಬ್ಜೆಕ್ಟ್ ಓರಿಯಂಟೆಡ್ ಪ್ರೋಗ್ರಾಮಿಂಗ್ [OOPS]" ಭಾಷೆಯ ಅನುಭವವಿರಬೇಕೆಂದು ತಿಳಿಸಲಾಗಿತ್ತು. "ಶೆಲ್-ಸ್ಕ್ರಿಪ್ಟ್" ನಾನು ಸುಮಾರು 2 ವರ್ಷಗಳಿಂದ ಬಳಸುತ್ತಿದ್ದೇನೆ. ನನ್ನ ವೃತ್ತಿಯಲ್ಲಿ ಕೆಲವುಬಾರಿ ಬಳಸಲು ಅವಕಾಶ ಸಿಕ್ಕಿದ್ದು, ಲವುಬಾರಿ ವಯಕ್ತಿಕವಾಗಿ ಕೂಡ ಬಳಸಿದ ರೂಢಿ ಇದೆ. ಹೀಗಿರುವಾಗ ನನಗೆ ಈ ಸಂದರ್ಶನ ಹೆಚ್ಚಿನ ಕಷ್ಟಕರವೇನು ಇರಲಿಲ್ಲ ಬಿಡಿ.

ಕೊನೆಯ ಸುತ್ತಿನಲ್ಲಿ ನನಗೆ ಸಂದರ್ಶನ ಪಡೆದ ವ್ಯಕ್ತಿ, ಸುಮಾರು 8-9 ವರ್ಷಗಳ ಅನುಭವ ಉಳ್ಳವನಾಗಿದ್ದೂ, ಶೆಲ್-ಸ್ಕ್ರಿಪ್ಟ್ ನ್ನು ಸುಮಾರು 5-6 ವರ್ಷಗಳಕಾಲ ಬಳಸಿದ ಅನುಭವವಿದೆಯೆಂದು ಗ್ರಹಿಸಿದೆ. ಟೆಕ್ನಿಕಲ್ ಸುತ್ತಿನಲ್ಲಿ ಕೆಲವೊಂದು ಸನ್ನಿವೇಶಗಳನ್ನು ಕೊಟ್ಟು, ಸಣ್ಣ ಪುಟ್ಟ ಅವಶ್ಯಕತೆಗಳನ್ನು[Requirements] ಕೊಟ್ಟು ಪ್ರೊಗ್ರಾಮ್ ಬರೆಯಲು ಹೇಳುವುದು ಸಾಮಾನ್ಯ. ಅಂತೆಯೇ ನನಗೂ ಶೆಲ್-ಸ್ಕ್ರಿಪ್ಟ್ ಮೇಲೆ ಕೆಲವೊಂದು ಅವಶ್ಯಕತೆಗಳಿಗೆ ಅನುಗುಣವಾಗಿ ಸಣ್ಣ ಪುಟ್ಟ ಪ್ರೊಗ್ರಾಮ್ ಬರೆಯುವಂತೆಯೂ, ನಾನು ಬರೆದ ಪ್ರೊಗ್ರಾಮ್ ಅನ್ನು ಆತನಿಗೆ ಸಂಪೂರ್ಣವಾಗಿ ವಿವರಿಸುವಂತೆಯೂ ತಿಳಿಸಿದ್ದ. ನಾನು ಆತ ಕೇಳಿದ ಎಲ್ಲಾ ಪ್ರೋಗ್ರಾಮಿಂಗ್ ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನೇ ನೀಡಿದ್ದೆ, ಆತ ಕೊಟ್ಟ ಪ್ರೊಗ್ರಾಮ್ ಗಳನ್ನು ಸರಿಯಾಗಿ ಬರೆದು ಅದನ್ನು ಆತನಿಗೆ ವಿವರಿಸಿ ಹೇಳಿದ್ದೆ.

ಸಂದರ್ಶನ ಮುಗಿದ ನಂತರ, ಸಂದರ್ಶಕನಿಗೆ ನಿಮಗೇನಾದರೂ ಸಂದೇಹಗಳಿದ್ದಲ್ಲಿ ಕೇಳಲು ಅವಕಾಶವಿರುತ್ತದೆ. ಮತ್ತು, ಸಂದರ್ಶನದ ಅಂತ್ಯದಲ್ಲಿ ಯಾವ ಸಂದರ್ಶಕ ಕೂಡ ನಿಮಗೆ ಆ ಕೂಡಲೆ ಫಲಿತಾಂಶ ತಿಳಿಸುವುದಿಲ್ಲ, ನಿಮಗೆ ಹೊರಗೆ ನಿರೀಕ್ಷಿಸುವಂತೆ ತಿಳಿಸಿ, ತಮ್ಮ ಹೆಚ್.ಆರ್[H.R] ಗಳ ಮುಖಾಂತರ ನಿಮಗೆ ಫಲಿತಾಂಶ ತಲುಪಿಸುತ್ತಾರೆ. ಪ್ರಶ್ನೆ ಕೇಳಲು ಅವಕಾಶ ಸಿಕ್ಕಿದಲ್ಲಿ ಹೆಚ್ಚಿನ ಅಭ್ಯರ್ಥಿಗಳು ತನಗೆ ಯಾವ ರೀತಿಯ ಕೆಲಸಗಳನ್ನು ಕೊಡುತ್ತಿರಿ, ನನಗೆ ಯಾವ ಸ್ಥಾನ ಮಾನಗಳನ್ನು ಕೊಡುತ್ತಿರಿ, ನಿಮ್ಮಲ್ಲಿ ಏನೆಲ್ಲಾ ಅವಕಾಶಗಳಿವೆ ಎಂಬಿತ್ಯಾದಿ ಪ್ರಶ್ನೆಗಳನ್ನು ಸಂದರ್ಶಕನಿಗೆ ಕೇಳುತ್ತಾರೆ. ಇರಲಿ, ಯಾವ ತಪ್ಪೂ ಇಲ್ಲ. ಅದು ಅವರವರ ವಯಕ್ತಿಕ, ಅವರವರ ಫ್ಯಾಶನ್. ಆದರೆ ನನಗೆ ಒಂದು ಅಭ್ಯಾಸವಿದೆ; ಸಂದರ್ಶನದ ಅಂತ್ಯದಲ್ಲಿ ನಾನು ಮೇಲಿನ ಯಾವ ಪ್ರಶ್ನೆಗಳನ್ನೂ ಕೆಳಬಯಸುವುದಿಲ್ಲ. ನನಗೆ ಅದರ ಅವಶ್ಯಕತೆ ಕೂಡ ಇರುವುದಿಲ್ಲ. ನನಗೆ ಮುಖ್ಯವಾಗಿ ಬೇಕಿರುವುದು ನನ್ನ ಸಂದರ್ಶನದ ಫಲಿತಾಂಶ ಮತ್ತು ಸಂದರ್ಶನದಿಂದ ನನಗಾದ ಉಪಯೋಗ. ಈ ವಿಷಯದಲ್ಲಿ ಖಂಡಿತ ನಾನೊಬ್ಬ ಸ್ವಾರ್ಥಿ. ಫಲಿತಾಂಶವನ್ನು ಕೇವಲ ಎರಡು ಪ್ರಶ್ನೆಗಳಲ್ಲೇ ನಾನು ಗ್ರಹಿಸಬಲ್ಲೆ. ಸಂದರ್ಶಕನಿಗೆ ನಾನು ಕೇಳುವ ಮೊದಲ ಪ್ರಶ್ನೆ ಹೀಗಿರುತ್ತದೆ "ನೀವು ನನ್ನೊಂದಿಗೆ ಮಾತನಾಡಿದುದರಲ್ಲಿ, ನಿಮ್ಮ ಅನಿಸಿಕೆಯ ಪ್ರಕಾರ, ನನ್ನ ಯಾವ ವಿಷಯದಲ್ಲಿ ಅಥವಾ ತಿಳುವಳಿಕೆಯಲ್ಲಿ ಇನ್ನಷ್ಟು ಅಭಿವೃದ್ದಿಯ ಅವಶ್ಯಕತೆ ಇದೆ ಅನ್ನಿಸುತ್ತದೆ?". ನನ್ನ ಈ ಪ್ರಶ್ನೆಗೆ ಸಂದರ್ಶಕ ನೀಡುವ ಉತ್ತರದಿಂದ 3 ಮುಖ್ಯ ವಿಷಯಗಳನ್ನು ಗೃಹಿಸಬಲ್ಲೆ; ಮೊದಲನೆಯದು, ನಮ್ಮ ಸಂದರ್ಶನದ ಸಂಪೂರ್ಣ ಸಮಯದಲ್ಲಿ ಸಂದರ್ಶಕ ನನ್ನ ಬಗ್ಗೆ ಎಷ್ಟು ಸಮಂಜಸ ವಿವರಗಳನ್ನು ಸಂಗ್ರಹಿಸಿದ್ದಾನೆ ಎಂಬುದು - ಇದು ಅತೀ ಅವಶ್ಯಕ ಏಕೆಂದರೆ ಕೆಲವೊಂದುಬಾರಿ ಸಂದರ್ಶಕ ಮನಸ್ಸಿಲ್ಲದ ಮನಸ್ಸಿನಿಂದ ಸಂದರ್ಶನ ನಡೆಸುತ್ತಿರುತಾನೆ, ಅಥವಾ ಆತನ ಅನುಭವದ ಹೊರತಾದ ವಿಷಯಗಳಮೇಲೆ ಸಂದರ್ಶನ ನಡೆಸುತ್ತಿರುತ್ತಾನೆ, ಇಂತಹ ಸಂದರ್ಭದಲ್ಲಿ ಆತ ಎಷ್ಟರ ಮಟ್ಟಿಗೆ ಆ ಕೆಲಸಕ್ಕೆ ಸೂಕ್ತ ವ್ಯಕ್ತಿಯನ್ನು ಆರಿಸುವ ಯೋಗ್ಯತೆ ಉಳ್ಳವನು ಎಂಬ ವಿಷಯ ಮನದಟ್ಟಾಗುತ್ತದೆ. ಇನ್ನು ಎರಡನೆಯದು ನನ್ನಲ್ಲಿ ನಿಜಾವಾಗಿಯೂ ಬದಲಾಯಿಸಿಕೊಳ್ಳುವ ಅಥವಾ ಹೆಚ್ಚಿನ ಜ್ಞಾನ ಪಡೆದುಕೊಳ್ಳಬೇಕಾದ ಅವಶ್ಯಕತೆ ಇದೆಯೇ ಎಂಬುದು ಮನದಟ್ಟಾಗುತ್ತದೆ; ಇನ್ನು ಮೂರನೆಯದು, ಮುಖ್ಯವಾಗಿ, ನನ್ನ ಸಂದರ್ಶನದ ಫಲಿತಾಂಶ - ಸಂದರ್ಶಕ ಉತ್ತರಿಸುವ ವಿಷಯಗಳು, ಉತ್ತರಿಸುವ ದಾಟಿಯಲ್ಲಿಯೇ ತಿಳಿಯಬಹುದು, ವಿಷಯ ಪಾಸಿಟಿವ್ ಇದೆಯಾ ಇಲ್ಲ ರೈಲು ಹಳಿ ತಪ್ಪಿದೆಯ ಎಂಬುದು; ಕೆಲವೊಂದು ಬಾರಿ ಸಂದರ್ಶಕ ಒಂದರಮೇಲೆ ಒಂದು ಪಟ್ಟಿ ಮಾಡುತ್ತ ಹೋದಲ್ಲಿ ಸರಾಗವಾಗಿ ಗೃಹಿಸಬಹುದು, ಬಹುಶ ಸಂದರ್ಶನಕ್ಕೆ ಈತ ಅಭ್ಯರ್ಥಿಯನ್ನಲ್ಲ ಬದಲಾಗಿ ವಿಶ್ವಕೋಶವನ್ನು ನಿರೀಕ್ಷಿಸುತ್ತಿದ್ದ ಎಂಬುದು.

ಇನ್ನು, ಇವಿಷ್ಟರಲ್ಲಿ ನನಗೆ ಅವಶ್ಯವಾದ ಅಂಶಗಳು ದೊರೆಯದಿದ್ದಲ್ಲಿ, ಎರಡನೆಯ ಪ್ರಶ್ನೆ, ನೇರವಾಗಿ ಹೀಗಿರುತ್ತದೆ - "ನೇರವಾಗಿ ತಿಳಿಯಬಯಸುತ್ತೇನೆ, ನಮ್ಮ ಸಂದರ್ಶನದ ಫಲಿತಾಂಶ ಏನು? ಅದು ಪಾಸಿಟಿವ್ ಇದೆಯೇ ಇಲ್ಲ ನೆಗೆಟಿವೆ?". ನನಗೆ ಬೆರಳೆಣಿಕೆಯಷ್ಟು ಬಾರಿ ಈ ಒಂದು ಪ್ರಶ್ನೆಕೆಳುವ ಸಂಧರ್ಭ ಬಂದಿದೆ, ಮತ್ತು ಹೆಚ್ಚಿನ ಎಲ್ಲಾ ಬಾರಿ ನನಗೆ ನಾನು ಕೇಳಿದ ಪ್ರಶ್ನೆಗೆ ನೇರ ಉತ್ತರ ದೊರಕಿದೆ.

ನನ್ನ ಈ ಸಂದರ್ಶನದ ಕೊನೆ ಕೂಡ ಹೀಗೆ ಆಗಲಿದೆ ಎಂದುಕೊಂಡಿದ್ದೆ. ಎಲ್ಲಾ ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನೇ ಕೊಟ್ಟಿದ್ದೇನೆ, ಅಂದಮೇಲೆ ಫಲಿತಾಂಶ ನನ್ನ ಪರವಾಗಿಯೇ ಇರಬೇಕು ಎಂದುಕೊಂಡಿದ್ದೆ. ಆದರೂ, ಸಂದರ್ಶಕ ಕೆಳಿದ್ದಾನಲ್ಲವೆ 'ನನ್ನಲ್ಲಿ ಕೇಳಲು ನಿನಗೇನಾದರೂ ಪ್ರಶ್ನೆಗಳಿವೆಯೆ?' ಎಂದು, ಸರಿ ಎಂದಿನಂತೆಯೇ, ಮೊದಲನೇ ಪ್ರಶ್ನೆ, 'ನನ್ನ ತಿಳುವಳಿಯಲ್ಲಿ ಬದಲಾವಣೆಯ ಅವಶ್ಯಕತೆ ಇದೆಯೇ?'. ಆತ ನೀಡಿದ ಉತ್ತರವನ್ನು ಆತನ ದಾಟಿಯಲ್ಲಿಯೆ ಬರೆಯುತ್ತೇನೆ,
"ಈ ವಿಷಯದ ಬಗ್ಗೆ ನಾನು ಹೆಚ್ಚಾಗಿ ಏನೂ ಹೇಳಬಯಸುವುದಿಲ್ಲ. ಈ ಸಂದರ್ಶನದಲ್ಲಿ ಕೇಳಿದ ಎಲ್ಲಾ ಪ್ರಶ್ನೆಗಳಿಗೆ ನೀನು ಸರಿಯಾದ ಉತ್ತರವನ್ನೇ ಕೊಟ್ಟಿರುತ್ತಿ. ತಾರ್ಕಿಕವಾಗಿ[Logically] ಹೇಳುವುದಾದರೆ ನಾನು ನಿನ್ನನ್ನು ಈ ಜಾಬ್ ಗೆ ಆರಿಸಬಹುದು, ಆದರೆ ನಾನು ಆರಿಸುತ್ತಿಲ್ಲ. ಏಕೆಂದರೆ, ನಿನಗೆ ನಾನು ಕೇಳಿದ ವಿಷಯಗಳ ಮೆಲೆ ತಿಳುವಳಿಕೆ ಇದೆ, ಆದರೆ ಹೆಚ್ಚಿನ ಅನುಭವವಿಲ್ಲ. ಒಂದು ವಿಷಯವನ್ನು ತಿಳಿದಿರುವುದು ಮತ್ತು ಆ ವಿಷಯದ ಮೇಲೆ ಅನುಭವ ಹೊಂದಿರುವುದು ಎರಡೂ ಬೇರೆ ಬೇರೆ [having knowledge is different than having experience]. ವಿಷಯದಲ್ಲಿ ತಿಳುವಳಿಕೆ ಪಡೆದುಕೊಳ್ಳುವುದು ಕಷ್ಟದ ಮಾತಲ್ಲ, ಆದರೆ ಆ ವಿಷಯದಲ್ಲಿ ಅನುಭವ ಪಡೆದುಕೊಳ್ಳುವುದು ಸುಲಭವಲ್ಲ [it is not difficult to get knowledge about subject, but it is not easy to get experience about it]. ಪ್ರಶ್ನೆಗಳಿಗೆ ಸರಿಯಾದ ಉತ್ತರ ಕೊಡುವುದು ಮಾತ್ರ ಮುಖ್ಯವಲ್ಲ, ಸರಿಯಾದ ಉತ್ತರದ ಜೊತೆಗೆ ಸಾಂದರ್ಭಿಕ ಹಾಗೂ ಅನುಭವೀ ಉತ್ತರ ಕೂಡ ಅಷ್ಟೇ ಮುಖ್ಯ. ಈ ಬಾರಿ ನಾನು ನಿನ್ನನ್ನು ಆರಿಸಲಾರೆ, ಬದಲಾಗಿ, ನಾನು ಕೇಳಿದ ಒಂದೆರಡು ಪ್ರಶ್ನೆಗಳಿಗೆ ನೀನು ಕೊಟ್ಟ ಉತ್ತರಕ್ಕಿಂತ ಭಿನ್ನವಾಗಿ ಹೇಗೆ ಉತ್ತರಿಸಬಹುದೆಂದು ತೋರಿಸಿಕೊಡುತ್ತೇನೆ. ನಾನು ಕೇಳಿದ ಎರಡನೇ ಪ್ರೊಗ್ರಾಮ್ ಗೆ ನೀನು ಸುಮಾರು 2 ಸಾಲುಗಳ ಉತ್ತರ ಬರೆದಿದ್ದಿಯ. ಉತ್ತರ ಸರಿಯಾಗಿಯೇ ಇದೆ, ನನ್ನ ಪ್ರಶ್ನೆಯ ಎಲ್ಲಾ ಅವಶ್ಯಕತೆಗಳನ್ನು ನಿನ್ನ ಉತ್ತರ ಕೂಡ ಪೂರೈಸುತ್ತದೆ. ಆದರೆ ಅದೇ ಉತ್ತರವನ್ನು ನೀನು ಕೇವಲ ಒಂದೇ ಒಂದು ಸಾಲಿನಲ್ಲಿ ಹೀಗೆ ಬರೆಯಬಹುದು [ಆತ ಬರೆದು ತೋರಿಸಿದ]. ಈ ಉತ್ತರ ಕೂಡ ನನ್ನ ಪ್ರಶ್ನೆಯ ಎಲ್ಲಾ ಅವಶ್ಯಕತೆಗಳನ್ನು ಪೂರೈಸುತ್ತದೆ. ಯಾವುದು ಉತ್ತಮ?. ಇದು ಕೇವಲ ಅನುಭವದಿಂದಲೇ ಬರಬೇಕು."
ಇಂತಹದೊಂದು ಸಂದರ್ಭ, ಇಂತಹದೊಂದು ಉತ್ತರ ನನ್ನ ವೃತ್ತಿ ಜೀವನದಲ್ಲಿ ಮೊದಲ ಬಾರಿಗೆ ನಿರೀಕ್ಷಿಸಿದ್ದೆ. ಆತ ಮಾತು ಮುಗಿಸುತ್ತಿದ್ದಂತೆ, ನನಗೆ ನನ್ನ ಎರಡನೇ ಪ್ರಶ್ನೆ ಕೇಳಬೇಕೆಂದು ಅನ್ನಿಸಲಿಲ್ಲ. ಸೋಲಿನ ಕಹಿ ಮುಖದ ಮೇಲೆ ತೊರ್ಪಡಿಸಿಕೊಳ್ಳದೆ ಇರಲು ಬಹಳ ಪ್ರಯತ್ನ ಪಡಬೇಕಾಯಿತು. ಆತನ ಮಾತಿಗೆ ಹೇಗೆ ಸ್ಪಂದಿಸಬೇಕೆಂದು ತಿಳಿಯದ ಪೇಚಾಟಕ್ಕೆ ಸಿಲುಕಿಕೊಂಡಿದ್ದೆ. ಆದರೂ, ಅಭ್ಯಾಸ ಬಲವಲ್ಲವೆ, ಹುಸಿ ನಗು ಮುಖದಲ್ಲಿ ತೋರಿಸುತ್ತ ಧನ್ಯವಾದಗಳನ್ನು ತಿಳಿಸಿ ಅಲ್ಲಿಂದ ಹೊರಟು ಬಂದೆ.

ಮನೆಗೆ ತಲುಪಿದ ಮೇಲೆ ನನ್ನ ಮನಸ್ಸಿನಲ್ಲಿ ನಡೆದ ಮಥನದ ವಿಚಾರ ಖಂಡಿತ ಇಲ್ಲಿ ಬಿಡಿಸಿ ಹೇಳಲು ಪದಗಳು ನನ್ನಲ್ಲಿಲ್ಲ. ನನಗಾದ ಅನುಭವವನ್ನು ಅನುಭವಿಸಬಲ್ಲೆನೇ ಹೊರತು ವಿವರಿಸಲಾರೆ. ಅಂದು ನನಗೆ ಅನ್ನಿಸಿತ್ತು, ನನ್ನ ತಲೆಯಲ್ಲಿ ಇದ್ದ ಹುಳ ಕೇವಲ ಹೆಮ್ಮೆಯ ವಿಚಾರವೊಂದೇ ಆಗಿರದೆ ಅಹಂಕಾರದ ಬೀಜ ಕೂಡ ಆಗಿತ್ತು ಎಂದು. ಈ ಅಹಂಕಾರವೆಂಬ ವಸ್ತು ಒಂದು ರೀತಿಯ ಪೊರೆ ಇದ್ದಂತೆ. ಅದು ನಿಮ್ಮ ಆಂತರಿಕ ಮನಸ್ಸಿನ ಮೇಲೆ ಹೊದಿಕೆಯಂತೆ ಆವರಿಸಿ, ಎಂತಹ ಸನ್ನಿವೇಶ ಸೃಷ್ಟಿಸುವುದೆಂದರೆ, ಜೀವನ ಪೂರ್ತಿ ನೀವು ನಿಮ್ಮ ಅಂತರ್ಯವನ್ನು ಕೇಳ ಹೊರಟ ಪ್ರಶ್ನೆಗಳಿಗೆ ಇದು ತಾನೇ ಉತ್ತರಿಸಿ, ನಿಮ್ಮ ಅಹಂಕಾರವೇ ನಿಮ್ಮ ಅಂತರ್ಯ ಎಂಬ ಮೌಢ್ಯ ನಿಮ್ಮಲ್ಲಿ ಬೆಳೆಸುತ್ತದೆ. ನಿಮ್ಮ ಪ್ರತಿ ಹೆಜ್ಜೆಯಲ್ಲೂ ನಿಮ್ಮನ್ನು ಸತ್ಯದಿಂದ ದೂರ ತಳ್ಳುತ್ತದೆ. ಯಾವಾಗ ನಿಮ್ಮ ಅಹಂಕಾರಕ್ಕೆ ಏಟು ಬಿಳುವುದೋ ಅಂದೇ ನಿಮಗೆ ನಿಜವಾದ ಸತ್ಯದ ಪರಿಚಯವಾಗುತ್ತದೆ. ಜೀವನದ ಪ್ರಯೋಗದಲ್ಲಿ ಸೋತಾಗ ಸಿಕ್ಕ ಅನುಭವದ ಪಾಠ ಗೆಲುವಿನಲ್ಲಿ ಸಿಗಲಾರದು. ಅಂದು ನಡೆದ ಎಲ್ಲಾ ವಿಚಾರಗಳನ್ನು ತಲೆಯ ತುಂಬೆಲ್ಲ ತುಂಬಿಕೊಂಡು ಗಾಢ ನಿದ್ರೆಗೆ ಜಾರಿದೆ.

ಸ್ನೇಹಿತರೆ, ಮರೆತು ಮರೆತು ಎಷ್ಟೊಂದು ಸಣ್ಣ ಪುಟ್ಟ ವಿಚಾರಗಳನ್ನೂ ಮರೆತು ಬಿಟ್ಟಿದ್ದೇವೆ ನಾವು. ಚಿಕ್ಕವರಿರುವಾಗ, ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳಲ್ಲಿ 'ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ' ಎಂಬುದ ಓದಿದ ನೆನಪಿದೆ, ಆದರೆ ನಮ್ಮಲ್ಲಿ ಎಷ್ಟು ಜನ ಅದರ ಒಳಾನುಭವ ಅರಿತಿದ್ದೇವೆ? ಜೀವನದಲ್ಲಿ ನಾವು ಕಲಿತ ವಿಷಯಗಳ ಜೊತೆ ಜೀವನ ನಮಗಾಗಿಯೇ ನೀಡಿದ ಅನುಭವದ ಪಾಠ ಅತಿಮುಖ್ಯವಲ್ಲವೇ?. ನಮ್ಮ ದಿನನಿತ್ಯದ ದಿನಚರಿಗಳಿಗೆ ಹೋಲಿಸಿದರೆ, ನಾವು ನಮ್ಮ ಸ್ವಂತ ವೃತ್ತಿಯಲ್ಲಿ ವಿನಿಯೋಗಿಸುವ ದಿನದ ಸಮಯವೇ ಅಧಿಕ. ಆದರೆ, ನಾವು ನಮ್ಮ ವೃತ್ತಿಯಲ್ಲಿ ಕಲಿಯುತ್ತಿರುವ ಪಾಠ, ಪಡೆದುಕೊಳ್ಳುತ್ತಿರುವ ಅನುಭವ ಅತೀ ಕಡಿಮೆ. ವೃತ್ತಿಯಲ್ಲಿ ಹೆಚ್ಚಿನ ಜನ ಇಷ್ಟಪಟ್ಟು ಆರಿಸಿಕೊಂಡ ವಸ್ತುವಿಗಿಂತ ಕಷ್ಟಪಟ್ಟು ಆರಿಸಿಕೊಂಡಿರುವುದೇ ಹೆಚ್ಚು, ಯಾರದ್ದೋ ಒತ್ತಾಯಕ್ಕೆ ಮಾಡುವ ಕೆಲಸವೇ ಹೆಚ್ಚು. ನಮಗೆ ಹೇಗೆ ಕೆಲಸ ಮಾಡಬೇಕು ಎಂಬುದಕ್ಕಿಂತ ಕೆಲಸ ಹೇಗೆ ಮಾಡಬಾರದು ಎಂಬುದರಲ್ಲಿಯೇ ಆಸಕ್ತಿ ಹೆಚ್ಚು; ಅದಕ್ಕಾಗಿಯೇ ಕಾರಣಗಳನ್ನು ಹುಡುಕುತ್ತಿರುತ್ತೇವೆ.
ನಾವೆಲ್ಲಾ ಜೀವನಕ್ಕೆಂದು ಒಂದೊಂದು ವೃತ್ತಿಯನ್ನು ಇಷ್ಟಪಟ್ಟೋ ಕಷ್ಟಪಟ್ಟೋ ಆರಿಸಿಕೊಂಡಿದ್ದೇವೆ. ಆ ವೃತ್ತಿಯಲ್ಲಿ ಜೀವನ ಸುಖ ಕಾಣಬೇಕಾದ್ದು ನಮ್ಮ ಧರ್ಮ. ನಮ್ಮ ನಮ್ಮ ವೃತ್ತಿಯಲ್ಲಿ ನಮ್ಮನ್ನು ಇಂದಿನ ದಿನಕ್ಕೆ ಸರಿಯಾಗುವಷ್ಟು ಆಧುನೀಕರಣ ಗೊಳಿಸಿಕೊಳ್ಳುವುದು ಅವಶ್ಯಕ. ಹಳೆಯ ಅಪ್ಪ ನೆಟ್ಟ ಆಲದಮರಕ್ಕೆ ನೇತು ಬಿದ್ದಿರುವುದಲ್ಲ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ, ಪ್ರತೀ ಹೆಜ್ಜೆ ಹೆಜ್ಜೆಗೂ ಚತುರತೆ, ಜಾಣ್ಮೆ, ಬುದ್ದಿವಂತಿಕೆ ನಮ್ಮ ಕಾರ್ಯದಲ್ಲಿ ತೋರಿಸಿಕೊಳ್ಳುವ ಅಗತ್ಯ ಇದೆ. ಕೆಲಸ ಮಾಡುವುದು ಕಷ್ಟಕರವಲ್ಲ, ಆದರೆ ಮಾಡುವ ಕೆಲಸದಲ್ಲಿ ಪರಿಪೂರ್ಣತೆ ತೋರುವುದು ಎಣಿಸಿದಷ್ಟು ಸುಲಭವಲ್ಲ. ನಿಮ್ಮ ನಿಮ್ಮ ವೃತ್ತಿ ಜೀವನದ ಗುರಿ ನಿಮ್ಮ ಮುಂದಿರಲಿ. ನಿಮ್ಮ ವೃತ್ತಿ ಜೀವನದ ಮೌಲ್ಯಗಳನ್ನು ಅರಿತುಕೊಳ್ಳಿ. ಸರಾಗವಾಗಿ ಬದಲಾಗುತ್ತಿರುವ, ಕ್ಷಣ ಕ್ಷಣಕ್ಕೂ ಹೊಸ ರೂಪ ತಾಳುತ್ತಿರುವ ಹೊರಪ್ರಪಂಚದ ಜೊತೆ ನಿಮ್ಮ ಮೌಲ್ಯಗಳನ್ನು ನವೀಕರಿಸಿಕೊಳ್ಳಿ. ಬದಲಾವಣೆಯೇ ಜೀವನದ ನಿಯಮ; ಅನುಭವವೇ ಜೀವನದ ಪಾಠ.

ಕುರುಡನಿನ ಚಂದ್ರರನು ಕಣ್ಣಿಂದ ಕಾಣುವನೆ?
ಅರಿಯುವಂ ಸೋಮ್ಕಿಂದೆ ಬಿಸಿಲು ತಣಿವುಗಳ ||
ನರನುಮಂತೆಯೆ ಮನಸಿನನುಭವದಿ ಕಾಣುವನು |
ಪರಸತ್ತ್ವ ಮಹಿಮೆಯನು - ಮಂಕುತಿಮ್ಮ ||

ಮರುದಿನ ಮುಂಜಾವಿನಲ್ಲಿ ಎದ್ದಾಗ ಏನೋ ಒಂದು ಸಂತೋಷ. ಏನೋ ಹೊಸದೊಂದರ ತಿಳಿದುಕೊಂಡ ಆನಂದ. ಪ್ರತಿ ಸಂದರ್ಶನದ ಬಳಿಕ, ಸಾಧ್ಯವಾದರೆ, ನನಗೆ ಸಂದರ್ಶನ ತೆಗೆದುಕೊಂಡ ವ್ಯಕ್ತಿಗೆ ಧನ್ಯವಾದ ಸಮರ್ಪಿಸಲು ಇ-ಅಂಚೆಯೊಂದನ್ನು ಕಳುಹಿಸುವ ಅಭ್ಯಾಸ ಮಾಡಿಕೊಂಡಿದ್ದೆ. ಇಲ್ಲಿಯ ತನಕ ಕಳುಹಿಸಿದ ಇ-ಅಂಚೆಯಲ್ಲಿ ಯಾವ ಸತ್ವವೂ ಇರುತ್ತಿರಲಿಲ್ಲ, ಬರಿಯ ಕಾಟಾಚಾರದ ಧನ್ಯವಾದಗಳು ಅಷ್ಟೆ. ಆದರೆ ಅಂದು ಪೂರ್ಣ ಕೃತಜ್ಞತಾ ಭಾವದೊಂದಿಗೆ ಇ-ಅಂಚೆಯೊಂದನ್ನು ಬರೆದು ಕಳುಹಿಸಿದೆ. ನನಗೆ ಸಂದರ್ಶನದಲ್ಲಿ ಭಾಗವಹಿಸಲು ಅವಕಾಶ ಕೊಟ್ಟಿದ್ದಕ್ಕೆ ಮನಸಾರೆ ಧನ್ಯವಾದಗಳನ್ನು ಅರ್ಪಿಸಿದೆ.