Tuesday, January 1, 2013

ಸಾವು ಆರಿಸುವ ಮುನ್ನ...

ಇದೊಂದು ಬರಹ ನನ್ನನ್ನು ಬಹಳ ಯೋಚಿಸುವಂತೆ ಮಾಡಿತು, ನಾನು ಮಾಡಬೇಕಾದ ಕೆಲಸಗಳು, ಮಾಡದೇ ಅಲಕ್ಷಿಸಿದವುಗಳು, ಮುಂದೆಂದಾದರೂ ನೋಡಿಕೊಂಡರಾಯ್ತು ಎಂದುಕೊಂಡವುಗಳು ಎಲ್ಲವನ್ನೂ ನೆನಪಿಸಿ ಕೊಟ್ಟಿತು. ಬರಹದಲ್ಲಿ ಹೆಚ್ಚಿನದ್ದೇನೂ ಇಲ್ಲ, ಚಿಕ್ಕದಾಗಿ ಚೊಕ್ಕವಾಗಿದೆ, "ಕೆಲವು ಅತಿಮೂಲ್ಯ ಸಂಗತಿಗಳು ಜೀವನದಲ್ಲಿ ಮಾಡದೆ ಉಳಿದಿರುವವು".
ಓದಲು ಶುರುಮಾಡುವ ಮೊದಲು ಈ ಬರಹದ ಇಷ್ಟ ಕಷ್ಟಗಳನ್ನು ಬದಿಗಿಡೋಣ, ಒಮ್ಮೆ ಓದಿ, ಅಲ್ಲಿರುವ ಅಂಶಗಳಂತೆ ನಾವೆಂದಾದರೂ ನಡೆದುಕೊಂದಿದ್ದೆವೆಯೇ ಎಂದು ಒಮ್ಮೆ ಯೋಚಿಸಿನೋಡಿ, ಸಾಕು. ಆನಂತರ ಮರೆಯುವುದು ಇದ್ದಿದ್ದೆ. ಮನುಷ್ಯನಾಗಿ ಹುಟ್ಟಿದಮೇಲೆ ಮರೆವು ನಮಗೆ ಬಳುವಳಿಯಾಗಿ ಬಂದ ಉಡುಗೊರೆ. ಅಮೇರಿಕಾದ ಬರಹಗಾರ ಮಿ. ಹಿಲರಿ ಹಿಂಟನ್ ಶಿಗ್ಲರ್ ಬಳಿ ಜನ ಕೇಳಿದ್ದರಂತೆ, "ಶಿಗ್ಲರ್ ರವರೆ, ನೀವು ತುಂಬಾ ಚೆನ್ನಾಗಿ ಮಾತನಾಡುತ್ತಿರಿ, ನಿಮ್ಮ ಪ್ರೆರಣಕಾರಿ ಭಾಷಣ ಕೇಳಿ ನಾವೆಲ್ಲಾ ಪ್ರೆರಿತರಾಗುತ್ತೇವೆ. ಆದರೆ ನಿಮ್ಮ ಭಾಷಣದ ಪ್ರೇರಣೆ ಹೆಚ್ಚು ಸಮಯ ಉಳಿಯಲಾರದು, ನಾವು ಮರೆತುಬಿಡುತ್ತೇವೆ." ಅದಕ್ಕೆ ಹಿಲರಿ ಅವರು ಹೇಳಿದ್ದು ಇಷ್ಟೇ, "ಪ್ರೆರಣಕಾರಿ ಮಾತುಗಳು ಹೆಚ್ಚು ಸಮಯ ಉಳಿಯಲಾರದು, ಅಂತೆಯೇ ನೀವು ಇವತ್ತು ಮಾಡಿದ ಸ್ನಾನ ಕೂಡ; ಹಾಗಾಗಿ ಅವೆರಡನ್ನೂ ದಿನವೂ ತಪ್ಪದೇ  ಮಾಡಿರೆಂದು ನಾನು ಶಿಫಾರಸ್ಸು ಮಾಡುವುದು". ಬಹುಷ, ಇಂಗ್ಲಿಷ್ ನಲ್ಲಿಯೇ ಹೇಳಿದರೆ ಸರಿ ಎನ್ನಿಸಬಹುದು, "People says, Motivation doesn't last for long; neither does bathing. That is why they are recommended daily."
[ಅಂದ ಹಾಗೆ, ದಯವಿಟ್ಟು ಕ್ಷಮೆ ಇರಲಿ, ಇದು ನನ್ನ ಸ್ವಂತ ಬರವಣಿಗೆ ಅಲ್ಲ, ಫಾರ್ಬ್ಸ್ (Forbes) ಮ್ಯಾಗಜಿನ್ ನಲ್ಲಿ ಬಂದ ಒಂದು ಲೇಖನದ ಸಹಾಯ ಪಡೆದಿರುತ್ತೇನೆ]

"ನನಗೆ ಅಚ್ಚರಿ ಎನ್ನಿಸುತ್ತದೆ !!"
ಏಕೆಂದರೆ, ನಾನು ಮಾಡಿದ ಕೆಲಸಗಳನ್ನು ತೆಗೆದುಕೊಂಡು ಅದಕ್ಕಾಗಿ ನಾನು ವ್ಯಯಿಸಿದ ಸಮಯವನ್ನು ಹೋಲಿಸಿದರೆ, ಅದೇ ಸಮಯದಲ್ಲಿ ನಾನು ಇನ್ನಷ್ಟು ಉತ್ತಮ ಕೆಲಸಗಳನ್ನು ಮಾಡಬಹುದಾಗಿತ್ತು, ಬಹುಷಃ.

"ಇವತ್ತಿನ ದಿನ ಚೆನ್ನಾಗಿತ್ತು !!"
ಇದನ್ನು ನೀವು ಮನಪೂರ್ವಕ ಒಮ್ಮೆ ಹೇಳಬಲ್ಲಿರಾದರೆ, ಬಹುಷಃ, ಇದು ನಿಮ್ಮ ಜೀವನದಲ್ಲಿ ಪದೇ ಪದೇ ನಡೆಯುತ್ತಿರುತ್ತದೆ.

"ನನಗೆ ಇದರಮೇಲೆ ಸಂಪೂರ್ಣ ನಂಬಿಕೆ ಇದೆ !!"
ದೇವರು, ಒಂದು ಯೋಜನೆ, ಒಂದು ಸಂಸ್ಥೆ, ಒಬ್ಬ ವ್ಯಕ್ತಿ, ಇಲ್ಲವೇ ನಿಮ್ಮದೇ ಒಂದು ಯೋಚನೆ - ಇವಿಷ್ಟರಲ್ಲಿ ಕೊನೆಯಪಕ್ಷ ಒಂದರಮೇಲಾದರೂ ನಿಮಗೆ ಸಂಪೂರ್ಣ ನಂಬಿಕೆ ಇರಬೇಕು.

"ಆ ಕೆಲಸವನ್ನು ನಾನಿನ್ನೂ ಪೂರ್ತಿಯಾಗಿ ಮುಗಿಸಿಲ್ಲ !!"
ಇದು ನಿಮ್ಮ ಪ್ರಾಣಪಕ್ಷಿ ಹಾರಿಹೋಗುವವರೆಗೂ ಸತ್ಯ. ಆ ಕೆಲಸ ಪೂರ್ಣಗೊಳ್ಳುವುದು ನಿಮ್ಮ ಕೊನೆಯ ಉಸಿರಿನೊಂದಿಗೇ.

"ಕೆಲಸವನ್ನು ಹಸನಾಗಿಸಿಕೊಟ್ಟ ನಿಮ್ಮೆಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು !!"
ಏಕೆಂದರೆ, ಜೀವನದಲ್ಲಿ ನಾವು ಯಾವ ಕೆಲಸವನ್ನೂ ಒಂಟಿಯಾಗಿ ಮಾಡಲಾಗದು. ನಮ್ಮ ಪ್ರತಿಯೊಂದು ಕೆಲಸವೂ ಯಾವುದೋ ಒಂದು ವಸ್ತುವೋ, ವ್ಯಕ್ತಿಗೋ, ಇಲ್ಲವೇ ಶಕ್ತಿಗೋ ನಿರ್ಬಂಧಿಸ್ಲ್ಪಟ್ಟಿರುತ್ತದೆ.

"ಇಷ್ಟಕ್ಕೆ ಸಾಕು !!"
ಜೀವನದಲ್ಲಿ, ಊಟ-ತಿಂಡಿ-ಉಪಚಾರಗಳು, ಆಲಸ್ಯ ತರಿಸುವಷ್ಟು ನಿದ್ರೆ, ಶೃಂಗಾರ ಸಾಧನಗಳು ಮುಂತಾದವುಗಳು ನಿಮ್ಮ ಹಿಡಿತದಲ್ಲಿರಲಿ.

"ನಾನಿದನ್ನು ಇನ್ನಷ್ಟು ಚೆನ್ನಾಗಿ ಮಾಡಬಲ್ಲೆ !!"
ನೀವಿದನ್ನು ಹೇಳಿದ ಕ್ಷಣಮಾತ್ರದಿಂದ ಅದನ್ನು ಜಯಿಸುವಲ್ಲಿ ನೀವು ಅತೀ ಹತ್ತಿರದಲ್ಲಿದ್ದಿರಿ ಎಂಬುದ ಮರೆಯಬೇಡಿ.

"ತಪ್ಪಿದ್ದಲ್ಲಿ ನನ್ನನ್ನು ಕ್ಷಮಿಸಿ !!"
ಇದನ್ನು ಸುಮ್ಮನೆ ಹೇಳದೆ, ಮನಸ್ಪೂರ್ವಕ ಹೇಳಿದರೆ ಮಾತ್ರ ಬೆಲೆ.

"ಬಹುಶಃ, ಇನ್ನೂ ಹೆಚ್ಚಿನ ಅಪಾಯದಿಂದ ಬಚಾವಾದೆ !!"
ಪ್ರತಿಬಾರಿ ನಿಮ್ಮ ಜೀವನಕ್ಕೊದಗಿದ ತೊಂದರೆಗಳಿಂದ ಹೊರಬಂದಾಗ ನೀವೆಂದುಕೊಳ್ಳಬೇಕಿದ್ದು.

"ನೀವು ನಿಜವಾಗ್ಲೂ ಗ್ರೇಟ್ ಕಣ್ರಿ !!"
ಬೇರೆಯವರ ಉನ್ನತಿಯನ್ನು ಹೊಗಳಲು ಕಲಿತರೆ ನಮ್ಮ ಜೀವನದಲ್ಲಿ ಮುಂದೆಬರಲು ಸಾಧ್ಯವಂತೆ. ಮನಸ್ಪೂರ್ವಕ ಮಾಡಿದಲ್ಲಿ ಖುಷಿ ಎನ್ನಿಸುತ್ತದೆ, ಕಾಟಾಚಾರಕ್ಕೆ ಮಾಡಿದರೂ ಅವರಂತೆ ತನಗೆ ಮಾಡಲಾಗಿಲ್ಲ ಎಂಬ ಹೊಟ್ಟೆಕಿಚ್ಚಾದರೂ ನಿಮ್ಮನ್ನು ಕಾಡದೆ ಬಿಡಲಾರದು.

"ಇದೇ ನನ್ನ ಆನಂದದ ನೆಲೆ !!"
ನಿಮ್ಮ ಪ್ರತಿಯೊಂದು ಕೆಲಸವೂ ಈ ಆನಂದದ ನೆಲೆಯಿಂದಲೇ ಶುರುವಾಗಲಿ, ನಿಮ್ಮ ಕೆಲಸದಲ್ಲಿ ನಿಮಗೆ ಜಯ ಖಂಡಿತ. ಪ್ರತಿಯೊಬ್ಬ ಮನುಷ್ಯ ಇಂತಹ ಒಂದು ನೆಲೆ ಕಂಡುಕೊಳ್ಳಬೇಕಂತೆ. ಬಹುಷಃ, ನಮ್ಮ ಮನೆ, ನಮ್ಮ ಸಂಸಾರವೇ ನಮಗೆ ಅಂತಹ ಆನಂದದ ನೆಲೆ ಆಗಲು ಸಾಧ್ಯ.

"ನಾನು ನನ್ನ ಸಾಮರ್ಥ್ಯಕ್ಕೆ ಮೀರಿ ಕೆಲಸ ಮಾಡಿದ್ದೇನೆ !!"
ಇದು ನಿಜಕ್ಕೂ ನಿಜವಾಗಿದ್ದಲ್ಲಿ, ಈ ಕೆಲಸದಿಂದ ನಿಮ್ಮ "ನಿಮ್ಮತನಕ್ಕೆ" ತೃಪ್ತಿಯಾಗಿದ್ದಲ್ಲಿ, ನೀವು ಯಾವುದೋ ಶ್ರೇಷ್ಠ ಕಾರ್ಯವನ್ನೇ ಮಾಡಿರುತ್ತೀರಿ.

"ನನ್ನಿಂದ ಯಾವ ಸಹಾಯವನ್ನು ಅಪೇಕ್ಷಿಸುತ್ತಿರಿ? !!"
ಮನುಷ್ಯ ಜೀವನದಲ್ಲಿ ಎಷ್ಟು ಜನರಿಗೆ ಸಹಾಯ ಮಾಡಿದನೆಂಬುದು ಆತನ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ ಜನರ ಸಂಖ್ಯೆಯೇ ಹೇಳುತ್ತದೆ. ಕೊನೆಯ ಪಕ್ಷ ನಿಮ್ಮ ಅಂತ್ಯ ಕ್ರಿಯೆಯಲ್ಲಿ ಅವರು ಭಾಗವಹಿಸಲಾಗದಿದ್ದರೂ ನಿಮ್ಮನ್ನು ಕಳೆದುಕೊಂಡ ದುಖವಾದರೂ ಅವರನ್ನು ಕಾಡುತ್ತದೆ.

"ನಾನೇ ಅದೃಷ್ಟವಂತ !!"
ನಿಜ, ಜೀವನದಲ್ಲಿ ನಮಗಿಂತ ಅದೃಷ್ಟವಂತರು ಬೇರೆ ಯಾರೂ ಇರಲಾರರು. ಜೀವನದಲ್ಲಿ ನಾವು ಕೇಳದೇ ಆ ಭಗವಂತ ದಯಪಾಲಿಸಿದ್ದೆ ಬಹಳಷ್ಟಿದೆ, ನೋಡಲು ಸಂಯಮ ಬೇಕು.

"ನಾನದನ್ನು ಸಾಧಿಸಲೇ ಬೇಕು !!"
ನಿಮ್ಮ ಜೀವನದಲ್ಲಿ ಸಾಧಿಸಬೆಕಾದ್ದನ್ನು ಕೇಳಿ ಕಸಿದುಕೊಳ್ಳಿ. ಅದು ನಿಮ್ಮ ಹಕ್ಕು.

"ಬಹುಶಃ ನಾನು ಮಾಡಿದ್ದು ತಪ್ಪು ಅನ್ನಿಸುತ್ತದೆ !!"
ನೀವಿದನ್ನು ಜೀವನದಲ್ಲಿ ಒಮ್ಮೆಯೂ ಹೇಳದಿದ್ದಲ್ಲಿ, ಬಹುಷಃ ನೀವು ಆತ್ಮವಂಚನೆ ಮಾಡಿಕೊಳ್ಳುತ್ತಿದ್ದಿರಿ.

"ಸಾಕು, ನಾನು ಇಲ್ಲಿಗೆ ನಿಲ್ಲಿಸುತ್ತೇನೆ !!"
ಜೀವನದಲ್ಲಿ ಅನುಭವಕ್ಕೆ ಬರುವ ಎಲ್ಲವೂ ಯೋಗ್ಯವಾಗಿರುವುದೇ ಆಗಬೇಕೆಂದೇನಿಲ್ಲ. ಕೆಲವೊಮ್ಮೆ ನಿಜ ಅರಿವಾಗುವುದು ತಡವಾದರೂ ಚಿಂತೆ ಇಲ್ಲ, ಜಾಣತನದಿಂದ ಅದನ್ನು ಒಪ್ಪಿಕೊಂಡು ಬಿಟ್ಟುಬಿಡಲು ತಯ್ಯಾರಾಗಿರಬೇಕು.

"ಆಹಾ, ಪ್ರಪಂಚ ಎಷ್ಟೊಂದು ಸುಂದರವಾಗಿದೆ !!"
ನೀವು ಪ್ರಪಂಚವನ್ನು ಎಷ್ಟು ಸುಂದರವಾಗಿದೆ ಎಂದು ನೋಡುತ್ತಿರೋ ಪ್ರಪಂಚ ನಿಮಗೆ ಅಷ್ಟು ಮನೋಹರವಾಗಿ ಕಾಣಿಸುವುದರಲ್ಲಿ ಸಂದೇಹವಿಲ್ಲ.

"ನಿಮಗೆ ಹೃತ್ಪೂರ್ವಕ ಅಭಿನಂದನೆಗಳು !!"
ಇದನ್ನು ಯಾವುದೇ ಹೊಟ್ಟೆಕಿಚ್ಚಿಲ್ಲದೇ ಹೇಳಲು ಕಲಿಯಿರಿ. ಬೇರೆಯವರ ಉನ್ನತಿಯನ್ನು ಅಭಿನಂದಿಸಲೂ ಧೈರ್ಯ ಬೇಕು.

"ವಾವ್, ನಾನು ನಿಜಕ್ಕೂ ಇದನ್ನು ಮಾಡಿ ತೋರಿಸಿದೆ !!"
ನಿಮ್ಮ ಒಳ್ಳೆಯ ಕೆಲಸವನ್ನು ಸ್ವಯಂ ಪ್ರಶಂಶಿಸಿಕೊಳ್ಳಿ . ನೆನಪಿರಲಿ, ಸಮಾಜದಲ್ಲಿ ನೀವು ದಾಟಿಬಂದ ವ್ಯಕ್ತಿಗಳಲ್ಲಿ ಎಷ್ಟೋ ಜನರು ಅತೀ ಕೀಳುಮಟ್ಟದ ಸಮಯಸಾಧಕರೂ ಇದ್ದಾರೆ.

"ನಾನಿದನ್ನು ಸುಲಭದಲ್ಲಿ ಕಲಿಯಬಲ್ಲೆ !!"
ನಿಮ್ಮಲ್ಲಿ ಕಲಿಯುವ ಗುಣ ಇರುವವರೆಗೂ ಜೀವನದಲ್ಲಿ ನಿಮ್ಮ ಸಾಧನೆ ನಿಲ್ಲಲಾರದು.

"ಇದು ಖಂಡಿತ ನನ್ನ ಹಿಡಿತದಲ್ಲಿದೆ, ನಾನಿದನ್ನು ಸಾಧಿಸಬಲ್ಲೆ !!"
ಜೀವನದಲ್ಲಿ ಸಣ್ಣ ಪುಟ್ಟ ಅಂಶಗಳನ್ನು ಸಾಧಿಸುವಲ್ಲಿ ನಿಮ್ಮ ಹಿಡಿತವಿರಲಿ. ದೊಡ್ಡ ದೊಡ್ಡ ಅಂಶಗಳು ತಾವಾಗಿಯೇ ಹಿಡಿತಕ್ಕೆ ಬರುತ್ತವೆ.

"ನೊಡಿ ಸ್ವಾಮಿ, ನಾನಿರುವುದೇ ಹೀಗೆ !!"
ನಾನು, ನನ್ನದಲ್ಲದ ವಸ್ತು-ವಿಚಾರಗಳನ್ನು ಬೇರೆಯವರಿಗೆ ಸಾಬೀತುಪಡಿಸುವಲ್ಲಿ ನಾವು ವ್ಯಯಿಸಿದ ಶಕ್ತಿಯನ್ನು ಬೇರೆ ಉತ್ತಮ ಕಾರ್ಯಗಳಲ್ಲಿ ವಿನಿಯೋಗಿಸಿದ್ದರೆ, ಬಹುಶ, ನಮಗಿಂತ ಶ್ರೇಷ್ಟರಾದವರು ಪ್ರಪಂಚದಲ್ಲೇ ಇರುತ್ತಿರಲಿಲ್ಲವೇನೋ. ಮೊದಲು ನೀವು ನಿಮ್ಮನ್ನು ನೀವಿರುವ ಸ್ಥಿತಿಯಲ್ಲೇ ಒಪ್ಪಿಕೊಳ್ಳಲು ಕಲಿಯಿರಿ, ಆಗ ಮಾತ್ರ ಪ್ರಪಂಚ ನಿಮ್ಮನ್ನು ಒಪ್ಪಿಕೊಳ್ಳಲು ಸಾಧ್ಯ.

"ನನ್ನ ಜೀವನದಿಂದ ತೊಲಗಾಚೆ !!"
ಕೆಟ್ಟ ಚಟಗಳು, ಧೂಮ್ರಪಾನ, ಮದ್ಯಪಾನಗಳೇ ಮೊದಲಾದವುಗಳನ್ನು ರೂಡಿಸಿಕೊಳ್ಳುವುದು ಅತೀ ಸುಲಭ, ಆದರೆ ಅದರಿಂದ ಹೊರಬರುವುದು ಬಲು ಕಷ್ಟ. ಇಂತಹ ಕೆಟ್ಟವಸ್ತುಗಳಿಂದ ಮುಕ್ತಿ ಪಡೆಯುವಲ್ಲಿ ನೀವು ಕಾರ್ಯ ನಿವ್ರತ್ತರಾಗುವುದು ಆತೀ ಅವಶ್ಯಕ.

"ಇದು, ಪ್ರಪಂಚಕ್ಕೆ ನನ್ನ ಕೊಡುಗೆ !!"
ಒಂದು ಉತ್ತಮವಾದುದನ್ನು ಸಾಧಿಸುವಲ್ಲಿ ನಿಮ್ಮ ಕೊಡುಗೆ, ನಿಮ್ಮ ಪ್ರಯತ್ನವಿರಲಿ. ಅದನ್ನು ಹೆಮ್ಮೆಯಿಂದ ಹೇಳಿಕೊಳ್ಳಿ. ಪ್ರಪಂಚ ನಿಮ್ಮ ಅಳಿವಿನ ನಂತರವೂ ನಿಮ್ಮನ್ನು ನೆನಪಿನಲ್ಲಿಟ್ಟುಕೊಳ್ಳುತ್ತದೆ.

"ನಾನು ಖಂಡಿತ ಪ್ರಯತ್ನಿಸುತ್ತೇನೆ !!"
ಇದನ್ನು ಮನಸ್ಪೂರ್ತಿಯಾಗಿ ಹೇಳಲು ಕಲಿಯಿರಿ. ನಿಮ್ಮ ಮನಸ್ಸಿನ ಭಾವೆನೆಯೇ ನಿಮ್ಮ ಯಶಸ್ಸಿನ ದಾರಿದೀಪವಾಗಲಿ.

"ನನಗೆ ಇನ್ನಷ್ಟು ತಿಳಿದುಕೊಳ್ಳಬೆಕಿದೆ !!"
ಒಬ್ಬ ಉತ್ತಮ ವ್ಯಕ್ತಿ/ವಸ್ತು/ವಿಚಾರಗಳನ್ನು ಇನ್ನಷ್ಟು ಕೇಳಿ ತಿಳಿದುಕೊಳ್ಳಿ. ಇದು ನಿಮ್ಮ ಜೀವನದಮೆಲೆ ಖಂಡಿತ ಉತ್ತಮ ಪರಿಣಾಮ ಬೀರದೆ ಇರಲಾರದು. ಬಹುಶ, ಆ ವ್ಯಕ್ತಿ/ವಸ್ತು/ವಿಚಾರಗಳು ನಿಮಗೆ ಪ್ರೇರಣೆ ನೀಡಿ ನಿಮ್ಮನ್ನು ಉತ್ತಮ ಜೀವನದೆಡೆಗೆ ನಡೆಸಬಹುದೇನೋ.

"ಇದು ನನಗೆ ಅತಿ ಪ್ರಿಯವಾದುದು !!"
ನೀವು ಪಡೆದುದರಲ್ಲಿ ಮೊದಲು ಸಂತೃಪ್ತರಾಗಿ. ನೀವು ದಿನನಿತ್ಯ ಉಪಯೋಗಿಸುವ ವಸ್ತುಗಳಲ್ಲಿ ಆನಂದವನ್ನು ಪಡೆಯಿರಿ. ನಿಮ್ಮ ಜೀವನದಲ್ಲಿ ಭಾಗಿಯಾಗಿರುವ ಆ ವಸ್ತುಗಳಿಗೂ ಒಮ್ಮೆ ಧನ್ಯವಾದ ಸಮರ್ಪಿಸಿ. ಜೀವನದಲ್ಲಿ ಸಂತೋಷದಿಂದಿರಲು ಕಾರಣ ಬೇಕಿಲ್ಲ, ಆಸಕ್ತಿ ಬೇಕು.

"ಇದು ನನ್ನ ಸಂಪಾದನೆ !!"
ಸಂಪಾದನೆ ಕೇವಲ ಹಣವೇ ಆಗಬೇಕೆಂದಿಲ್ಲ. ಜೀವನದಲ್ಲಿ ನೀವು ಕಷ್ಟಪಟ್ಟು ದುಡಿದು ಸಂಪಾದಿಸಿದುದನ್ನು ಅನುಭವಿಸುವಲ್ಲಿ ಇರುವ ಹೆಮ್ಮೆಯೇ ಬೇರೆ. ನೆನಪಿರಲಿ, ಜೀವನದಲ್ಲಿ ಎಲ್ಲವೂ ಎಲ್ಲರಿಗೂ ಸಿಗಲಾರದು; ಅಂತಹದರಲ್ಲಿ ಅದು ನಿಮಗೆ ಪ್ರಾಪ್ತಿಯಾಗಿದೆ.

"ನನಗೆ ಅದರ ಚಿಂತೆ ಇಲ್ಲ !!"
ಹಿರಿಯರು ಹೇಳಿದ್ದೂ ಅದೇ, ಚಿತೆಯ ಮಧ್ಯೆ ಶೂನ್ಯ ಸೇರಿಸಿಯೇ ಚಿಂತೆ ಆಯಿತು. ಜೀವನದಲ್ಲಿ ಅನಾವಶ್ಯಕ ಶೂನ್ಯ ವಿಚಾರಗಳಿಗೆ ತಲೆಕೆಡಿಸಿಕೊಳ್ಳಬಾರದು. ನೆನಪಿರಲಿ ನಿಮ್ಮ ಅವಶ್ಯಕತೆ ಮತ್ತು ಅನಾವಶ್ಯಕತೆಗಳ ವಿಂಗಡಿಸಿ ಜೀವನ ನಡೆಸಿಕೊಂಡು ಹೋಗುವುದು ಒಂದು ಕಲೆ.

"ನಿಮ್ಮ ಗೌಪ್ಯ ವಿಚಾರಗಳು ನನ್ನಲ್ಲಿ ಸುರಕ್ಷಿತ !!"
ನೀವು ಒಬ್ಬ ನಂಬಿಗಸ್ತರಾಗಿದ್ದಲ್ಲಿ ಆ ವಿಚಾರದಬಗ್ಗೆ ಹೆಮ್ಮೆ ಪಡಿ. ಜೀವನದಲ್ಲಿ ನೀವು ಒಬ್ಬ ವ್ಯಕ್ತಿಯ ನಂಬಿಕೆ ಸಂಪಾದಿಸುವದಷ್ಟೇ ಅಲ್ಲ ಅದನ್ನು ಜೀವನ ಪರ್ಯಂತ ಉಳಿಸಿ ಬೆಳೆಸುವಲ್ಲಿ ಯಶಸ್ವಿಯಾದಿರೆಂದರೆ ನೀವು ಜೀವನದ ಅತ್ಯುನ್ನತ ಸ್ಥಾನದಲ್ಲಿದ್ದಿರಿ.

"ವಾವ್, ನಾನೇ ಮೊದಲನೆಯವ !!"
ಒಂದು ಹೊಸ ವಿಚಾರವನ್ನು ತಿಳಿದುಕೊಳ್ಳುತ್ತಿರುವ ಮೊದಲ ವ್ಯಕ್ತಿ ಎನ್ನಿಸಿ ಕೊಳ್ಳುವಲ್ಲಿ ಇರುವ ಸಾರ್ಥಕತೆಯ ಮಜವೇ ಬೇರೆ.

"ನನಗೆ ನಿನ್ನಲ್ಲಿ ನಂಬಿಕೆ ಇದೆ !!"
ನಂಬಿಕೆ ಉಳಿಸಿ ಬೆಳೆಸುವ ಜೊತೆಗೆ ನಿಮ್ಮಲ್ಲಿಯೂ ಅದನ್ನು ಪೋಷಿಸಿ ಬೆಳೆಸಿಕೊಳ್ಳಿ. ನಂಬಿಕೆ ಎನ್ನುವುದು ಗಳಿಸಿ-ಹಂಚುವ ವಸ್ತು, ಶೇಖರಣೆಯ ವಸ್ತು ಅಲ್ಲ.

"ನನಗೆ ಇದು ತಿಳಿಯುತ್ತಿಲ್ಲ !!"
ತಿಳಿಯದಿದ್ದರೂ ತಿಳಿದಿದೆ ಎಂದು ಆತ್ಮ ವಂಚನೆ ಮಾಡಿಕೊಳ್ಳುವುದಕ್ಕಿಂತ ತಿಳಿದಿಲ್ಲವೆಂದು ನಿಜ ಒಪ್ಪಿಕೊಂಡು ನಂತರ ಅದರಬಗ್ಗೆ ತಿಳುವಳಿಕೆ ಪಡೆಯುವುದೇ ಲೇಸು.

ಅಂದ ಹಾಗೆ ಇದು ೨೦೧೨ ರ ನನ್ನ ಕೊನೆಯ ಬರಹ. ಜೀವನದಲ್ಲಿ ಹಲವಾರು ಏರು ಬೀಳುಗಳನ್ನು ತಂದಿದ್ದರೂ ೨೦೧೨ ನ್ನು ಪ್ರೀತಿಯಿಂದ ಆಲಂಗಿಸಿ ಬೀಳ್ಕೊdoNa

1 comment: