Thursday, March 29, 2012

ನಾವು ಸಾಫ್ಟ್ವೇರ್, ನಮಗೂ ಸ್ವಲ್ಪ ಮರ್ಯಾದಿ ಕೊಡಿ

ಅವತ್ತು ಭಾನುವಾರ, ನಾನು, ವಸೀಮ, ಶಿವು, ಪ್ರವೀಣ, ಪಾಂಡು, ಗಣೇಶ ಮತ್ತು ಸಂತೋಷ, ನಾವೆಲ್ಲ ಫ್ರೆಂಡ್ಸ್ ಒಂದೆಡೆ ಸೇರಿ ಹರಟೆ ಹೊಡೆಯುತ್ತಾ, ಲೋಕಾಭಿರಾಮ ಮಾತಾಡುತ್ತಾ ಕುಳಿತಿದ್ದೆವು. ತುಂಬಾ ದಿನಗಳ ನಂತರ ಸಿಕ್ಕಿದ್ದೆವಲ್ಲ, ಪೋಲಿಟಿಕ್ಸ್, ಪೋಲಿ-ಟ್ರಿಕ್ಸ್, ದೇಶ-ವಿದೇಶ, ಮಣ್ಣು, ಮಶಿ ಏನೇನೋ ಮಾತಾಡುತ್ತಾ ಟೈಮ್ ಪಾಸ್ ಮಾಡುತ್ತಾ ಕುಳಿತಿದ್ದೆವು. ಅಷ್ಟರಲ್ಲಿ ವೆಂಕಿ ಬರ್ರನೆ ಬೈಕ್ ತಂದು ನಮ್ಮ ಮುಂದೆ ಸರ್ರನೆ ಬ್ರೇಕ್ ಹಾಕಿ ನಿಲ್ಲಿಸಿದ.

ವಸೀಮ (ಅವನನ್ನು ನೋಡಿ): "ಏನೋ, ವೆಂಕಿ - ಬೆಂಕಿ, ಎಷ್ಟೋತ್ತೋ ಬರೋದು? !!"  ಅಂದ.

ವೆಂಕಿ (ಬೈಕ್ ಸ್ಟಾಂಡ್ ಹಾಕುತ್ತಾ): "ಅಯ್ಯೋ, ಏನ್ ಕೇಳ್ತೀಯಪ್ಪ, ನನ್ನ ರಿಲೇಟಿವ್ ಒಬ್ರು ಊರಿಂದ ಬಂದಿದ್ರು ಅವರನ್ನ ಮಾತಾಡ್ಸಿ ಬರೋವಾಗ ಇಷ್ಟು ಹೊತ್ತಾಯ್ತು"

ಪ್ರವೀಣ: "ರಿಲೇಟಿವ್ ಬಹುಶ ಹುಡುಗಿನೇ ಇರಬೇಕು, ಇಲ್ಲಾಂದ್ರೆ ಇಷ್ಟೊತ್ತು ಯಾಕೆ! ಮಾವನ ಮಗಳೇನೋ?"

ವೆಂಕಿ (ಅವನತ್ತ ದುರುಗುಟ್ಟಿ ನೋಡಿ): "ಮಾವನ ಮಗಳಲ್ಲ, ಸ್ವತ ಮಾವನೇ ಬಂದಿದ್ದ"

ಸಂತೋಷ (ಕೊಂಕಣಿಯಲ್ಲಿ): "ಯೋರೆ, ತು ಎಕ್ಲೊ ಕಮ್ಮಿ ಆಶಿಲೊ, ಯೋ ಬೈಸ" [ಬಾರೋ, ನೀನೊಬ್ಬ ಕಮ್ಮಿ ಇದ್ದಿದ್ದೆ, ಬಾ ಕುಳಿತ್ಕ]

ವಸೀಮ (ನನ್ನತ್ರ ತಿರುಗಿ): "ಶುರುವಾಯ್ತು ಇವ್ರದ್ದು, ಅಮ್ಗೇಲ್ ತುಮ್ಗೇಲ್"

ನಾನು (ನಕ್ಕು): "ಅಮ್ಗೇಲ್ ಬಾಯ್ಸ್" (ಇಬ್ರೂ ತಲೆಯಾಡಿಸಿ ನಕ್ಕೆವು)

ಶಿವು (ವೆಂಕಿಯತ್ತ ತಿರುಗಿ): "ಏನಂತೋ ನಿನ್ನ ಮಾವಂದು?"

ವೆಂಕಿ (ಸಂತೋಷನ ಪಕ್ಕ ಕುಳಿತುಕೊಳ್ಳುತ್ತ): "ನನ್ನ ಮಾವನ ಮಗಂದು ಇಂಜಿನೀರಿಂಗ್ ಮುಗಿದಿದೆ, ಕೆಲ್ಸ ಹುಡುಕ್ತ ಇದ್ದಾನೆ, ಈಗ ಸಿಕ್ಕಿ ಅವನಿಗೆ ನಾನೊಂದು ಕೆಲ್ಸ ಕೊಡಿಸ್ಬೇಕಂತೆ. ನಾನೇ ಇಲ್ಲಿ ನೇತಾಡ್ತಾ ಇದ್ದೀನಿ, ಇನ್ನು ಅವ್ನಿಗೆ ಏನ್ ಕೆಲ್ಸ ಕೊಡ್ಸೋದು. ಅದೂ ಅಲ್ಲದೆ ನನ್ನ ಮಾವ ಹೋಗೋವಾಗ ಹತ್ ಸಾರಿ ಹೇಳಿ ಹೋಗಿದ್ದಾನೆ, ಮರೀಬೇಡ, ಅವನ ರೆಸ್ಯೂಮೇ ನನಗೆ ಕಳ್ಸೋಕೆ ಹೇಳ್ತೀನಿ ಅಂತ, ಈಗ ಮನೆಗೆ ಹೋಗಿ ನನ್ನ ಪೇರೆಂಟ್ಸ್ ಹತ್ರನೂ ನನಗೆ ಹೇಳಿಸ್ತಾನೆ"

ಪಾಂಡು: "ರೆಸ್ಯೂಮೇ ನೋಡು, ನಿನ್ನತ್ರ ಏನಾದ್ರೂ ಆದ್ರೆ ರೆಫರ್ ಮಾಡು, ಇಲ್ಲಾಂದ್ರೆ ರೆಸ್ಯೂಮೇ ಮ್ಯಾಚ್ ಆಗೋಲ್ಲ ಅಂತ ಹೇಳಿಬಿಡು. ಅದಕ್ಯಾಕೆ ಇಷ್ಟು ತಲೆ ಕೆಡಿಸ್ಕೊಂಡಿದ್ದೀಯ?"

ವೆಂಕಿ (ಪಾಂಡು ಕಡೆಗೆ ತಿರುಗಿ): "ಅದು ನೀನು ಹೇಳಿದಷ್ಟು ಈಸೀ ಇದ್ದಿದ್ರೆ ಎಷ್ಟೋ ಚೆನ್ನಾಗಿತ್ತು. ಅಷ್ಟೊಂದು ಈಸೀ ಇಲ್ಲಪ್ಪಾ ಅದು, ಮ್ಯಾಚ್ ಆಗೋಲ್ಲ ಅಂತ ಹೇಳೋದು."

ಗಣೇಶ: "ವೆಂಕಿ, ಇದು ನಿನ್ನೊಬ್ಬನ ಪ್ರಾಬ್ಲಂ ಆಲ್ಲಪ್ಪ, ಎಲ್ಲ ಸಾಫ್ಟ್ವೇರ್ ಎಂಜಿನಿಯರ್ ಪ್ರೋಬ್ಲೆಮ್ಮು ಇದೇಯ"

ವಸೀಮ: "ಹೌದ್ರೋ, ನನಗೂ ಇದೇ ತರ ಎಕ್ಸ್ಪೀರಿಯನ್ಸ್ ಆಗಿದೆ, ಸುಮ್ನೆ ರೆಸ್ಯೂಮೇ ಮ್ಯಾಚ ಆಗೋಲ್ಲ ಅಂದ್ರೆ ನಂಬಲ್ಲ ಕಣ್ರೋ ಅವರು, ನಾವು ಸುಳ್ಳು ಹೇಳ್ತಾ ಇದ್ದೀವಿ ಅಂದುಕೊಳ್ತಾರೆ."

ಶಿವು: "ಸುಳ್ಳುಹೇಳ್ತಾ ಇದ್ದೀವಿ, ಜೊತೆಗೆ, ನಮಗೆ ಅಹಂಕಾರ ಅನ್ನೋ ಪಟ್ಟ ಬೇರೆ, 'ನೋಡು, ಸಣ್ಣಕಿರಬೇಕಾದ್ರೆ ನಮ್ಮ ಕಣ್ಣು ಮುಂದೆ ಓಡಾಡ್ಕೊಂಡಿದ್ದ ಪೋರ, ಈಗ ಬೆಂಗಳೂರಿಗೆ ಹೊದ್ಮೇಲೆ ನಾವೆಲ್ಲ ಕಣ್ಣಿಗೆ ಕಾಣ್ಸೋಲ್ಲ ಇವನಿಗೆ '. ದೊಡ್ ದೊಡ್ ಡೈಲಾಗ್ಸ್ ಎಲ್ಲ ಕೇಳಬೇಕು."

ಗಣೇಶ: "ಹೌದ್ರೋ ನೀವು ಯಾರನ್ನಾದ್ರೂ ಮೀಟ್ ಮಾಡಿ, ಹಳೆ ಫ್ರೆಂಡ್ಸ್, ರಿಲೇಟಿವ್ಸ, ಯಾರೇ ಇರ್ಲಿ, ನೀವು ಸಾಫ್ಟ್ವೇರ್ ಎಂಜಿನಿಯರ್ ಅಂದ್ರೆ ಸಾಕು, ಅವರು ಅದೇನೋ ಒಂದಿಷ್ಟು ಅವರ ತಲೇಲಿ ತುಂಬಿಕೊಂಡ್ಬಿಡ್ತಾರೆ. ಏನ್ ಅನ್ಡ್ಕೊಂಡಿದ್ದಾರೋ ಗೊತ್ತಿಲ್ಲ. ಊರಲ್ಲಿರೋ ಎಲ್ಲಾರಿಗೂ ಕೆಲ್ಸ ಕೊಡಿಸ್ತಾ ಇರ್ಬೇಕೆನೋ."

ಸಂತೋಷ (ಸಮ್ಮತಿ ಸೂಚಿಸುತ್ತ): "ಕೊಡಿಸದೇ ಇದ್ರೆ ಎಲ್ಲಾ ತರದ ಮಾತು ಕೇಳಬೇಕು"

ನಾನು : "ಕೆಲಸ ಕೊಡಿಸೋದು ಒಂದೇ ಅಲ್ಲ ಕಣ್ರೋ ಪ್ರೋಬ್ಲೆಮ್ಮು, ಬೇರೆ ಬೇರೆ ತರದ ಮಾತುಗಳೂ ಇತ್ತೀಚೆಗೆ ನನ್ನ ರಿಲೇಟಿವ್ಸ್ ಆಡ್ಕೋತಿದ್ದಾರೆ. ಈ ರಿಸೆಷನ್ ಅನ್ನೋದು ಬಂದು, ನಮಗೆ ಇದ್ದ ಒಂದ್ ಚೂರು ಪಾರು ಮರ್ಯಾದೆನೂ ಕಳೆದೊಯ್ತು. ಊರಲ್ಲಿ ರಿಲೇಟಿವ್ಸ್ ಮನೆಗೆ ಹೋದ್ರೆ, ನಾನು ಹೇಗಿದೀನಿ ಕೇಳೋ ಮೊದಲೇ, 'ಏನೋ ಹೇಗಿದೆ ಕೆಲ್ಸ, ರಿಸೆಷನ್ ಇದ್ಯ ನಿಮ್ ಕಂಪೆನಿಲಿ, ಆಚೆ ಮನೆ ಸುಗುಣನ್ ಮಗನ ಕೆಲ್ಸ ಹೊಯ್ತಂತೆ. ರಿಸೆಷನ್ ಪ್ರಭಾವ.' ಅಂತ ಮಾತು ಬರುತ್ತೆ. ಅಂದ್ರೆ ಏನೋ ಅರ್ಥ, ನನಗೂ ಹಾಗೆ ಆಗುತ್ತೆ ಅಂತನೋ?"

ಪಾಂಡು: "ಅಷ್ಟೇ ಅಲ್ಲ, ಇನ್ನೊಂದ್ ಪ್ರಶ್ನೆ, 'ಇನ್ನೂ ಅದೇ ಕಂಪೆನಿಲಿ ಇದ್ದೀಯಾ, ಅತ್ವ ಚೇಂಜ್ ಮಾಡಿದ್ಯ?' ಅಂತ."

ನಾನು: "ಹಾಂ, ಈ ಪ್ರಶ್ನೆ ನಂಗೆ ಬೇಕಾದಷ್ಟು ಬಾರಿ ಸಿಕ್ಕಿದೆ, ಯಾರೋ ಒಬ್ಬ ಅವರ ರಿಲೇಟಿವ್ ಮಗ ಕಂಪೆನಿ ಚೇಂಜ್ ಮಾಡಿದ್ನಂತೆ, ಅದಿಕ್ಕೆ ನನಗೂ ಕೇಳೋದು, ಅದೇ ಕಂಪೆನಿಲಿ ಇದ್ದೀಯಾ ಅತ್ವ ಬೇರೆ ಕಂಪೆನಿಗೆ ಹಾರಿದ್ಯ ಅಂತ. ಅದೇನು ಅಂಗಿ ಚೇಂಜ್ ಮಾಡುವುದ, ಕಂಪೆನಿ ಚೇಂಜ್ ಮಾಡೋದಂದ್ರೆ?, ಅತ್ವಾ ಪೋಲಿಟಿಶಿಯನ್ ಪಾರ್ಟಿ ಚೇಂಜ್ ಮಾಡಿದಾಂಗ? ತಿಂಗ್ಳಿಗೊಂದು ಕಂಪೆನಿಲಿ ವರ್ಕ್ ಮಾಡೋಕೆ."

ವೆಂಕಿ: "ಜೊತೆಗೆ ಪುಕ್ಸಟೆ ಸಜೆಷನ್ ಬೇರೆ, 'ಒಂದೇ ಕಂಪೆನಿಲಿ ಇದ್ರೆ ಹೆಚ್ಗೆ ಸಂಬಳ ಸಿಗೋಲ್ಲ, ಕಂಪೆನಿ ಚೇಂಜ್ ಮಾಡಿದ್ರೆ ಮಾತ್ರ ಜಾಸ್ತಿ ಡಿಮಾಂಡ್ ಮಾಡ್ಬೋದು ' ಅಂತ."
...
ಪ್ರವೀಣ: "ಬರೇ ಸಜೆಷನ್ ಆದ್ರೆ ತೊಂದ್ರೆ ಇಲ್ಲ ಮಾರಾಯ, ಇವರನ್ನ ಒಪ್ಸೋದ್ರಲ್ಲೆ ನಮ್ಮ ಅರ್ಧ ಜೀವನ ಕಳೆದೊಯ್ತು. ಮೊನ್ನೆ ಊರಿಗೆ ಹೋಗಿದ್ದೆ, ನಮ್ಮ ಪಕ್ಕದ ಮನೆಲಿ ಒಬ್ಬ ಮುದ್ಕ ಇದ್ದಾನೆ, ರಿಟಾರ್ಡ್ ಹೆಡ್-ಮಾಸ್ಟರ್, ಸುಮಾರ್ ದಿನದ ಮೇಲೆ ಸಿಕ್ಕಿದ್ದೆ ಅವ್ನಿಗೆ, ಕೆಳ್ದ, 'ಯಾವ್ ಕಂಪೆನಿಲಿ ಇದ್ದೀಯಾ' ಅಂತ. ನಾ ಹೆಳ್ದೆ 'ಈಗ ಎಚ್.ಪಿ (H.P) ನಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿದೀನಿ' ಅಂತ. ಮುದ್ಕ, ಗೊತ್ತಿಲ್ಲದಿದ್ರೆ ಬಾಯ್ ಮುಚ್ಕ ಬೇಕು ತಾನೇ, ಏನ್ ಹೆಳ್ದ ಗೊತ್ತಾ 'ಎಚ್.ಪಿ?, ಅದ್ಯಾವ ಕಂಪೆನಿ?, ಆ ಹೆಸ್ರು ಎಲ್ಲೂ ಕೇಳಿಲ್ಲ ಮೊದ್ಲು, ನನ್ನ ತಂಗಿ ಮಗ ಇನ್ಫೋಸಿಸ್ ನಲ್ಲಿ ಇದಾನೆ, ಯಾಕೆ ನಿಂಗೆ ಇನ್ಫೋಸಿಸ್ ನಲ್ಲಿ ಕೆಲ್ಸ ಸಿಗ್ಲಿಲ್ವ?', ಇದಕ್ಕೆ ಏನ್ ಹೇಳ್ತೀರಪ್ಪ. ಇಂತವರಿಗೆ ನಾನು ಏನ್ ಉತ್ತರ ಕೊಡ್ಲಿ?"
[ಎಲ್ಲಾ ಸೇರಿ ನಕ್ಕೆವು, ಇಂತಹ ಪ್ರಶ್ನೆಗಳು ನಮ್ಮೆಲ್ಲರಿಗೂ ಒಂದಲ್ಲ ಒಂದು ಬಾರಿ ಖಂಡಿತ ಬಂದಿವೆ]
...
ಪಾಂಡು: "ನನ್ನ ರಿಲೇಟಿವ್ ಮದ್ವೆಗೆ ಹೋಗಿದ್ದಾಗ, ನನಗೊಂದು ಪ್ರಶ್ನೆ, 'ನಿಮ್ಮ ಕಂಪನಿ ಏನ್ ಮಾಡ್ತದೆ?'. ಏನ್ ಉತ್ತರ ಕೊಡ್ಲಿ ನಾನು? ನಾನು ಹೇಳಿದ್ರೂ ಇವರಿಗೆ ಏನ್ ಅರ್ಥ ಆಗುತ್ತೆ? ನಾನಂದೆ 'ನಾವು, ಚಿಪ್ ಮ್ಯಾನ್ಯುಫ್ಯಾಕ್ಚರ್ ಮಾಡ್ತೀವಿ, ಎಲೆಕ್ಟ್ರೋನಿಕ್ ಐಟೆಮ್ಸ ಒಳಗಡೆ ಇರೋ ಚಿಪ್ಸ್ ತಯಾರು ಮಾಡ್ತೀವಿ '. ಅವರಿಗೆ ಏನು ಅರ್ಥ ಆಯ್ತೋ, ದೇವರಿಗೆ ಗೊತ್ತು."

ಗಣೇಶ (ನಗುತ್ತಾ ಹೇಳಿದ): "ಬಹುಶ ತೆಂಗಿನ ಕಾಯಿ ಚಿಪ್ಪ್ ತರಹದ್ದೇ ಇದೇನೋ ಎಲೆಕ್ಟ್ರೋನಿಕ್ ಚಿಪ್ಸ್ ಅಂದುಕೊಂಡಿರ್ಬೆಕು"

[ಎಲ್ಲಾ ನಕ್ಕೆವು]

ವೆಂಕಿ: "ಬನಾನ ಚಿಪ್ಸ್ ಅಂದುಕೊಂಡಿರ್ತಾರೆ"

[ಎಲ್ಲಾ ಮತ್ತೆ ನಕ್ಕೆವು]

ಪಾಂಡು: "ಹೌದ್ರೋ, ಟೆಕ್ನಿಕಲಿ ಇವರಿಗೆ ಏನಾದ್ರೂ ಅರ್ಥ ಆದ್ರೆ ಹೇಳಬಹುದು. ಮನೇಲಿ ಕೂತು ಅಡಕೆ ಚಿಪ್ಪು ಬಿಡಿಸೋರಿಗೆ, ನಾನು ಚಿಪ್ಸ್ ಅಂದ್ರೆ ಏನು ಅರ್ಥ ಆಗುತ್ತೆ"
...
ವಸೀಮ: "ಮೊನ್ನೆ ಮೆಖ್ಯಾನಿಕಲ್ ಬ್ರ್ಯಾಂಚ್ ನ ಸುಮೋದ್ ಸಿಕ್ಕಿದ್ದ. ಅವರಿಗೆಲ್ಲ ನಾವು ಮಾಡೋ ಕೆಲ್ಸ ಏನು ಅಂತ ಗೊತ್ತಿಲ್ಲ ಕಣ್ರೋ. ಹಾಗೆ ಮಾತಾಡ್ತಾ ಮಾತಾಡ್ತಾ, ಬಡ್ಡಿಮಗ ಏನಂದ ಗೊತ್ತ, 'ನಿಮಗೇನ್ರಪ್ಪ ಬಿಳಿ ಡಬ್ಬಿ ಮುಂದೆ ಆರಾಮಾಗಿ ಕೂತ್ಕಂಡು ಕೀಬೋರ್ಡ್ ವತ್ತಿದ್ರಾಯ್ತು, ನಮ್ಮ ತರ ಮಶೀನ್ ಜೊತೆ ಕಷ್ಟ ಪಡೋದು ಬ್ಯಾಡ ' ಅಂತೆ. ಕಪಾಳಕ್ಕೆ ಬಿಡಲಾ ಎರಡು ಅನ್ನಿಸ್ತು ನನಗೆ.."
...
ಸಂತೋಷ: "ನನ್ನ ಹೈಸ್ಕೂಲ್ ಫ್ರೆಂಡ್ ಸಿಕ್ಕಿದ್ದ ಒಂದ್ ಸರ್ತಿ, ಅವ್ನು ಹೊಟೇಲ್ ಮ್ಯಾನೇಜ್ಮೆಂಟ್ ಮಾಡ್ಕೋಂಡು ಈಗ ಡೊಮಿನೊಸ್ ನಲ್ಲಿ ಮ್ಯಾನೇಜರ್ ಆಗಿ ವರ್ಕ್ ಮಾಡ್ತಾ ಇದ್ದಾನೆ. ಮಾತಾಡ್ತಾ ಮಾತಾಡ್ತಾ, ನಮ್ಮ್ ಮನೇಲಿ ಹಳೇ ಓಮಿನಿ ಕಾರ್ ವಿಷ್ಯ ಬಂತು, ಏನಂತೆ, 'ನಿನಗೇನಪ್ಪಾ, ಸಾಫ್ಟ್ವೇರ್ ಎಂಜಿನಿಯರ್, ನೀ ಹೋಂಡಾ ಸಿ.ಆರ್.ವಿ ಬೇಕಾದ್ರೂ ಕೊಂಡ್ಕೊ ಬಹುದು, ನಮ್ಮ ತರನ ' ಅಂತೆ. ಏನ್ ಅಂದ್ಕೊಂಡಿದಾರೋ ಗೊತ್ತಿಲ್ಲ ಇವ್ರೆಲ್ಲ, ಸಿ.ಆರ್.ವಿ ಸಾಯ್ಲಿ ನಮ್ಮತ್ರ ವಿ.ಸಿ.ಆರ್ ತಗಳ್ತಿವಿ ಅಂದ್ರೂ ದುಡ್ಡಿಲ್ಲ."

ಪಾಂಡು: "ಹೌದೋ ಮಾರಾಯ, ತಿಂಗಳ ಕೊನೇಲಿ ಕೈ ಖಾಲಿ, ದುಡ್ಡು ಎಲ್ಲಿ ಹೋಗ್ತಾ ಇದೇ ಅಂತನೇ ಗೊತ್ತಾಗ್ತಾ ಇಲ್ಲ. ನಮ್ಮಪ್ಪ, ಮದ್ವೆ ಮಾಡ್ಕೊ ಅಂತ ಬೇರೆ ಹೇಳ್ತಾ ಅವ್ನೆ. ಬರೋ ಸಂಬಳದಲ್ಲಿ ನನ್ನೊಬ್ಬನ್ನ ಸಾಕಿ ಕೊಳ್ಳುವುದೇ ಕಷ್ಟ ಆಗಿದೆ, ಇನ್ನು ಮದ್ವೆ ಮಾಡ್ಕೋಂಡ್ರೆ ಕೇಳ್ಬೆಕ."
...
ಗಣೇಶ: "ನನ್ನ ಮಾವ, ತಮ್ಮ ಯಾವ್ದೇ ಕಂಪ್ಯೂಟರ್ ಪ್ರಾಬ್ಲಂ ಇದ್ರೂ ಪದೇ ಪದೇ ನನಗೇ ಫೋನ್ ಮಾಡೋದು ಮಾರಾಯ.  ಬರೇ ಕಂಪ್ಯೂಟರ್ ಒಂದೇ ಅಲ್ಲ ಮತ್ತೆ, ಯಾವ ಎಲೆಕ್ಟ್ರೋನಿಕ್ ಐಟೆಮ್ ಪ್ರಾಬ್ಲಂ ಇದ್ರೂ. ಅಲ್ಲ, ನಮ್ಮನ್ನೇನು ಕಂಪ್ಯೂಟರ್ ರಿಪೇರಿ ಅಂಗಡಿಯವರು ಅಂದ್ಕೊಂಡಿದ್ದಾರೋ ಏನೋ ಗೊತ್ತಿಲ್ಲ. ಎಂಜಿನಿಯರ್ ಅಂದ್ರೆ ಸಾಕು, ಬಹುಶ ನಮಗೆ ಎಲ್ಲಾ ಗೊತ್ತಿರಬೇಕು. ಮೊನ್ನೆ ಅವರ ಮನೇಲಿ ಟಿ‌ವಿ ಹಾಳಾಗಿದೆ ಏನ್ ಮಾಡೋದು ಅಂತ ಕೇಳೋಕೆ ನನಗೆ ಫೋನ್ ಮಾಡಿದ್ದ. ಟಿ‌ವಿ ರಿಪೇರಿ ಅಂಗಡಿಗೆ ತಗಂಡು ಹೋಗಿ ತೋರ್ಸು ಅಂದೆ."
...
ನಾನು: "ಯಾರಿಗೂ ಒನ್-ಸೈಟ್ ಪ್ರಾಬ್ಲಂ ಇನ್ನೂ ಶುರು ಆಗಿಲ್ಲ ಅಂತ ಕಾಣುತ್ತೆ ಅಲ್ವಾ. ನನ್ನ ಮಾವ, ಮೊನ್ನೆ ಮನೆಗೆ ಹೋದಾಗ, 'ನಾಲ್ಕು ವರ್ಷ ಆಯ್ತಲ ನೀನು ದುಡಿಯುಕೆ ಶುರು ಮಾಡಿ, ಎಲ್ಲೂ ಹೊರದೇಶಕ್ಕೆ ಹೋಗೋ ಛಾನ್ಸ್ ಸಿಗ್ಲಿಲ್ವ? ' ಅಂದ. ನಾನ್ ಹೇಳ್ದೆ, 'ಇಲ್ಲ ಮಾವ, ನಾನು ಮಾಡ್ತಾ ಇರೋ ಪ್ರಾಜೆಕ್ಟ್ ನಲ್ಲಿ ಒನ್-ಸೈಟ್ ರಿಕ್ವೈರ್ಮೆಂಟ್ ಇಲ್ಲ. ನಾವು ನಮ್ಮ ಕ್ಲಯಿಂಟ್ ಜೊತೆ ಅಷ್ಟೊಂದು ಇಂಟರ್ಯಾಕ್ಟ್ ಮಾಡೋಲ್ಲ ' ಅಂದೆ. ಅದಿಕ್ಕೆ ನನ್ನ ಮಾವ 'ನೋಡು, ದೀಪ ಗೊತ್ತಲ್ಲ ನಿಂಗೆ, ನನ್ನ ಅತ್ಗೆ ಮಗಳು, ಸಣ್ಣ ಹಳ್ಳಿಲಿ ಓದಿ ಬಂದ್ರೂ, ಒಳ್ಳೆ ಕಂಪನಿ ಸೇರಿ, ಕಷ್ಟ ಪಟ್ಟು ದುಡದ್ಲು, ಒಂದೇ ವರ್ಷದಲ್ಲಿ ಕಂಪನಿ ಅವಳನ್ನ ಅಮೆರಿಕಾಕ್ಕೆ ಕಳಿಸ್ತು.' ಅಂದ. ಇದಕ್ಕೆ ಏನ್ ಹೇಳಲಿ ನಾನು. ಇವರ ಪ್ರಕಾರ ನಾವೆಲ್ಲ ಕೆಲಸಕ್ಕೆ ಬಾರದವರು ಅಂತ, ಬ್ರೇನ್ ಇಲ್ಲಾದವ್ರು ಅಂತ. ಒಂದ್ ಅರ್ಥದಲ್ಲಿ, ಇವರ ಪ್ರಕಾರ, ನಾವೆಲ್ಲ ಹಾರ್ಡ್ ವರ್ಕ್ ಮಾಡುವವರಲ್ಲ, ಸ್ಮಾರ್ಟ್ ಇಲ್ಲ, ಅದಿಕ್ಕೆ ನಮಗೆ ಇಂಡಿಯಾನೇ ಗತಿ."
...
ಪ್ರವೀಣ: "ನನ್ನ ಬಾವ ಮೊನ್ನೆ ಸಿಕ್ಕಿ, 'ನೀನು ಎಚ್.ಪಿ. ಲಿ ಇದ್ದೀಯಲ್ವೋ, ಅಲ್ಲಿ ನನ್ನ ಫ್ರೆಂಡ್ ತಂಗಿ ಶ್ಯಾಮಲನೂ ಇದ್ದಾಳೆ, ಸಿಕ್ತಾಳ ನಿಂಗೆ ' ಅಂದ್ರು. ಅಯ್ಯ, ಇದ್ಯಾವ್ ತರ, ಎಚ್.ಪಿ. ನಲ್ಲಿ ಎಷ್ಟು ಶ್ಯಾಮಲಾ ಇದ್ದಾರೋ, ಎಲ್ಲಾ ನಂಗೆ ದಿನಾ ಸಿಕ್ತ ಇರ್ತಾರ. ನಮಗೆ ನಮ್ಮ ಟೀಮ್ ಬಿಟ್ಟು ಬೇರೆ ಯಾರ ಮುಖನೂ ಪರಿಚಯ ಇರೊಲ್ಲ ಅಲ್ಲಿ, ಅದ್ರಲ್ಲಿ, ಇವರ ಶ್ಯಾಮಲಾ ಅಂತೆ ಖರ್ಮ."
...
ವಸೀಮ: "ಬಿಡ್ರೋ ಇದು ಮುಗಿಯೊಲ್ಲ ಕಥೆ, ಮಾತಾಡ್ತಾ ಹೋದ್ರೆ ಮಾತಾಡ್ತಾ ಇರ್ತೀವಿ. ಎಲ್ಲಾ ಬಂದ್ರಲ್ಲಾ. ಎಲ್ಲಿಗಾದ್ರೂ ಹೋಗೋಣ"

ಪಾಂಡು: "ಮೂವಿಗೆ ಹೋಗುವ?"

ವೆಂಕಿ: "ಯಾವ ಮೂವಿ ಬಂದಿದೆ, ಹೊಸದಾಗಿ?"

ನಾನು: "ಜಾನ್ ಕಾರ್ಟರ್, ಹೊಸ ಇಂಗ್ಲಿಷ್ ಮೂವಿ ಬಂದಿದೆ, ಚೆನ್ನಾಗಿದೆಯಂತೆ, ಹೋಗೋಣ?"

ಶಿವು: "ಫಿಕ್ಷನ್ ಮೂವಿ ಕಣೋ, ಬೋರು, ಬೇರೆ ಯಾವುದಿದೆ?"

ನಾನು: "ಫಿಕ್ಷನ್ ಮೂವಿ ಚೆನ್ನಾಗಿರುತ್ತೆ, ಬಾರೋ ಸುಮ್ಮನೆ, ಹೋಗೋಣ ಅದಿಕ್ಕೆ"

ವಸೀಮ: "ಸರಿ, ಎಲ್ಲಾ ನಡಿರೋ, ಹೋಗೋಣ, ಇಲ್ಲಿ ಕೂತ್ಕಂಡು ಟೈಮ್ ವೇಸ್ಟ್ ಮಾಡೋದು ಬ್ಯಾಡ"

[ಎಲ್ಲಾ ಎದ್ದು ಸಿನಿಮಾ ನೋಡಲು ಹೊರಟೆವು]

...
ಹಲೋ, ಇಲ್ಲಿಯ ಸಂಭಾಷಣೆ ಕೇಳಿ ಖುಷಿ ಆಯ್ತಲ್ಲವೇ, ಇನ್ನು ಸ್ವಲ್ಪ ಸೀರಿಯಸ್ ಮಾತಾಡೋಣವೇ.

ಸ್ವಾತಂತ್ರ್ಯ ಸಿಕ್ಕಿ 45 ವರ್ಷ ಕಳೆದಿದ್ದರೂ, ೧೯೯೧ ವರೆಗೆ ಭಾರತದ ಆರ್ಥಿಕ ಪರಿಸ್ಥಿತಿ ಸ್ವಲ್ಪವೂ ಸುಧಾರಿಸಿರಲಿಲ್ಲ. ಆರ್ಥಿಕ ಬೆಳವಣಿಗೆ ಅತೀ ಗೌಣ, ಸ್ಥಳೀಯ ಉದ್ಯಮಗಳು ಹೇಳಿಕೊಳ್ಳುವ ಮಟ್ಟಿಗೆ ನಮ್ಮ ಆರ್ಥಿಕತೆ ಬೆಳೆಸುವಲ್ಲಿ ಸಹಾಯ ಮಾಡಲಾರದಾದವು, ಜಿ.ಡಿ.ಪಿ(GDP) ಬೆಳವಣಿಗೆ ಅತೀ ಗೌಣ. ಇಂತಿರುವಾಗ, ಭಾರತ ಸರ್ಕಾರ, ಆರ್ಥಿಕತೆಯ ಅಭಿವೃದ್ದಿಗಾಗಿ, ಇನ್ಫ್ರಾಸ್ಟ್ರಕ್ಚರ್, ಆಟೋಮೊಬೈಲ್, ಟೂರಿಸಂ, ಇನ್ಫಾರ್ಮಶನ್ ಸೈನ್ಸ್ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ಬೆಳವಣಿಗೆ ಬಯಸಿ, ಬೃಹತ್ ಎಮ್.ಏನ್.ಸಿ(MNC) ಕಂಪನಿಗಳನ್ನು ಬರಮಾಡಿಕೊಂಡಿತು. ಈ ಎಮ್.ಏನ್.ಸಿ ಕಂಪನಿಗಳು ಭಾರತ ಆರ್ಥಿಕತೆ ಮೇಲೆ ತಮ್ಮ ಅಗಾಧ ಬಂಡವಾಳ ಸುರಿದು, ಬೆಳೆಸಿ ಇಂದು ಭಾರತ ಒಂದು ಪರಿಪೂರ್ಣ ಸ್ವತಂತ್ರ ರಾಷ್ಟ್ರ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವಂತೆ ಮಾಡಿವೆ. ಇದನ್ನು ನಾವೆಲ್ಲಾ ಮರೆಯುವಂತಿಲ್ಲ.

ಗ್ಲೋಬಲೈಸೇಶನ್(ಜಾಗತೀಕರಣ) ಹೆಸರು ಕೇಳಿದ್ದೀರಾ? ಇದು, ಜಾಗತಿಕ ಮಟ್ಟದಲ್ಲಿ ಒಂದು ದೇಶದ ಸಂಸ್ಕೃತಿ, ಜನಜೀವನ ಮತ್ತು ಅರ್ಥಿಕತೆಯನ್ನು ಬೆಳೆಸುವ, ಅಭಿವೃದ್ದಿಪಡಿಸುವ ಒಂದು ಅಮೋಘ ಅಂಶ. ಭಾರತದ, ಅತೀ ಉನ್ನತ ಸ್ಥಾನ, ರಾಷ್ಟ್ರಪತಿ/ರಾಷ್ಟ್ರಪತ್ನಿಯ ಆಡಳಿತ ಕೇವಲ ಭಾರತದ ಪರೀದಿಯ ಒಳಗೇ ನಡೆಯಬಹುದಷ್ಟೇ, ಆದರೆ ಒಬ್ಬ ಸಾಫ್ಟ್ವೇರ್ ಇಂಜಿನಿಯರ್ ಈತನಿಗೆ ಒಂದು ಲಿಮಿಟ್ ಎಂಬುದಿಲ್ಲ, ಇವನೊಬ್ಬ ಜಾಗತೀಕರಣದ ಅಂಗ. ನನಗೆ ಹೆಮ್ಮೆ ಎನ್ನಿಸುತ್ತದೆ ಜಗತ್ತಿನಾದ್ಯಂತ ನಮ್ಮ ದೇಶದ ಸಂಸ್ಕೃತಿ, ಜನಜೀವನವನ್ನು ಎತ್ತಿ ಹಿಡಿಯುವಲ್ಲಿ ನಾನೂ ಒಬ್ಬ ಪಾಲುದಾರ ಎಂದು ಹೇಳಿಕೊಳ್ಳಲು.
ಭಾರತದ ಇಂಜಿನಿಯರ್ ಗಳು ತಮ್ಮ ಬಡತನದಲ್ಲೂ ಬೆಳೆದು ಅಮೇರಿಕದಂತಹ ಬೃಹತ್ ರಾಷ್ಟ್ರದ ಪ್ರಜೆಗಳ ನಿದ್ದೆಗೆದಿಸುವಂತೆ ಅವರ ಕೆಲಸ ಕಸಿದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದಮೇಲೆ, ಒಬ್ಬ ಇಂಜಿನಿಯರ್ ಗೆ ಎಂತಹ ಶಕ್ತಿ, ಯುಕ್ತಿ ಇರಬೇಡ ನೀವೇ ಯೋಚಿಸಿ. ನಾವೆಲ್ಲ ತಿರುಗಿ ನಿಮ್ಮ ಕೆಲಸಕ್ಕೆ ಕೈ ಹಾಕಿದರೆ ನಿಮ್ಮ ಪರಿಸ್ಥಿತಿ ಒಮ್ಮೆ ಯೋಚಿಸಿ ನೋಡಿದ್ದೀರಾ? ಇಂದು ಭಾರತ ಒಂದು ಜಾಗತಿಕ ಮಟ್ಟದಲ್ಲಿ ಎಲ್ಲರ ಸರಿಸಮಾನ ನಿಲ್ಲುವ ಯೋಗ್ಯತೆ ಹೊಂದಿದೆ ಎಂದಾದರೆ ಅದರ ಹಿಂದೆ ಇರುವ ಪ್ರಮುಖ ಶಕ್ತಿ ಇಂಜಿನಿಯರ್ ಗಳದ್ದು.

ನಾವು ಸಾಫ್ಟ್ವೇರ್ ಎಂಜಿನಿಯರ್ಸ, ನಾವು ಸಾಫ್ಟ್ ಇರಬಹುದು, ಈಗ ನಮಗೆಲ್ಲ ರಿಸೆಷನ್ ನಡೀತಾ ಇರಬಹುದು, ನೀವು ತಿಳಿದಂತೆ ನಮ್ಮ ಕೆಲಸ ದೈಹಿಕ ಶ್ರಮದಾಯಕ ಅಲ್ಲದೇ ಇರಬಹುದು, ಆದರೆ, ರಿಸೆಶನ್ ನಡಿತ ಇರೋದು ನಮ್ಮ ವೃತ್ತಿಗೆ, ನಮ್ಮ ವಿದ್ಯೆಗಲ್ಲ, ನಮಗೂ ಸ್ವಾಭಿಮಾನ ಇದೆ, ನಾವೂ ಮನುಷ್ಯರೇ, ನಮಗೂ ಸ್ವಲ್ಪ ಮರ್ಯಾದಿ ಕೊಡಿ.


{ಮೇಲಿನ ಸಂಭಾಷಣೆಯಲ್ಲಿ ಹೇಳಲಾಗದ-ಕೇಳಲಾಗದ ಮಾತುಗಳನ್ನು ಮಧ್ಯ ಮಧ್ಯ ಹಾರಿಸಿ ಬರೆದಿದ್ದೇನೆ, ಸ್ವಲ್ಪ ಅಡ್ಜಸ್ಟ್ ಮಾಡ್ಕೊಳಿ. ಈ ಮೇಲಿನ ಸಂಭಾಷಣೆಯಲ್ಲಿ ಬರುವ ಪಾತ್ರಗಳು ನನ್ನ ಸ್ನೇಹಿತರು,
ನಾನು - ಅಂದರೆ ಕಿರಣ್
ವಸೀಮ - ವಸೀಮ್ ಫಿರೋಜ್
ಪ್ರವೀಣ - ಪ್ರವೀಣ್ ಶೆಟ್ಟಿ 
ಪಾಂಡು - ಪಾಂಡುರಂಗ್ ಪೈ
ವೆಂಕಿ - ವೆಂಕಟೇಶ್ ನಾಯಕ್ 
ಶಿವು - ಶಿವಪ್ರಸಾದ್ ನಾಯಕ್ 
ಗಣೇಶ್ - ಗಣೇಶ್ ರಾವ್
ಸಂತೋಷ - ಸಂತೋಷ್ ಪೈ}

12 comments:

 1. ಮಸ್ತ್.. ಸೂಪರ್.. ಲೈಕ್ಡ್ ಇಟ್!!

  ReplyDelete
  Replies
  1. ಧನ್ಯವಾದಗಳು ಹರಿಶಣ್ಣ.. :)

   Delete
 2. ಸೈದ್ದಾಂತಿಕವಾಗಿ ನಾನೂ ವಿರೋಧಿಸ್ತೆ ಸಾಫ್ಟವೇರ್ ಇಂಜಿನೀಯರುಗಳ..

  ಬರವಣಿಗೆ ಚೆನ್ನಾಗಿದ್ದು .

  ReplyDelete
  Replies
  1. ಧನ್ಯವಾದಗಳು ಕಿಣ್ಣಣ್ಣ, ಆದರೆ ಸಾಫ್ಟ್ವೇರ್ ಎಂಜಿನಿಯರ್ ಗಳ ಬಗ್ಗೆ ನಿಮ್ಮ ಸಿದ್ಧಾಂತ ಏನೆಂಬುದು ತಿಳಿಯಬಹುದೇ?

   Delete
 3. ಇಂಜಿನೀಯರ್ಸ್ ಗೆ ಆ ಥರ ಪ್ರಶ್ನೆಗಳನ್ನ ಕೆಳೋದನ್ನ ನಾನು ತುಂಬಾ ಕಡೆ ಕೇಳಿದ್ದೇನೆ. ಲೇಖನ ಇಷ್ಟವಾಯಿತು ಕಿರಣ್ ...

  ReplyDelete
  Replies
  1. ಧನ್ಯವಾದಗಳು ಸಂಧ್ಯಾರವರೆ..

   Delete
 4. ಲೇಖನ ಚೆನ್ನಾಗಿ ಮೂಡಿ ಬಂದಿದೆ. ಅಭಿನಂದನೆಗಳು.
  ಸಾಫ್ಟ್ವೇರ್ ಇಂಜಿನಿಯರ್ (ಅದೂ ಬೆಂಗಳೂರಿನಿಂದ) ಅಂದರೆ "ದುಡ್ಡು ಇರೋರು - ಎಷ್ಟು ಕೇಳಿದ್ರು ಪ್ರಶ್ನಿಸದೇ ದುಡ್ಡು ಬಿಚ್ಚೋರು" ಅನ್ನುವುದು ಬಹಳಷ್ಟು ಮಂದಿಯ ಅನಿಸಿಕೆ. ಆದರೆ, ಅವರೂ ಅನ್ಯರಂತೆ ಕಷ್ಟ ಪಟ್ಟು ದುಡಿಯೋರು ಅನ್ನೋದು ಕೆಲವರಿಗೆ ಮಾತ್ರ ಮನವರಿಕೆಯಾಗುತ್ತದೆ. ಅನ್ಯರ ತಲೆ ಬುರುಡೆಯಲ್ಲಿ ಅದು ಸುಲಭವಾಗಿ ಇಳಿಯದ ಮಾತು.

  ReplyDelete
  Replies
  1. ಸರಿಯಾಗಿ ಹೇಳಿದಿರಿ ವಿನಯಅವರೆ.. ಧನ್ಯವಾದಗಳು..

   Delete
 5. ಚೆನ್ನಾಗಿ ಬರೀತಿರಿ. ನಿಮ್ಮ ಎಲ್ಲಾ ಬರಹಗಳನ್ನು ಓದಿದೆ.  ಬರೆಯುತ್ತಿರಿ..

  ReplyDelete
  Replies
  1. ಧನ್ಯವಾದಗಳು ವಿ.ರಾ.ಹೆ ಅವರೆ. ಖಂಡಿತ ನನ್ನ ಬರಹಗಳನ್ನು ಮುಂದುವರಿಸುತ್ತೇನೆ. ಧನ್ಯವಾದಗಳು ಇನ್ನೊಮ್ಮೆ.

   Delete
 6. ಚೆನ್ನಾಗಿದೆ! ನಾನು ಬಹಳ ಮೇಲಿನ ಸಂದರ್ಭಗಳಿಗೆ ಸಿಕ್ಕಿ ಹಾಕಿಕೊಂಡಿದ್ದೇನೆ! ಒಮ್ಮೆ ನನಗೆ ಗೊತ್ತಿರೋರು ಒಂದು ಲಕ್ಷ ಕೊಡ್ತೀನಿ ಎಲ್ಲಾದರು ಕೆಲಸ ಕೊಡ್ಸಪ್ಪ ಅಂದಿದ್ದರು ಅವರ ಮಗನ percentage 45!!!

  ReplyDelete