Thursday, March 1, 2012

ಕೆಲವರು, ಎಲ್ಲಿಯೂ ಸಲ್ಲುವವರು

ಹೀಗೆ ಇಂಟರ್ನೆಟ್ ನಲ್ಲಿ ಹುಡುಕುತ್ತಿದ್ದಾಗ, "ಮಾರ್ಟಿನ್ ಲಿಂಡ್ಸ್ಟ್ರೋಮ್" ರವರ ಒಂದು ಲೇಖನ ತುಂಬಾ ನನ್ನ ಗಮನ ಸೆಳೆಯಿತು. ಆ ಪೂರ್ತಿ ಲೇಖನವನ್ನು ಇಲ್ಲಿ ಕನ್ನಡಕ್ಕೆ ಅನುವಾದಿಸಿ ಬರೆಯಬೇಕೆಂದಿದ್ದೇನೆ. ಅನುವಾದದಲ್ಲಿ ನನಗೆ ಅನುಭವ ಬಹಳ ಕಡಿಮೆ. ಒಬ್ಬ ಲೇಖಕ ಆತನ ಅಗಾಧ ವಿಚಾರಗಳನ್ನು ಲೇಖನವಾಗಿ ಬಟ್ಟಿ ಇಳಿಸಿರುವಾಗ, ನಾನೊಬ್ಬ ಓದುಗನಾಗಿ, ನನ್ನ ವಿಚಾರ ವಿಮರ್ಶೆಗಳ ಪರಿಧಿಯಲ್ಲಿ ಅದರ ರುಚಿಯನ್ನು ಸವಿಯಬಹುದೇ ಹೊರತು, ಆತನ ಸಮಾನವಾಗಿ ಆತನ ವಿಚಾರಗಳನ್ನು ಅರ್ಥಮಾಡಿಕೊಳ್ಳುವುದು ಜತೆಗೆ ಅಷ್ಟೇ ಪರಿಪೂರ್ಣವಾಗಿ ಅನುವಾದಿಸುವುದು ಕಷ್ಟಸಾಧ್ಯ. ಆದರೂ, ಅಂತಹ ಉತ್ತಮ ಲೇಖನವನ್ನು ಅನುವಾದಿಸದೇ ಬಿಡಲು ನನಗೆ ಮನಸ್ಸಿರಲಿಲ್ಲ, ಹಾಗಾಗಿ ಇದೊಂದು ಪ್ರಯತ್ನ ಮಾಡುತ್ತಿದ್ದೇನೆ, ಕಷ್ಟವಾದಲ್ಲಿ ದಯವಿಟ್ಟು ಸಹಿಸಿಕೊಳ್ಳಿ.
ಮುಂದಿನ ಸಾಲುಗಳು ಮಾರ್ಟಿನ್ ಲಿಂಡ್ಸ್ಟ್ರೋಮ್ ರವರ ಲೇಖನದಿಂದ ನೇರ ಅನುವಾದ,

ಹಿಂದಿನವರ್ಷ ಸುಮಾರು 300 ದಿನಗಳೂ ನಾನು ಪ್ರವಾಸದಲ್ಲಿದ್ದೆ, ಹಲವಾರು ಜನರನ್ನು ಭೇಟಿಮಾಡುವ ಸೌಭಾಗ್ಯ ನನ್ನದಾಯಿತು. ಯಾವಾಗಲೂ ಸಂತೋಷದಿಂದಿರುವ, ಸುಖಿ ಜನರನ್ನು ನೋಡಿ ಮಾತನಾಡಿಸಿದ್ದೇನೆ. ಅವರು ಯಾರು, ಎಲ್ಲಿದ್ದಾರೆ, ಹೇಗಿದ್ದಾರೆ ಎಂಬೆಲ್ಲ ವಿಚಾರಗಳನ್ನು ತಿಳಿಸಿದರೆ ನಿಮಗೆ ಆಶ್ಚರ್ಯವಾಗಬಹುದು.


ಅದೊಂದು ದಿನ, ನಾನು ಟ್ಯಾಕ್ಸಿಯಲ್ಲಿ ಕುಳಿತು ಮನ್ಹಾಟನ್ ರಸ್ತೆಯಲ್ಲಿ ಸಂಚರಿಸುತ್ತಿದ್ದಾಗ, ನನ್ನ ಟ್ಯಾಕ್ಸಿ ಡ್ರೈವರ್ ಜಗತ್ತಿನ ಆಗುಹೋಗುಗಳ ಬಗ್ಗೆ ತುಂಬಾ ವಿಮರ್ಶಾತ್ಮಕವಾಗಿ ಮಾತನಾಡುತ್ತಿದ್ದ, ಬಹಳ ಬೇಸರವ್ಯಕ್ತಪಡಿಸುತ್ತಿದ್ದ, ನೊಂದು ನುಡಿಯುತ್ತಿದ್ದ.  "ಜಗತ್ತಿನೆಲ್ಲೆಡೆ ಬರೀ ವಿಕೋಪಗಳೇ ಸಂಭವಿಸುತ್ತಿವೆ, ಯಾರನ್ನೂ ನಂಬಲಾಗುತ್ತಿಲ್ಲ, ಏನನ್ನೂ ಮಾಡಲಾಗುತ್ತಿಲ್ಲ. ಪ್ರವಾಹ ಅಲ್ಲದಿದ್ದರೆ ತ್ಸುನಾಮಿ; ಎಲ್ಲೆಲ್ಲೂ ಬೆಂಕಿ, ಬಿರುಗಾಳಿಗಳು, ಭೂಕಂಪಗಳು... ಇವೆಲ್ಲ ಸಾಲದೆಂಬುದಕ್ಕೆ ಜನರ ದಂಗೆ, ಬಾಂಬ್ ಅಟ್ಯಾಕ್ ಗಳು, ಬರೀ ಟೆರ್ರರಿಸಮ್, ಹಿಂಸೆ, ಯುದ್ಧ, ಕಂಡಕಂಡಲ್ಲಿ ಗುಂಡಿನ ಕಾಳಗಗಳು." ಆತ ಬೇಸರದಿಂದ ತನಗೆ ತಾನೇ ತಲೆಯಾಡಿಸುತ್ತಾ ಗೊಣಗುತ್ತಿದ್ದ, "ಜಗತ್ತು ಎಂತಹ ಪರಿಸ್ಥಿತಿಗೆ ಬಂದುಬಿಟ್ಟಿದೆ".


ಒಂದುರೀತಿಯಲ್ಲಿ ಹೇಳುವುದಾದರೆ, ಆತ ಹೇಳಿದ್ದನ್ನು ಎಲ್ಲೂ ಅಲ್ಲಗಳೆಯುವಂತಿಲ್ಲ. ಇವೆಲ್ಲ ವಿಷಯ ತಿಳಿಯಲು ಹೆಚ್ಚಿನ ಶ್ರಮವಹಿಸುವ ಅಗತ್ಯವಿಲ್ಲವಲ್ಲ, ಮೇಲಾಗಿ ಇವೆಲ್ಲ ಪತ್ರಿಕೆಯ ಮುಖಪುಟ ಲೇಖನಗಳೇ ತಾನೆ - ಜಗತ್ತು ಸಧ್ಯ ಯಾವ ಭಯಾನಕ ಸ್ಥಿತಿಯಲ್ಲಿದೆ ಎಂದು. ಆದರೆ ಒಮ್ಮೆ ಯೋಚಿಸಿ ನೋಡಿ: ನಿಜಕ್ಕೂ ಜಗತ್ತು ನಾವೆಣಿಸಿದಷ್ಟು ಕೆಟ್ಟ ಸ್ಥಿತಿಯಲ್ಲಿದೆಯೇ?


ನನ್ನ ಕೆಲಸ ನನಗೆ ಸ್ವಲ್ಪ ಹೊಸದು, ಹಾಗಾಗಿ ಅದರಿಂದ ನನಗೆ ಬಹಳ ಅನುಕೂಲಗಳಾಗಿವೆ ಎನ್ನಬಹುದು. ಮೊದಲನೆಯದಾಗಿ ನನಗೆ ಹಲವಾರು ಹೊಸ ಹೊಸ ಪ್ರದೇಶಗಳನ್ನು ಭೇಟಿಕೊಡುವ ಅವಕಾಶ ಸಿಕ್ಕಿತು -- ಹಿಂದಿನ ವರ್ಷ ಸುಮಾರು 300 ದಿನಗಳೂ ನಾನು ನನ್ನ ಮನೆಯಿಂದ ಹೊರಗೇ ಇದ್ದೆನೆನ್ನಬಹುದು-- ಅಲ್ಲದೆ, ನನ್ನ ರೀಸರ್ಚ್ ನನ್ನನ್ನು ಹಲವಾರು ಮನೆಗಳಿಗೆ ಭೇಟಿನೀಡಲು ಅವಕಾಶ ಮಾಡಿಕೊಟ್ಟಿತು, ಅಲ್ಲಿನ ಜನರೊಂದಿಗೆ ಮಾತನಾಡಲು ಅನುಕೂಲ ಮಾಡಿಕೊಟ್ಟಿತು. ಇದರಿಂದಾದ ಉಪಯೋಗವೇನನ್ನುತ್ತೀರಾ? ನಾನು ಜನರನ್ನು ನೋಡುವ ದೃಷ್ಟಿಕೋನದಲ್ಲಿ ಬದಲಾವಣೆ ತಂದುಕೊಂಡೆ. ನಾನು ನನ್ನನ್ನೂ, ಜನರನ್ನೂ ಪ್ರಶ್ನಿಸತೊಡಗಿದೆ, 'ಯಾಕೆ ಕೆಲವರು ಮಾತ್ರ ಎಲ್ಲೇ ಇದ್ದರೂ ಸುಖಿಯಾಗಿರುತ್ತಾರೆ, ಸಂತೋಷದಿಂದಿರುತ್ತಾರೆ? ಉಳಿದವರಿಗೆ ಯಾಕೆ ಹೀಗಿರಲಾಗುತ್ತಿಲ್ಲ?' 
ಕಳೆದವಾರ ನಾನು ಕೊಲಂಬಿಯಾದ ಒಂದು ಬಡ ಜಿಲ್ಲೆ ಮೆಡೆಲಿನ್ ಗೆ ಭೇಟಿಕೊಟ್ಟಿದ್ದೆ. ಅಲ್ಲಿಯ ಒಂದು ಕಟ್ಟಡದಲ್ಲಿ ಇದೇ ಮೊದಲಬಾರಿಗೆ ಎಸ್ಕಲೇಟರ್(ತಿರುಗುಮೆಟ್ಟಿಲು) ಒಂದನ್ನು ಹಾಕಲಾಗಿತ್ತು. ಈ ಪ್ರದೇಶದಲ್ಲಿ ತಂತ್ರಜ್ನಾನ ಎಷ್ಟೊಂದು ಅಪರಿಚಿತವೆಂದರೆ, ಪ್ರತೀಬಾರಿಯೂ ಹಲವಾರು ಮಂದಿಗೆ ಆ ಎಸ್ಕಲೇಟರ್ ಅನ್ನು ಹೇಗೆ ಬಳಸಬೇಕೆಂಬ ಸರಿಯಾದ ಮಾರ್ಗದರ್ಶನದ ಅವಶ್ಯಕತೆ ಬೀಳುತ್ತಿತ್ತು. ಆದರೆ, ಇವೆಲ್ಲದರನಡುವೆ ನನ್ನ ಗಮನ ಅಲ್ಲಿಯ ಮುಗ್ಧ ಮಕ್ಕಳಮೇಲೆ ಹರಿಯಿತು. ಅವರ ಆನಂದಕ್ಕೆ ಪಾರವೇ ಇರಲಿಲ್ಲ. ಅವು, ಓಡುತ್ತಿರುವ ಮೆಟ್ಟಿಲನ್ನು ಬಹಳ ಮೋಜಿನಿಂದ ನೋಡಿ ನಗುತ್ತಿದ್ದವು. ಭಾಷೆ ಬಾರದಿದ್ದರೂ, ಅವುಗಳ ಸಂತೋಷಕ್ಕೆ ಕಾರಣ ಕೇಳಿದಾಗ, ಕೈಯನ್ನು ಗಾಳಿಯಲ್ಲಿ ಎಸ್ಕಲೇಟರ್ ನಂತೇ ಓಡಿಸಿ ಮತ್ತೆ ಮತ್ತೆ ಸಂತೋಷ ಪಟ್ಟವು.


ಇಂತಹದೇ ಹಲವು ಅನುಭವಗಳು ನನಗೆ ದೂರದ ಥೈಲ್ಯಾಂಡ್ ನ ಹಲವು ಪ್ರದೇಶಗಳಲ್ಲೂ ಆಗಿದೆ. ಆ ಹಳ್ಳಿಗಳಲ್ಲಿ ವಿದ್ಯುತ್ತಿನ ಕೊರತೆ ಇದ್ದರೂ, ಜನಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ ಮನೆಮಾಡಿದ್ದವು. ಮಕ್ಕಳು ರಸ್ತೆಗಳಲ್ಲಿ ಆನಂದದಿಂದ ಆಟವಾಡಿಕೊಳ್ಳುತ್ತಿದ್ದವು. ಅಲ್ಲಿಯ ಒಂದು ದೃಶ್ಯಾವಳಿ ನಮ್ಮಲ್ಲಿಯ ಉಪಪಟ್ಟಣಗಳಲ್ಲೂ ನೋಡಸಿಗುವುದು ಬಹಳ ಅಪರೂಪ. ಒಬ್ಬರು ವಯಸ್ಸಾದವರು ನನಗೆ ಹೇಳಿದ್ದೇನೆಂದರೆ, 'ಕುಟುಂಬಗಳು ಒಗ್ಗಟ್ಟಾಗಿದ್ದಲ್ಲಿ ಸಂತೋಷವೆನ್ನುವುದು ತಾನೇ ದೊರಕುವುದು'. ಆಧುನಿಕ ಜನಜೀವನದಿಂದ ಸ್ವಲ್ಪ ದೂರವಿರುವ ಹಳ್ಳಿಗಳಲ್ಲಿ, ಜನ ತಮಗೆ ಪ್ರಾಪ್ತಿಯಾದುದರಲ್ಲಿ ಸಂತೋಷದಿಂದಿರುವುದು ಹೆಚ್ಚಾಗಿ ಕಂಡುಬಂದಿತ್ತು.


ಇನ್ನೊಮ್ಮೆ ಪ್ರವಾಸದಲ್ಲಿ ನಾನು ಆಸ್ಟ್ರೇಲಿಯದ ಕೆಲವು ಸ್ಥಳಗಳಿಗೆ ಭೇಟಿ ಕೊಟ್ಟಿದ್ದೆ. ಇಲ್ಲಿನ ಜನಜೀವನ ಅಷ್ಟೊಂದು ಹಿಂದುಳಿದಿಲ್ಲ, ಕೆಲವೆಡೆ, ಶೌಚಾಲಗಳು ಆಟೋಮ್ಯಾಟಿಕ್ ಫ್ಲಷ್ ಮಾಡುವ ಸೌಲಭ್ಯಗಳೂ ಇದ್ದವು. ಮಕ್ಕಳೆಲ್ಲಾ ರಸ್ತೆಯಲ್ಲಿ ಫುಟ್ಬಾಲ್ ಆಡುವುದರಲ್ಲಿ ತೊಡಗಿದ್ದರು, ಯಾರಿಗೂ ನನ್ನ ಬಗ್ಗೆಯಾಗಲಿ, ನಾನು ಎಲ್ಲಿಂದ ಬಂದಿದ್ದೇನೆ, ಏನು ರೀಸರ್ಚ್ ಮಾಡುತ್ತಿದ್ದೇನೆ ಎಂದು ಕೇಳುವ ವ್ಯವಧಾನವಿರಲಿಲ್ಲ. ನಾನೇ ಮಾತನಾಡಿಸಿದಾಗ, ವ್ಯಕ್ತಿಯೊಬ್ಬ ಹೇಳಿದ, ಆತನಿಗೆ ಬೇರೆಯವರಿಗೆ ಸಹಾಯ ಮಾಡಿದಾಗ ಸಂತೋಷ ಸಿಗುತ್ತದೆ ಎಂದು. ಆತ ದಿನವೂ ಒಂದೊಂದು ಒಳ್ಳೆಯ ಕಾರ್ಯಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಾನಂತೆ.


ಒಮ್ಮೆ ನಾನು ಚೈನದ ಹೊಸದಾಗಿ ನಿರ್ಮಾಣಗೊಂಡಿದ್ದ ಪ್ರಾಂತ್ಯವೊಂದಕ್ಕೆ ಭೇಟಿಕೊಟ್ಟಿದ್ದೆ. ಸುಮಾರು 60 ಮಿಲಿಯನ್ ಮನೆಗಳಿದ್ದ ಆ ನಗರ 21ನೇ ಶತಮಾನದ ಅತ್ಯಾಧುನಿಕ ಸೌಲಭ್ಯಗಳಿಂದ ಕಟ್ಟಲ್ಪಟ್ಟಿದ್ದವು. ಪ್ರತಿಯೊಂದು ಕೋಣೆಯಲ್ಲೂ ಹೈ-ಸ್ಪೀಡ್ ಇಂಟರ್ನೆಟ್ ನಿಂದ ಕೂಡಿದ ಟೆಲಿವಿಜನ್ ಗಳು, ಪ್ರತೀ ಮನೆಯಲ್ಲೂ ಅತ್ಯಾಧುನಿಕ ಉಪಕರಣೆಗಳು, ಸಲಕರಣೆಗಳು. ಪ್ರತಿಯೊಂದು ವಠಾರವೂ ಇಂಟ್ರಾನೆಟ್ ಸೌಲಭ್ಯ ಹೊಂದಿದ್ದು ಪ್ರತಿಯೊಬ್ಬರೂ ತಮ್ಮ ಅಕ್ಕಪಕ್ಕದವರೊಂದಿಗೆ ಪರಸ್ಪರ ಸಂಪರ್ಕದಲ್ಲಿರಬಹುದಾಗಿತ್ತು. ಆದರೆ ಇಲ್ಲಿಯ ಜನರ ಜೀವನದ ನಡುವೆ ನನ್ನ ಗಮನಕ್ಕೆ ಬಂದ ಒಂದು ಅತೀ ಮುಖ್ಯ ಕೊರತೆಯೆಂದರೆ 'ನಗು', ಯಾರ ಮುಖದಲ್ಲೂ ನೆಮ್ಮದಿ ಇದ್ದಂತೆ ಕಾಣಲಿಲ್ಲ.
ಅಲ್ಲಿ ಸುಮಾರು 2 ವರ್ಷಗಳಿಂದ ವಾಸವಾಗಿದ್ದ ಒಂದು ಚೈನ ದಂಪತಿಗಳಲ್ಲಿ ನೆಮ್ಮದಿಯ ಬಗೆಗಿನ ನನ್ನ ಕೆಲವು ಪ್ರಶ್ನೆಗಳನ್ನು ಕೇಳಿದೆ. ಅವರು ನನಗೆ ಹೀಗೆ ಉತ್ತರಿಸಿದರು "ನಾವು ಚೆನ್ನಾಗಿದ್ದೇವೆ, ಆದರೆ, ಸುಖವಾಗಿರಲು ನಮಗೆ ಜೀವನದಲ್ಲಿ ಇನ್ನೂ ಬಹಳಷ್ಟು ಸಾಧಿಸಬೇಕಿದೆ, ಆಗಲೇ ಜೀವನದಲ್ಲಿ ನಿಜವಾದ ನೆಮ್ಮದಿ ಎನ್ನುವುದು ದೊರಕುವುದು. ನಾವೂ ನೋಡಿದ್ದೇವೆ, ಜನರು ಜೀವನದಲ್ಲಿ ಎಷ್ಟೊಂದು ಸಾಧಿಸಿದ್ದಾರೆ, ಅವುಗಳಲ್ಲಿ ಹಲವಾರು ನಮಗಿನ್ನೂ ದೊರೆತಿಲ್ಲ. ಆದ್ದರಿಂದ ನಾವಿನ್ನೂ ಬಹಳಷ್ಟು ಶ್ರಮಪಟ್ಟು ದುಡಿಯಬೇಕಿದೆ. ನಮಗೆ ಖಂಡಿತ ನಂಬಿಕೆ ಇದೆ, ಒಂದಲ್ಲ ಒಂದು ದಿನ ನಾವು ನಮ್ಮ ಗುರಿ ತಲುಪಿಯೇ ತಲುಪುತ್ತೇವೆ ಎಂದು." ಇವರ ಮಾತುಗಳು ಹೇಗಿದ್ದವೆಂದರೆ, ಇಲ್ಲಿಯ ತನಕ ಇವರು ಗಳಿಸಿದ್ದೆಲ್ಲಾ ಕೇವಲ ಇಂಟರ್ನೆಟ್ ನಲ್ಲಿ ಡೌನ್ಲೋಡ್ ಮಾಡಿದ ಸಾರವಿಲ್ಲದ ಹಾಡುಗಳಂತಿದ್ದವು.
ಆ ನಗರ ನೋಡಲು ಪರಿಪೂರ್ಣವಾಗಿತ್ತು. ಯಾವ ಮಕ್ಕಳೂ ಹೊರಗೆ ರಸ್ತೆಯಲ್ಲಿ ಆಟವಾಡುತ್ತಿರಲಿಲ್ಲ. ಎಲ್ಲರೂ ಶಿಸ್ತಿನ ಜೀವನ ನಡೆಸುತ್ತಿದ್ದರು. ನನಗೆ ಮುಖಕ್ಕೆ ಮಾಸ್ಕ್ ಹಾಕಿಕೊಳ್ಳುವಂತೆ ಹೇಳಲಾಗಿತ್ತು, ನನ್ನ ಶೂ ಗಳನ್ನು ಪ್ಲಾಸ್ಟಿಕ್ನಲ್ಲಿ ಸುತ್ತಿಡುವಂತೆಯೂ, ಕುಳಿತುಕೊಳ್ಳುವಾಗ ಸರಿಯಾಗಿ ಹೊದಿಸಲ್ಪಟ್ಟ ಕುರ್ಚಿಯನ್ನು ಉಪಯೋಗಿಸುವಂತೆಯೂ ತಿಳಿಸಲಾಗಿತ್ತು. ಎಲ್ಲೆಲ್ಲೂ ಶುಭ್ರವಾಗಿದ್ದು, ಯಾವುದನ್ನೂ, ಎಲ್ಲೂ ಕೊಳೆಯಾಗದಂತೆ ಉಪಯೋಗಿಸಲಾಗುತ್ತಿತ್ತು. ನಾನು ಭೇಟಿಕೊಟ್ಟ ಬೀಜಿಂಗ್, ಶಾಂಘಾಯ್ ಪ್ರದೇಶಗಳಲ್ಲಿ ನನಗೆ ಸಿಕ್ಕ ಹೆಚ್ಚಿನ ಅಭಿಪ್ರಾಯಗಳು 'ನೈರ್ಮಲ್ಯ ಜೀವನ ಮಾತ್ರ ಮಾನವನ ಚಿರಕಾಲ ಬದುಕಿಗೆ ಬುನಾದಿ'.


ನನ್ನ ಹಳೆಯ ಮೇಲಾಧಿಕಾರಿಯೊಬ್ಬ ನನಗೆ ಯಾವತ್ತೂ ಹೇಳುತ್ತಿದ್ದ, 'ನಿನ್ನ ಸಂಬಳ ಎಷ್ಟೆಂಬುದನ್ನು ಯಾವತ್ತೂ ಯಾರಲ್ಲಿಯೂ ಹೇಳಿಕೊಳ್ಳಬೇಡ'. ಆತನೂ ಅದನ್ನು ಒಂದು ರಹಸ್ಯವಾಗಿಯೇ ನಡೆಸಿಕೊಂಡಿದ್ದ, ಏಕೆಂದರೆ, ಅವನ ಪ್ರಕಾರ ಜನರಿಗೆ ಬೇರೆಯವರ ಗಳಿಕೆಯ ಮಾಹಿತಿ ದೊರೆತರೆ ಅದು ಅವರನ್ನು ಜೀವನದಲ್ಲಿ ಯಾವತ್ತೂ ಸುಖವಾಗಿರಲು ಕೊಡುವುದಿಲ್ಲವಂತೆ. ಆತ ಹೇಳಿದ್ದು ಸರಿಯಾಗಿತ್ತು, ನನಗೆ ಇತ್ತೀಚೆಗೆ ಇದರಬಗ್ಗೆ ಸರಿಯಾಗಿ ಅರ್ಥವಾಯಿತು. ನಮಗೆ ಬಹಳಷ್ಟು ಮಾಹಿತಿ ಸಿಗುತ್ತ ಹೋದಂತೆಲ್ಲಾ ನಾವು ನಮ್ಮ ಜೀವನದ ನೆಮ್ಮದಿಯನ್ನು ಕಳೆದುಕೊಳ್ಳುತ್ತಾ ಹೋಗುತ್ತೇವೆ, ಇದಕ್ಕೆ ಮುಖ್ಯ ಕಾರಣ, ನಾವು ನಮ್ಮನ್ನು ಬೇರೆಯವರೊಂದಿಗೆ ಹೆಚ್ಚು ಹೆಚ್ಚು ಹೊಲಿಸಿಕೊಳ್ಳತೊಡುಗುತ್ತೇವೆ. ಇದೇ ತತ್ವದೊಂದಿಗೆ ಹೋಲಿಸಿದರೆ, ನನಗನ್ನಿಸುತ್ತದೆ, ಆದಷ್ಟು ಕಡಿಮೆ ಎಲೆಕ್ತ್ರೋನಿಕ್ ವಸ್ತುಗಳ ಸಂಪರ್ಕ ಕಡಿದುಕೊಂಡಂತೆ, ಮನುಷ್ಯ ಹೆಚ್ಚು ಹೆಚ್ಚು ಸಮಯವನ್ನು ತಮ್ಮ ಗೆಳೆಯರೊಂದಿಗೆ, ತಮ್ಮ ಮನೆಯವರೊಂದಿಗೆ ಸಂತೋಷದಿಂದ ಕಳೆಯುವಲ್ಲಿ ಬಳಸುತ್ತಾನೆ, ಇದು ಹೆಚ್ಚು ನೆಮ್ಮದಿಯ ಬದುಕಿಗೆ ದಾರಿಯಾಗಬಹುದು; (ಇದು ಕೇವಲ ನನ್ನ ಸ್ವಂತ ಅಭಿಪ್ರಾಯವಲ್ಲ, ಇದರ ಬಗ್ಗೆ ಬಹಳಷ್ಟು ಪುಸ್ತಕಗಳು ಈಗಾಗಲೇ ಬಂದಿವೆ.) ಏಕೆಂದರೆ, ನಾನು ಮಾತನಾಡಿಸಿದ ಚೈನೀಸ್ ಫ್ಯಾಮಿಲಿ, ತಮ್ಮನ್ನು ಬೇರೆಯವರ ಬದುಕಿನೊಂದಿಗೆ ಹೋಲಿಸಿಕೊಂಡು, ತಮ್ಮ ಜೀವನದಲ್ಲಿಯ ನೆಮ್ಮದಿಯನ್ನೇ ಕಳೆದುಕೊಂಡಂತಿದ್ದರು, ಪ್ರತೀ ಬಾರಿಯೂ ಬೇರೆಯವರೊಂದಿಗೆ ತಮ್ಮನ್ನು ಹೋಲಿಸಿಕೊಂಡು, ತಾವು ಇನ್ನೂ ಪೂರ್ತಿ ಪ್ರಯತ್ನ ಮಾಡಿದ್ದಲ್ಲಿ ಇನ್ನೂ ಹೆಚ್ಚು ಗಳಿಸಬಹುದಿತ್ತು ಎಂದು ಮರುಗುತ್ತಿದ್ದಂತಿತ್ತು.


ಈಗ ನನಗೆ ಅನ್ನಿಸುತ್ತಿದೆ, ನಾನು ಆ ಟ್ಯಾಕ್ಸಿ ಡ್ರೈವರ್ ಗೆ ಹೇಗೆ ಉತ್ತರ ಕೊಡಬಹುದಿತ್ತು ಎಂದು. ವಾಸ್ತವ ಎಂದರೆ, ಹಿಂದೆ ಇದ್ದಷ್ಟು ಭಯಂಕರ ಯುದ್ದಗಳು, ದಂಗೆ, ಗಲಭೆಗಳು ಇಂದಿಲ್ಲ. ಮನುಕುಲ, ತಮ್ಮ ಹಿಂದಿನವರಿಗಿಂತ ಹೆಚ್ಚು ಸ್ವಾಸ್ಥ್ಯವಾಗಿ, ಶ್ರೀಮಂತವಾಗಿ ಬದುಕು ನಡೆಸುತ್ತಿದ್ದಾರೆ. ಆದರೆ, ಇತ್ತೀಚೆಗಿನ ಬೆಳವಣಿಗೆಯೊಂದಿಗೆ, ಜಗತ್ತಿನ ಯಾವುದೇ ಮೂಲೆಯಲ್ಲಿ ನಡೆದ ವಿಕೋಪ-ವಿಚಾರಾದಿಗಳು ನಮಗೆ ಒಂದು ಗಂಟೆಯಲ್ಲಿ ನೇರವಾಗಿ ನೋಡಲು ಸಿಗುತ್ತಿವೆ. ಇತ್ತೀಚೆಗಷ್ಟೇ ಕೇಳಿದೆವು, ಇಟೆಲಿಯಲ್ಲಿ ಒಂದು ಹಡಗು ನೀರಿನಲ್ಲಿ ಮುಳುಗಿ ಹಲವಾರು ಜೀವಗಳ ಬಲಿತೆಗೆದುಕೊಂಡಿತು, ಬೆಲ್ಜಿಯಮ್ ನಲ್ಲಿ ಗುಂಡಿನ ಚಕಾಮಕಿಯಲ್ಲಿ ಹಲವು ಜೀವಗಳು ನೆತ್ತರು ಹರಿಸಿ ಸತ್ತವು, ಪಶ್ಚಿಮ ಆಸ್ಟ್ರೇಲಿಯದಲ್ಲೆಲ್ಲೋ ಕಾಡ್ಗಿಚ್ಚಿನಿಂದ ಜನ ಮನೆ-ಮಠ ಕಳೆದುಕೊಂಡರು. ನಮ್ಮ ಮೆದುಳು ಇವೆಲ್ಲದಕ್ಕಿನ್ನೂ ಒಗ್ಗಿಕೊಂಡಿಲ್ಲ, ಇವೆಲ್ಲ ಹಲವು ಸಹಸ್ರ ಮೈಲಿ ದೂರದಲ್ಲಿ ನಡೆದಿದ್ದರೂ, ನಮಗಿನ್ನೂ ಚೇತರಿಸಿಕೊಳ್ಳಲು ಆಗುತ್ತಿಲ್ಲ, ಇವೆಲ್ಲ ನಮಗೆ ಹೊಸದು. ಒಂದಾದಮೇಲೆ ಒಂದರಂತೆ ವಿಕೋಪಗಳು ಹೆಚ್ಚುತ್ತಾ ಹೋದಂತೆಲ್ಲಾ, ವಾರ್ತೆಗಳಲ್ಲಿ ದೃಶ್ಯಾವಳಿಗಳನ್ನು ನೇರವಾಗಿ ನೋಡಿ, ನಮ್ಮ ಅಸಹಾಯಕತೆಯೂ ಹೆಚ್ಚುತ್ತಾ ಹೋಗುವುದು, ಬದುಕಲ್ಲಿ ವಿನಾ ಕಾರಣ ನೆಮ್ಮದಿಯೂ ಹಾಳಾಗುವುದು.


ಇವೆಲ್ಲದರ ಅರ್ಥ, ನಾವೆಲ್ಲ ನಮ್ಮ ಜೀವನದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ದಾರಿತಪ್ಪುತ್ತಿದ್ದೇವೆಯೇ? ಖಂಡಿತಾ ಇಲ್ಲ. ಆದರೆ, ಒಂದು ವಿಷಯವಂತೂ ನಮಗೆ ಮನವರಿಕೆಯಾಗಬೇಕಿದೆ, ನಮ್ಮಲ್ಲಿ ಮಾಧ್ಯಮಗಳ ತಾಂಡವ ಹೆಚ್ಚಾಗುತ್ತಿರುವುದರಿಂದ, ನಾವೆಲ್ಲ ಎಚ್ಚೆತ್ತುಕೊಂಡು, ನಮ್ಮ ಸ್ವಂತಿಕೆಯೊಂದಿಗೆ, ನಾವು ಜೀವನದಲ್ಲಿ ನೆಮ್ಮದಿಯಿಂದಿರಲು, ಒಂದೊಂದು ಉತ್ತಮ ಮಾರ್ಗ ಕಂಡುಕೊಳ್ಳಬೇಕಿದೆ. ನೀವು ಎಷ್ಟೇ ಉನ್ನತಿಯ ಗುರಿ ಇಟ್ಟುಕೊಂಡಿರಬಹುದು, ಕೊನೆಗೆ ನೀವು ಆ ಗುರಿಯನ್ನು ತಲುಪಲೂ ಬಹುದು. ಆದರೆ ಗುರಿ ತಲುಪುವಿಕೆಯಲ್ಲಿ ನಿಮ್ಮ ಜೀವನದ ನೆಮ್ಮದಿಯನ್ನು ಬಲಿಕೊಡುವುದರಲ್ಲಿ ಯಾವ ಅರ್ಥವೂ ಇಲ್ಲ. ಹಾಗಾದರೆ, ನನ್ನ ಅರ್ಥದಲ್ಲಿ ಜೀವನದಲ್ಲಿ ಸಂತೋಷದಿಂದಿರುವುದೆಂದರೇನು? ನನ್ನ ಗೆಳೆಯನೊಬ್ಬ ನನಗೆ ಹೇಳಿದ್ದ, "ಸಂತೋಷವೆಂಬುದು ನೀನು ಜೀವನದಲ್ಲಿ ಎಷ್ಟು ದಿನ ಬದುಕಿದೆ ಎಂಬುದರಿಂದ ಅಳೆಯಲ್ಲ್ಪಡುವುದಿಲ್ಲ, ಬದಲಾಗಿ, ನೀನು ನಿನ್ನ ಜೀವನದ ಎಷ್ಟು ದಿನಗಳನ್ನು ಅಳಿಸದೇ ನೆನಪಿನಲ್ಲಿರುವಂತೆ ಬದುಕಿದ್ದೀಯೇ ಎನ್ನುವುದರಿಂದ ನಿರೂಪಿಸಲ್ಪಡುತ್ತದೆ".


ನಾನು ನನ್ನ ಜೀವನದಲ್ಲಿ ನೆಮ್ಮದಿಯನ್ನು ಕಂಡುಕೊಂಡೆ, ಜೊತೆ ಜೊತೆಗೆ, ಆ ಸಂತುಷ್ಟ ಜನರೊಂದಿಗೆ ನಾನು ಕಳೆದ ದಿನಗಳನ್ನೂ ಮರೆಯಲಾರೆ.

---------------------------------------------------------------------------------------------
ಮಾರ್ಟಿನ್ ಲಿಂಡ್ಸ್ಟ್ರೋಮ್ (Martin Lindstrom)ರವರು 2009 ರಲ್ಲಿ TIME Magazine ನ "World's 100 Most Influential People" ಪ್ರಶಸ್ತಿಗೆ ಪಾತ್ರರಾದವರು. ಇವರು ಉತ್ತಮ ಲೇಖಕರೂ ಹೌದು, ಇವರ ಕೃತಿ  Buyology: Truth and Lies About Why We Buy (Doubleday, New York)New York Times ಮತ್ತು Wall Street Journal ನ ಬೆಸ್ಟ್ ಸೆಲ್ಲರ್ ಖ್ಯಾತಿ ಪಡೆದಿದೆ. ಮಾರ್ಟಿನ್ ರವರು ಹೆಚ್ಚಿನ ಫಾರ್ಚೂನ್ 100 ಕಂಪನಿಗಳಲ್ಲಿ ಮುಖ್ಯ ಸಲಹೆಗಾರರೂ ಹೌದು. ಇವರ ಇತ್ತೀಚಿಗಿನ ಕೃತಿ  Brandwashed: Tricks Companies Use to Manipulate Our Minds and Persuade Us to Buy, ಸೆಪ್ಟೆಂಬರ್ ನಲ್ಲಿ ಬಿಡುಗಡೆ ಆಗಿದ್ದು, ಇವರ 5 ಬೆಸ್ಟ್ ಸೆಲ್ಲರ್ ಪುಸ್ತಕಗಳು ಜಗತ್ತಿನ 30 ಭಾಷೆಗೆ ಅನುವಾದವಾಗಿವೆ.

No comments:

Post a Comment