Wednesday, September 14, 2011

ನನಗದು ಗೊತ್ತಿದೆ...

ಬಂಗಾರದ ಮೊಟ್ಟೆ ಇಡುವ ಕೋಳಿಯ ಕಥೆ:
ಒಂದಾನೊಂದು ಊರಲ್ಲಿ ಒಬ್ಬ ರೈತನ ಬಳಿ ಒಂದು ಕೋಳಿ ಇದ್ದಿತ್ತು. ಒಂದು ದಿನ ಅದು ಒಂದು ಬಂಗಾರದ ಮೊಟ್ಟೆ ಇಟ್ಟಿತು. ಮೊದಲಿಗೆ ರೈತ ಅದು ಬಂಗಾರದ ಮೊಟ್ಟೆ ಎಂದು ನಂಬಲಿಲ್ಲ. ಇದೆಲ್ಲೋ ಬ್ರಮೆ ಇರಬೇಕು ಎಂದುಕೊಂಡ. ಮಾರನೆಯ ದಿನವೂ ಕೋಳಿ ಪುನಃ ಒಂದು ಬಂಗಾರದ ಮೊಟ್ಟೆ ಇಟ್ಟಿತು. ಈ ಬಾರಿ ರೈತ ಸ್ವಲ್ಪ ಹೌಹಾರಿದ. ಅದನ್ನು ಪರೀಕ್ಷಿಸಿ ನೋಡಿದ, ನಿಜವಾದ ಬಂಗಾರದ ಮೊಟ್ಟೆ. ರೈತ ಸಂತೋಷದಿಂದ ಹಿರಿ ಹಿರಿ ಹಿಗ್ಗಿದ. ಇದು ಹೀಗೆಯೇ ನಡೆಯಿತು, ಕೋಳಿ  ದಿನವೂ ಒಂದೊಂದು ಬಂಗಾರದ ಮೊಟ್ಟೆ ಇಡುತ್ತಿತ್ತು. ಬಂಗಾರದ ಮೊಟ್ಟೆಯನ್ನು ಮಾರಿ ಬಂದ ಹಣದಿಂದ ತನ್ನ ಸಾಲವನ್ನೆಲ್ಲಾ ತೀರಿಸಿಕೊಂಡ ರೈತ ಕ್ರಮೇಣ ಶ್ರೀಮಂತನಾಗತೊಡಗಿದ. ರೈತನಿಗೆ ತನ್ನ ಕೋಳಿಯಮೇಲೆ ಎಲ್ಲಿಲ್ಲದ ಪ್ರೀತಿ ಮತ್ತು ಕಾಳಜಿ. ದಿನವೂ ಕೋಳಿಗೆ ಹೊಟ್ಟೆ ತುಂಬಾ ಆಹಾರವನ್ನು ಕೊಡುತ್ತಿದ್ದ, ಚೆನ್ನಾಗಿ ಪಾಲನೆ ಪೋಷಣೆ ಮಾಡುತ್ತಿದ್ದ. ಇದೆರೀತಿ ನಡೆಯುತ್ತಿರುವಾಗ ಒಂದು ದಿನ ರೈತನಿಗೆ ಒಂದು ಆಲೋಚನೆ ಬಂತು. "ಹೀಗೆ ದಿನ ಒಂದೊಂದೇ ಮೊಟ್ಟೆ ಕೊಡುತ್ತಿದೆ ಈ ಕೋಳಿ, ಯಾಕೆ ತಾನು ಒಂದೇಸಲ ಎಲ್ಲ ಮೊಟ್ಟೆಗಳನ್ನು ತೆಗೆದುಕೊಂಡು, ಮಾರಿ, ಬೇಗ ಶ್ರೀಮಂತನಾಗಬಾರದು? ಬಹುಶಃ ಈ ಕೋಳಿಯ ಹೊಟ್ಟೆಯಲ್ಲಿ ತುಂಬಾ ಚಿನ್ನದ ಮೊಟ್ಟೆಗಳಿರಬೇಕು. ಈ ಕೋಳಿಯ ಹೊಟ್ಟೆ ಬಗೆದರೆ ಎಲ್ಲ ಚಿನ್ನದ ಮೊಟ್ಟೆಗಳನ್ನು ಒಮ್ಮೆಲೇ ಪಡೆಯಬಹುದು", ಎಂದುಕೊಂಡು ಕೋಳಿಯ ಹೊಟ್ಟೆ ಬಗೆದು ಅದನ್ನು ಕೊಂದು ಬಿಟ್ಟ. ಹೊಟ್ಟೆ ಒಳಗೆ ನೋಡುತ್ತಾನೆ ಒಂದು ಬಂಗಾರದ ಮೊಟ್ಟೆಯೂ ಇಲ್ಲ. ಇತ್ತ ಮೊಟ್ಟೆ ಕೊಡುವ ಕೋಳಿಯೂ ಬದುಕಿಲ್ಲ. ರೈತ ತನ್ನ ಮೂರ್ಖತನಕ್ಕೆ ಕೊನೆಗೆ ಗೋಳಿಟ್ಟ.

ಈಗ ನಿಮ್ಮಲ್ಲಿ ಕೆಲವರು ಬಂಗಾರದ ಮೊಟ್ಟೆ ಇಡುವ ಕೋಳಿಯ ಕಥೆಯನ್ನು ಇಲ್ಲಿ, ಈ ಬ್ಲಾಗ್ ನಲ್ಲಿ, ನಾನು ಬರೆದದ್ದು ಪೂರ್ತಿ ಓದಿಲ್ಲ. ಇನ್ನು ಕೆಲವರು ಈ ಕಥೆಯ ಹೆಡ್ಡಿಂಗ್ ನೋಡಿದಕೂಡಲೆ ಕಥೆಯನ್ನು ಸ್ಕಿಪ್ ಮಾಡಿ ಇಲ್ಲಿಗೆ ಬಂದಿದ್ದೀರಿ. ಯಾರಿಗೂ ಈ ಕಥೆ ಇನ್ನೊಮ್ಮೆ ಕೇಳೋ ಇಂಟರೆಸ್ಟ್ ಇಲ್ಲ. ಇನ್ನು ಕೆಲವರು ಇದನ್ನ ಕಾಟಾಚಾರಕ್ಕೆ ಪೂರ್ತಿ ಓದಿದ್ದೀರಾ ಆದರೆ ಕಥೆ ಪೂರ್ತಿ ಮುಗಿದಮೇಲೆ ಹೇಳಿದ್ದೇನೆಂದರೆ "ಏನೂ ಹೊಸದಿಲ್ಲ, ನಂಗೆ ಈ ಕಥೆ ಮುಂಚೆನೇ ಗೊತ್ತಿತ್ತು". ಇನ್ನುಕೆಲವರಿಗೆ ಕಥೆ ಪೂರ್ತಿ ಓದಿದಮೇಲೆ ಮನಸ್ಸಿನಲ್ಲೇ ಬೇಜಾರಾಗಿದೆ ಆದ್ರೂ ಇಲ್ಲಿ ಮುಂದೆ ಓದುತ್ತಿದ್ದೀರಿ. ಎಷ್ಟೋ ಜನ ಬೇಜಾರಿನಿಂದ ಈ ಬ್ಲಾಗ್ ಆಗ್ಲೆ ಕ್ಲೋಸ್ ಮಾಡಿದ್ದಾರೆ.

ನಿಜ ಅಂದ್ರೆ, ಮೊನ್ನೆ ಈ ಕಥೆ ಪುನಃ ಓದಿದಾಗ ನಿಮಗನ್ನಿಸಿದ್ದೇ ನನಗೂ ಅನ್ನಿಸಿದ್ದು, "ಇದು ನನಗೆ ಮೊದಲೇ ಗೊತ್ತು..." ಆದರೆ ಈಗ ಹೇಳುತ್ತೇನೆ ಕೇಳಿ, ಈ ಕಥೆಯಲ್ಲಿ ಒಂದು ಸೂಪರ್ ಬಿಸಿನೆಸ್ಸ್(ವ್ಯವಹಾರ) ನೀತಿ ಅಡಗಿದೆ!.. ನಂಬುತ್ತಿರಾ? ಆ ನೀತಿಯನ್ನು ನಾನು ನಿಮಗೆ ಈ ಪೋಸ್ಟಿನ ಕೊನೆಯಲ್ಲಿ ತಿಳಿಸುತ್ತೇನೆ. ಈಗ ನಾವು ಫೋಕಸ್ ಮಾಡಬೇಕಾದ್ದು ನಮ್ಮ ಮನಸ್ಸಿನಲ್ಲಿ ಬಂದ ಭಾವನೆಗಳ ಮೇಲೆ.

ಈ ಕಥೆ ಓದುವಾಗ ನನ್ನ ಮತ್ತು ನಿಮ್ಮ ಮನಸ್ಸಲ್ಲಿ ಏನು ಬಂತೆಂದರೆ "ನನಗೆ ಈ ಕಥೆ ಮೊದಲೇ ಗೊತ್ತು, ತುಂಬಾ ಹಳೆಯದು, ಕೇಳಿ ಕೇಳಿ ಬೇಜಾರಾಗಿದ್ದೇನೆ, ಹೊಸತೇನೂ ಇಲ್ಲ ಇದರಲ್ಲಿ" ಹೀಗೆ ಬೇರೆ ಬೇರೆ ನಕಾರಾತ್ಮಕ ಭಾವನೆಗಳು. ನಮ್ಮ ಮನಸ್ಸು ಇದನ್ನು ಪುನಃ ಕೇಳಲು ತಯಾರಿಲ್ಲ. ನನಗಿದು ಇನ್ನೊಮ್ಮೆ ಬೇಡ, ಅಷ್ಟೇ. ನನ್ನ ಮಾತು ಕೇಳಿ -- ನಾವು ಎಲ್ಲಿಯತನಕ "ನನಗೆ ಅದು ಗೊತ್ತು..." ಎಂದು ಸುಮ್ಮನಾಗುತ್ತೇವೋ ಅಲ್ಲಿಯ ತನಕ "ನಾವು ಜೀವನದಲ್ಲಿ ಬೆಳೆಯುವುದಿಲ್ಲ". Until we say "I know it..." we don't grow further in life. Our growth will be stagnant there.

ಒಂದು ಸಿಂಪಲ್ ಉದಾಹರಣೆ ನೋಡೋಣ, ನಾವು ಎಲ್.ಕೆ.ಜಿ(LKG) ಯಿಂದ ಈಗ ಮಾಸ್ಟರ್ ಡಿಗ್ರಿ(Master Degree) ವರೆಗೆ ಏನೆಲ್ಲಾ ಹೊಸದನ್ನು(NEW) ಕಲಿತಿದ್ದೆವೋ ಅದು ಹೇಗೆ ಕಲಿತೆವು? ನಾನು ಹೇಳುತ್ತಿರುವುದು ನಾವು ಕಲಿತ ಪ್ರತಿಯೊಂದು ಹೊಸ ವಿಷಯಗಳ ಬಗ್ಗೆ. ಉದಾಹರಣೆಗೆ, ಚಿಕ್ಕಂದಿನಲ್ಲಿ ನಮಗೆ ಕೂಡಿಸುವ ಕಳೆಯುವ ಲೆಕ್ಕ ಕೂಡ ಬರುತ್ತಿರಲಿಲ್ಲ, ಮುಂದೆ ನಾವು ಅದನ್ನು ಚೆನ್ನಾಗಿ ಕಲಿತೆವು. ನಮ್ಮ ವಿಧ್ಯಾಭ್ಯಾಸ ಮುಂದುವರೆದಂತೆ, ನಮ್ಮ ವಯಸ್ಸು ಬೆಳೆದಂತೆ ನಾವು ತುಂಬಾ ಹೊಸ ಹೊಸದನ್ನು ಕಲಿತೆವು. ಹೇಗೆ? ಹೇಗೆಂದರೆ ನಾವು ಪ್ರತಿಸಲ ಹೊಸದನ್ನು ಕಲಿಯಲು ಕೂತಾಗ ನಮ್ಮ ಸುಪ್ತ ಮನಸ್ಸಿನಲ್ಲಿ ಎಲ್ಲೋ ಒಂದು ಮೂಲೆಯಲ್ಲಿ "ನನಗಿದು ಹೊಸದು, ಇದರಬಗ್ಗೆ ನನಗೆ ಗೊತ್ತಿಲ್ಲ, ಇದು ಇಂಟರೆಸ್ಟಿಂಗ್ ಆಗಿದೆ ಸ್ವಲ್ಪ ಇದರಬಗ್ಗೆ ತಿಳಿದುಕೊಳ್ಳೋಣ, ಇದು ಎಕ್ಷಾಮಿಗೆ ಬರಬಹುದು ಹಾಗಾಗಿ ನಾನು ಗಮನವಿಟ್ಟು ಕಲಿಯಬೇಕು.." ಹೀಗೆ ಪಾಸಿಟಿವ್ ಭಾವನೆಗಳು ಮೂಡಿದ್ದವು. ನಿಮ್ಮನ್ನು ನೀವೇ ಕೇಳಿಕೊಳ್ಳಿ, ನಿಮಗೆ ಮುಂಚೆನೇ ಪೂರ್ತಿಯಾಗಿ ಗೊತ್ತಿದೆ ಎಂದು ಅನ್ನಿಸಿದ ವಿಷಯ ಯಾವತ್ತಾದರೂ ಪುನಃ ಒಮ್ಮೆ ನೋಡೋಣ ಎಂದು ಅನ್ನಿಸಿದೆಯಾ ನಿಮಗೆ? ಇಲ್ಲ, ಯಾಕೆ? "ನನಗದು ಗೊತ್ತು". ನೀವು ಒಮ್ಮೆ ಈ ಪ್ರಯೋಗವನ್ನು ಮಾಡಿ ನೋಡಿ. ಹೊಸದಾಗಿ ಒಂದು ವಿಷಯ ಕಲಿಯುತ್ತಿರುವಾಗ ಮನಸ್ಸಿನಲ್ಲಿ ಬಲವಾಗಿ ಹೇಳಿಕೊಳ್ಳಿ "ನನಗೆ ಇದು ಪೂರ್ತಿಯಾಗಿ ಗೊತ್ತು, ಇದು ನನಗೆ ಬೇಡ, ಇದು ನನಗೆ ಇಂಟರೆಸ್ಟಿಂಗ್ ಆಗಿ ಇಲ್ಲ, ನನಗೆ ಇದರಬಗ್ಗೆ ಗೊತ್ತಿರೋದ್ರಿಂದ ಪುನಃ ತಿಳಿದುಕೊಳ್ಳೋ ಅವಶ್ಯಕತೆ ಇಲ್ಲ". ನೀವೇ ಗಮನಿಸಿ, ಆಮೇಲೆ ನಿಮಗೆ ಬೇಕು ಅಂದ್ರು ಆ ವಿಷಯ ನಿಮ್ಮ ತಲೆಗೆ ಹೋಗುವುದಿಲ್ಲ. ಮಾಡಿ ನೋಡಿ.

ನಮಗೆ ಗೊತ್ತಿಲ್ಲದ ವಿಷಯ ಕಲಿಯುವಾಗ ನಮ್ಮ ಮನಸ್ಸಿನಲ್ಲಿ ಬಂದ ಭಾವನೆ "ನನಗದು ಗೊತ್ತಿಲ್ಲ", ಅದೇ, ಮೊದಲೇ ನಿಮಗೆ ತಿಳಿದಿದ್ದ ವಿಷಯದಬಗ್ಗೆ ಪುನಃ ಕೇಳಿದರೆ ಮನಸ್ಸಿನಲ್ಲಿ ಬಂದ ಭಾವನೆ "ನನಗದು ಗೊತ್ತು..." ಎಲ್ಲಿಯತನಕ ನಮ್ಮ ಮನಸ್ಸಿನಲ್ಲಿ "ನನಗದು ಗೊತ್ತಿಲ್ಲ, ಹೊಸದಾಗಿ ಕಲಿಯುತ್ತೇನೆ" ಎಂಬ ಭಾವನೆಗಳು ಬರುವುದಿಲ್ಲವೋ ಅಲ್ಲಿಯ ತನಕ ನಮಗೆ ಹೊಸ ವಿಷಯಗಳು ತಿಳಿಯುವುದಿಲ್ಲ; ಎಲ್ಲಿಯ ತನಕ ನಮಗೆ ಹೊಸ ವಿಷಯಗಳು ತಿಳಿಯುವುದಿಲ್ಲವೋ ಅಲ್ಲಿಯ ತನಕ ನಮ್ಮ ಮಾನಸಿಕ ಬೆಳವಣಿಗೆ ಆಗುವುದಿಲ್ಲ. ಇದರಲ್ಲಿ ಯಾವ ಮ್ಯಾಜಿಕ್ಕೂ ಇಲ್ಲ; ಇದು ಬರಿಯ ಲಾಜಿಕ್ಕು ಅಸ್ಟೆಯ.
ಒಮ್ಮೆ ಯೋಚಿಸಿ ನೋಡಿ, ನಮ್ಮ ನಿತ್ಯ ಜೀವನದಲ್ಲಿ ಎಷ್ಟೆಲ್ಲ ಚಿಕ್ಕ ಚಿಕ್ಕ ವಿಷಯಗಳಿವೆ, ಅದರಲ್ಲಿ ಎಷ್ಟು ವಿಷಯದಲ್ಲಿ ನಾವು "ನನಗೆ ಗೊತ್ತಿಲ್ಲ, ಹೊಸದಾಗಿ ಕಲಿಯೋಣ" ಎಂದು ಎಣಿಸಿದ್ದೇವೆ? ಎಷ್ಟು ವಿಷಯಗಳ ಕಡೆಗೆ ಗಮನ ಹರಿಸಿ ಅದರ ಅರ್ಥ ಇನ್ನೊಮ್ಮೆ ತಿಳಿಯಲು ಪ್ರಯತ್ನಿಸಿದ್ದೇವೆ? ಬಹುಶಃ ಅತೀ ಕಡಿಮೆ. ಹಾಗಾದರೆ "ನಮ್ಮ ಜೀವನದಲ್ಲಿ ಪ್ರತಿದಿನವೂ ಅತಿ ವೇಗದ ಬೆಳವಣಿಗೆಯಿಂದ ನಾವು ಎಷ್ಟು ವಂಚಿತರಾಗುತ್ತಿದ್ದೇವೆ?".
ಹಾಗಾದರೆ ಪ್ರತಿ ದಿನವೂ ನಮ್ಮ ಜೀವನವನ್ನು ಎಷ್ಟು ನಿಧಾನಗತಿಯಲ್ಲಿ ನಡೆಸುತ್ತಾ, ಎಷ್ಟು ವ್ಯರ್ಥ ಮಾಡುತ್ತಿದ್ದೇವೆ? ಎಷ್ಟೋ ಚಿಕ್ಕ ಚಿಕ್ಕ ವಿಷಯಗಳ (which are our basic needs of life) ಮೇಲೆ ಗಮನ ಕೊಡಲಾಗದೆ, ಆ ಚಿಕ್ಕ ಚಿಕ್ಕ ಅತಿಮೌಲ್ಯ ವಿಷಯಗಳ ಸಂಪೂರ್ಣ ಬೆಳವಣಿಗೆಯಿಂದ ವಂಚಿತರಾದ ನಾವು, ಜೀವನದಲ್ಲಿ ಎಷ್ಟು ಪ್ರೌಢಿಮೆ ಪಡೆದು ಯೋಗ್ಯರಾಗಿ ಬದುಕಲು ಅರ್ಹರಾಗಿದ್ದೇವೆ? ಮತ್ತೇಕೆ ಪ್ರತಿದಿನ ನಾವು "ನಾನೇಕೆ ಜೀವನದಲ್ಲಿ ಬೆಳೆಯುತ್ತಿಲ್ಲ? ನನಗೆ ಮಾತ್ರ ಈ ತರಹದ ಕಷ್ಟಗಳು ಬರುತ್ತವೆ" ಎಂದೆಲ್ಲಾ ಕೊರಗುತ್ತೇವೆ? ಇದಕ್ಕೆಲ್ಲ ಮೂಲ ಕಾರಣ ಏನು? ಮೂಲ ಕಾರಣ "ನನಗೆ ಅದರಬಗ್ಗೆ ಎಲ್ಲಾ ಗೊತ್ತು.."

ಜೀವನದಲ್ಲಿ ಸಾಧನೆ ಮಾಡಿದ ಪ್ರತಿಯೊಬ್ಬ ವ್ಯಕ್ತಿಯಬಗ್ಗೆ ಕೇಳಿ, ಆತ ಹೇಳುವ ಎಲ್ಲ ವಿಷಯಗಳ ತಾತ್ಪರ್ಯ ಒಂದೇ
"ನನ್ನ ಸಾಧನೆಗೆ ಕಾರಣ ನಾನು ತೆಗೆದುಕೊಳ್ಳುವ ಸರಿಯಾದ ನಿರ್ಧಾರಗಳು".
"ಸರಿಯಾದ ನಿರ್ಧಾರಗಳನ್ನು ಹೇಗೆ ತೆಗೆದುಕೊಳ್ಳುತ್ತೀರಿ?"
"ನನ್ನ ಅನುಭವಗಳಿಂದ".
ಸರಿಯಾದ ನಿರ್ಧಾರ ತೆಗೆದುಕೊಳ್ಳಲು ನಮಗೆ ಆ ವಿಷಯದ ಬಗ್ಗೆ ಸಂಪೂರ್ಣ ಮಾಹಿತಿ ಬೇಕು. ಜೀವನದ ಪ್ರತಿಯೊಂದು ಹೆಜ್ಜೆಯಲ್ಲೂ ಆಘಾಧವಾದ ಮಾಹಿತಿಗಳು ದೊರಕುತ್ತವೆ, ಆದರೆ ಆ ಮಾಹಿತಿಗಳನ್ನು ಸ್ವೀಕರಿಸಬೇಕಾದರೆ ಮೊದಲು ನಾವು ತೆರೆದ ಮನಸ್ಸಿನವರಾಗಬೇಕು. ಎಲ್ಲಿಯತನಕ ನನಗದು ಗೊತ್ತಿದೆ ಎಂದು ನಮ್ಮಲ್ಲಿಗೆ ಹರಿದು ಬರುತ್ತಿರುವ ಜ್ನಾನವನ್ನು ನಿಲ್ಲಿಸುತ್ತೇವೋ ಅಲ್ಲಿಯತನಕ ನಮ್ಮ ಬೆಳವಣಿಗೆ ಕುಂಟಿತವಾಗುತ್ತದೆ.

ಇನ್ನು ಬಂಗಾರದ ಮೊಟ್ಟೆ ಇಡುವ ಕೋಳಿಯ ಕಥೆಯ ನೀತಿಯನ್ನು ಹೇಳಬೇಕಾದರೆ, ವ್ಯವಹಾರದಲ್ಲಿ ನಿಮಗೆ ಎರಡು ವಿಷಯಗಳು ಗಮನದಲ್ಲಿ ಇರಬೇಕು, ಒಂದು ಬಂಗಾರದ ಮೊಟ್ಟೆ ಇಡುವ ಕೋಳಿ ಮತ್ತು ಎರಡನೆಯದು ಬಂಗಾರದ ಮೊಟ್ಟೆ. ಇವೆರಡೂ ಸಮಪ್ರಮಾಣದಲ್ಲಿ ಯೋಗ್ಯವಾದ ಅಂಶಗಳು. ಇವೆರಡರಲ್ಲಿ ಯಾವುದಾದರೂ ಒಂದು ಅಂಶದ ಬಗ್ಗೆ ನಮ್ಮ ಗಮನ ಕಡಿಮೆ ಆದರೂ ನಷ್ಟ ಖಂಡಿತ.
ಇದನ್ನು ಒಂದು ಫಾರ್ಮುಲಾ ದಲ್ಲಿ ವಿವರಿಸಬೇಕಾದರೆ,
ವ್ಯವಹಾರದ ಸಮತೋಲನೆ = (ಉತ್ಪಾದನೆಯ ಸಾಮರ್ಥ್ಯ / ಉತ್ಪಾದನೆ)
or, in English,
BB = (PC / P)
--- BB = Balance in Business
--- PC = Production Capability
--- P = Production
ಉತ್ಪಾದನೆಯ ಸಾಮರ್ಥ್ಯ ಎಂದರೆ, ಕಥೆಯಲ್ಲಿ, "ಕೋಳಿ", ಮತ್ತು ಅದರ ಉತ್ಪಾದನೆ "ಬಂಗಾರದ ಮೊಟ್ಟೆ".
ನೀವು ಕೋಳಿಯನ್ನು ನಿರ್ಲಕ್ಷ್ಯ ಮಾಡಿದರೂ ಅಥವಾ ಬಂಗಾರದ ಮೊಟ್ಟೆಯನ್ನು ನಿರ್ಲಕ್ಷ್ಯ ಮಾಡಿದರೂ ನಷ್ಟ ನಿಮಗೇ.
ಅಂತೆಯೇ ವ್ಯವಹಾರದಲ್ಲಿ, ನಿಮ್ಮ ಉತ್ಪಾದನೆಯ ಸಾಮರ್ಥ್ಯ ನಿಮ್ಮ ಕೆಲಸಗಾರರು (your employees), ಮತ್ತು ಉತ್ಪಾದನೆ "ನಿಮ್ಮ ಕೆಲಸಗಾರರು ಮಾಡಿಕೊಟ್ಟ ಕೆಲಸ (the work done)". ನೀವು ಇದರಲ್ಲಿ ಯಾವುದನ್ನು ನಿರ್ಲಕ್ಷಿಸಿದರೂ ಬಹಳ ನಷ್ಟ ಅನುಭವಿಸಬೇಕಾಗುತ್ತದೆ.
ಇದರ ಇನ್ನೊಂದು ಮುಖ ಎಂದರೆ, ಯಾವುದೇ ಒಂದು ಅಂಶದಮೇಲೆ ನೀವೂ ಹೆಚ್ಚು ಗಮನ ಹರಿಸಿದರೂ, ಅದೂ ನಿಮ್ಮ ವ್ಯವಹಾರಕ್ಕೆ ಕೇಡೆ. ಎರಡೂ ವಿಷಯಗಳ ಮೇಲೆ ಸರಿ ಪ್ರಮಾಣದ ಕಾಳಜಿ ಮುಖ್ಯ. ಈ ಕಥೆಯನ್ನು ನಮ್ಮ ಎಷ್ಟು ಚಿಕ್ಕ ವಯಸ್ಸಿನಲ್ಲಿ ಕೇಳಿದ್ದೇವೆ. ಆಗ ನಮಗೆ ಇಷ್ಟೊಂದು ಯೋಚಿಸುವ ಶಕ್ತಿ ಇರಲಿಲ್ಲ. ಆದರೆ ಈಗ?

ಬಚ್ಚಿಟ್ಟುಕೊಂಡಿಹುದೆ ಸತ್ಯ ಮಿಥ್ಯೆಯ ಹಿಂದೆ? |
ನಚ್ಚುವುದೆ ಮರೆಯೊಳಿಹುದನೆ ಸತ್ಯವೆಂದು? ||
ಅಚ್ಚರಿಯ ತಂತ್ರವಿದು; ಬ್ರಹ್ಮ ಸೃಷ್ಟಿಗಳೇಕೊ |
ಮುಚ್ಚಿಹವು ಸಾಜತೆಯ ಮಂಕುತಿಮ್ಮ

1 comment:

  1. Great Maraya... "ಇದು ನನಗೆ ಗೊತ್ತಿರಲಿಲ್ಲ ... ".. nice man...

    ReplyDelete