Sunday, September 4, 2011

ನಾವೇನು ಸಮರ್ಥಿಸ ಹೊರಟಿದ್ದೇವೆ?...

ಒಬ್ಬ ಶಿಷ್ಯ ಯಾವತ್ತೂ ಹಸುವನ್ನು (ಆಕಳು) ನೋಡಿರಲಿಲ್ಲ. ತನ್ನ ಗುರುಗಳಲ್ಲಿ ಬಂದು ಕೇಳಿದ,
"ಗುರುಗಳೇ, ಹಸು ಎಂಬ ಪ್ರಾಣಿ ಹೇಗಿರುತ್ತೆ?"
ಗುರು ಹೇಳಿದರು "ಮಗು, ಹಸು ಒಂದು ಸಾಧು ಪ್ರಾಣಿ, ಅದಕ್ಕೆ ನಾಲ್ಕು ಕಾಲುಗಳು, ಎರಡು ಕಿವಿ, ಎರಡು ಕಣ್ಣು... ಅದು ಸಸ್ಯಾಹಾರಿ ಪ್ರಾಣಿ. ಅದನ್ನು ಕೊಟ್ಟಿಗೆಯಲ್ಲಿ ಸಾಕುತ್ತಾರೆ. ಅದು ಹಾಲನ್ನು ಕೊಡುತ್ತದೆ. ಅದರ ಹಾಲು ಬಿಳಿಯ ಬಣ್ಣದ್ದು. ಹಾಲು ತುಂಬಾ ಪೌಷ್ಟಿಕ ಆಹಾರ. ಆರೋಗ್ಯದ ದೃಷ್ಟಿಯಿಂದ ಹಾಲು ಕುಡಿಯುವದು ತುಂಬಾ ಒಳ್ಳೆಯದು..." ಎಲ್ಲವನ್ನೂ ಸರಿಯಾಗಿ ವಿವರಿಸಿದರು.
ಶಿಷ್ಯ ತೀರ್ಮಾನಿಸಿದ, ಈ ಹಸು ಎಂಬ ಪ್ರಾಣಿಯನ್ನು ಇವತ್ತೇ ನೋಡಿಬಿಡಬೇಕು. ಹೀಗೆ ಎಣಿಸಿದವನು ಹಸುವನ್ನು ಹುಡುಕಿ ಹೊರಟ.
ಒಂದು ಜಾಗ ತಲುಪಿದಮೇಲೆ ಅಲ್ಲಿ ಒಂದು ಹಸುವಿನ ಸಿಮೆಂಟಿನ ಒಂದು ಪ್ರತಿಮೆಯನ್ನು ಕಂಡ. ಕೂಡಲೇ ಗುರುಗಳು ಹೇಳಿದ ಎಲ್ಲ ಮಾತುಗಳನ್ನು ನೆನಪಿಸಿಕೊಂಡು ಬಹುಷಃ ಗುರುಗಳು ಹೇಳಿದ ಹಸು ಇದೇ ಇರಬೇಕು ಎಂಬ ತೀರ್ಮಾನಕ್ಕೆ ಬಂದ. ಆ ಪ್ರತಿಮೆಯ ಪ್ರತಿಯೊಂದು ಅಂಗಗಳನ್ನು ಮುಟ್ಟಿ ಮುಟ್ಟಿ ನೋಡಿದ. ಹಸುವನ್ನು ನೋಡಿದೆ ಎಂಬ ಕುಶಿಯಲ್ಲಿ ಹಿರಿ ಹಿರಿ ಹಿಗ್ಗಿದ. 
ಅಲ್ಲಿ ಆ ಸಿಮೆಂಟಿನ ಪ್ರತಿಮೆಗೆ ಸುಣ್ಣ ಬಳಿಯಲು ಒಂದು ಬಕೆಟ್ ತುಂಬಾ ಸುಣ್ಣದ ನೀರನ್ನು ಇಟ್ಟಿದ್ದರು. ಅದನ್ನು ನೋಡಿದ ಶಿಷ್ಯ ಬಹುಷಃ ಗುರುಗಳು ಹೇಳಿದ ಹಸುವಿನ ಹಾಲು ಇದೇ ಇರಬೇಕು ಎಂಬ ತೀರ್ಮಾನಕ್ಕೆ ಬಂದುಬಿಟ್ಟ. ಕೊನೆಗೆ ಹಸುವನ್ನು ನೋಡಿದ್ದಾಯಿತು, ಇನ್ನು ಹಸುವಿನ ಹಾಲಿನ ರುಚಿ ನೋಡಿ ಬಿಡೋಣ ಎಂದು ಆ ಬಕೆಟಿನಲ್ಲಿದ್ದ ಸುಣ್ಣದ ನೀರನ್ನು ಕುಡಿದು ಬಿಟ್ಟ.

ಅವನನ್ನು ಆಸ್ಪತ್ರೆಗೆ ಸೇರಿಸಲಾಯಿತು. ಗುರುಗಳು ಅವನನ್ನು ನೋಡಲು ಬಂದರು.
"ಏನಾಯಿತು?" ಗುರುಗಳು ಕೇಳಿದರು.
ಶಿಷ್ಯ ಕೋಪದಿಂದ "ಗುರುಗಳಾ ನೀವು, ನನ್ನ ಹಿತ ಚಿಂತಕರಾಗಿ ನೀವು ಹೀಗೆ ಮಾಡಬಹುದಾ. ವಿಷಯ ತಿಳಿದಿಲ್ಲ ಅದಕ್ಕೆ ನಿಮ್ಮಲ್ಲಿ ಕೇಳಿದ್ದು, ನೀವು ಇಂತಹ ಸುಳ್ಳು ಹೇಳುವವರೆಂದು ನನಗೆ ತಿಳಿದಿರಲಿಲ್ಲ" ಎಂದ.
ಗುರು ಶಾಂತವಾಗಿ ಕೇಳಿದರು "ಏನಾಯಿತೆಂದು ತಿಳಿಸು ಮೊದಲು".
"ನೀವು ಹೇಳಿದ ಹಾಗೆ ಇರುವ ಒಂದು ಹಸುವನ್ನು ನೋಡಿದೆ. ಅದರಲ್ಲಿ ನೀವು ಹೇಳಿದ ಎಲ್ಲ ಅಂಶಗಳಿದ್ದವು. ಕೊನೆಗೆ ಹಸುವಿನ ಹಾಲನ್ನೂ ನೋಡಿದೆ. ನೀವೇ ಹೇಳಿದ್ದು ಹಸುವಿನ ಹಾಲು ಆರೋಗ್ಯಕ್ಕೆ ಬಹಳ ಉತ್ತಮ ಎಂದು. ನಾನು ಆ ಹಾಲನ್ನು ಕುಡಿದೆ. ಅಷ್ಟೇ, ನನ್ನನ್ನು ಆಸ್ಪತ್ರೆಗೆ ಸೇರಿಸುವ ಪ್ರಸಂಗ ಎದುರಿಬಂತು" ಎಂತೆಲ್ಲ ಶಿಷ್ಯ ರೇಗಾಡಿದ.
ಗುರುಗಳು ಬಹಳ ಶಾಂತವಾಗಿ ಕೇಳಿದರು "ನೀನು ಹಾಲನ್ನು ಕುಡಿದೆ, ಸರಿ, ಆ ಹಾಲನ್ನು ನೀನೇ ಕರೆದೆಯಾ?"
ಒಮ್ಮೆಲೇ ಶಿಷ್ಯ ಇಳಿದು ಹೋದ, ತಗ್ಗಿದ ದನಿಯಲ್ಲಿ ಉತ್ತರಿಸಿದ "ಇಲ್ಲ".
ಗುರು ಕೇಳಿದರು "ಹಾಗಾದರೆ ಅದನ್ನು ಹಾಲು ಎಂದು ನೀನು ಹೇಗೆ ತೀರ್ಮಾನಿಸಿದೆ?"

ದುಡುಕುತನ. ನಮ್ಮಲ್ಲಿ ಅಂತಹ ಶಿಷ್ಯರು ಬಹಳಷ್ಟಿದ್ದೇವೆ. ನಮಗೆ ಪೂರ್ತಿ ತಿಳಿಯುವ ವ್ಯವಧಾನವೂ ಇಲ್ಲ, ಕೇಳಿಸಿಕೊಳ್ಳುವ ಸಭ್ಯತೆಯೂ ಇಲ್ಲ, ಸ್ವತಃ ಅರಿತುಕೊಳ್ಳುವ ಪರಿಸ್ಥಿತಿಯಲ್ಲಂತೂ ಮೊದಲೇ ನಾವಿಲ್ಲ. ಯಾರೋ ಏನೋ ಹೇಳಿದರು, ಅದನ್ನು ನಮಗೆ ಆದಷ್ಟು ಬೇಗ ಎಲ್ಲರಲ್ಲಿ ಹೇಳಿಕೊಂಡು ತಿರುಗಬೇಕು. ವಿಷಯದ ಪರಿಪಕ್ವತೆ ತಿಳಿಯಬೇಕಾಗಿಲ್ಲ ನಮಗೆ. ಸರಿಯಾಗಿ ಹೇಳುವುದಾದರೆ, ಆ ವಿಷಯ ನಿಜವೊ ಸುಳ್ಳೋ ತಿಳಿಯುವ ತಾಳ್ಮೆ ಕೂಡ ನಮಗಿಲ್ಲ, ನಮಗೆ ಬೇಕಾಗಿಯೂ ಇಲ್ಲ. ಯಾರೋ ಹೇಳಿದರು, ನಮಗದು ವಿಷಯ ಚರ್ಚಿಸುವಲ್ಲಿ ಮುದ ನೀಡಿದರೆ ಸಾಕು. ಅದರಲ್ಲೂ, ಕೇಳಿದ್ದನ್ನು ಹೇಳುವ ಅಭ್ಯಾಸವಾದರೂ ನಮಗಿದೆಯೇ? ಇಲ್ಲ, ಅದಕ್ಕೆ ನಮ್ಮ ಕಾಲು ಬಾಲ ಸೇರಿಸಿ, ಮಸಾಲೆ ಒಗ್ಗರಣೆ ಹಾಕಿ ಇನ್ನೂ ರಸವತ್ತಾಗಿಸಿ ಅದರ ಮಜಾ ಸವಿಯಲು ಇಚ್ಚಿಸುತ್ತೇವೆ. ಕೊನೆಗೆ ಆ ಶಿಷ್ಯನಿಗಾದ ಪರಿಣಾಮವೇ ನಮಗೂ ಆಗುವುದು. ಬಹಳ ಯೋಚಿಸಬೇಕಾದ ವಿಷಯ ಇದು. ಆದರೆ, ನನ್ನ ವಿಷಯ ಸಧ್ಯ ಇದಲ್ಲ. ಇದರಬಗ್ಗೆ ಇನ್ನೊಮ್ಮೆ ಚರ್ಚಿಸೋಣ. ಇಲ್ಲಿ ನನ್ನ ವಿಷಯ, ನಮ್ಮ ತೊಂದರೆಗೆ ನಾವು ಬೇರೆಯವರ ಮೇಲೆ ಗೂಬೆ ಕೂರಿಸುತ್ತಿರುವುದು ಎಷ್ಟು ಉತ್ತಮ? ಆ ಶಿಷ್ಯ ವಿನಾಕಾರಣ ಗುರುಗಳ ಮೇಲೆ ಹಾರಾಡಿದ್ದು ಎಷ್ಟು ಸಮಂಜಸ? ಇದಕ್ಕೆ ನಮ್ಮ ಪರಿಯೇನು?

ಒಮ್ಮೆ ನನ್ನ ಹತ್ತಿರದ ಬಂಧು ಒಬ್ಬರಿಗೆ ಒಂದು ಲ್ಯಾಪ್-ಟಾಪ್ ಬೇಕಿತ್ತು. ಕೊಳ್ಳುವ ಮೊದಲು ಅವರ ರೂಲ್ಸ್, ಕಂಡಿಷನ್ಸ್, ರಿಕ್ವಯರ್ಮೆಂಟ್ಸ್ ತುಂಬಾ ಇದ್ದಿತ್ತು. ನನಗೆ ಇಷ್ಟೇ ದುಡ್ಡಿನಲ್ಲಿ (15k - 20k), ಒಳ್ಳೆಯ, ತುಂಬಾ ಸೌಲಭ್ಯ (features) ಇರುವ, ತುಂಬಾ ಬಾಳಿಕೆ ಬರುವ (very good warranty), ಗಟ್ಟಿಮುಟ್ಟಾದ, ಹೊಸಾ (new, not 2nd hand) ಲ್ಯಾಪ್-ಟಾಪ್ ಬೇಕು.
ಮೊದಲು ನಾನು ಅವರಿಗೆ ತಿಳಿಸಿ ಹೇಳಲು ಪ್ರಯತ್ನಿಸಿದೆ. ನೋಡಿ, ನೀವು ಹೇಳೋ ಎಲ್ಲ ರಿಕ್ವಯರ್ಮೆಂಟ್ಸ್ ಇರೋ ಲ್ಯಾಪ್-ಟಾಪ್ ಬೇಕು ಅಂದ್ರೆ ಹಣ ಸಾಲೋಲ್ಲ. ಹಣ ಹೆಚ್ಚಿಗೆ ಹಾಕೋದಾದ್ರೆ ನಿಮಗೆ ತುಂಬಾ ಒಳ್ಳೆ ಲ್ಯಾಪ್-ಟಾಪ್ ಕೊಡಿಸ್ತಿನಿ. ಅವರು ಕೇಳಲಿಲ್ಲ. ಇಲ್ಲ ತನಗೆ ಅಷ್ಟು ಹಣ ಕೊಡೋಕಾಗಲ್ಲ, ಇಷ್ಟೇ ಕೊಡೋದು, ಸ್ವಲ್ಪ ಪ್ರಯತ್ನ ಮಾಡಪ್ಪ, ಇಲ್ಲೇ ಕೂತು ಎಲ್ಲ ಡಿಸೈಡ್ ಮಾಡ್ತೀಯಾ ಅಂತ ಅಂದ್ರು. ನನಗೆ ಸಂಕಟದ ಪರಿಸ್ಥಿತಿ. ತುಂಬಾ ಹತ್ತಿರದವರು ಬೇರೆ. ಪ್ರಯತ್ನ ಮಾಡೋದಿಕ್ಕೆ ನನಗೆ ಅಭ್ಯಂತರ ಇಲ್ಲ, ಆದರೆ, ಕೆಲಸ ಆಗುತ್ತೆ ಎಂಬ ಸಣ್ಣ ಭರವಸೆ ಇದ್ರೆ ಪ್ರಯತ್ನ ಮಾಡಬೇಕಾದ್ದು ನನ್ನ ಧರ್ಮ. ಅದು ಬಿಟ್ಟು ಸಿಗೋಲ್ಲ ಎಂದು ಗೊತ್ತಿದ್ದೂ ಪ್ರಯತ್ನ ಮಾಡೋದು ಅಂದ್ರೆ ಕಾಡಲ್ಲಿ ಕೂತು ಕವಿತೆ ಓದಿದ ಹಾಗೆ. ನಾನೇನು ಮಾತನಾಡಲಿಲ್ಲ, ಎಲ್ಲ ತರಹದಲ್ಲೂ ನನ್ನಿಂದಾದ ಪ್ರಯತ್ನ ಮಾಡಿ ಅವರ ಹಣಕ್ಕೆ ಸಿಗಬಹುದಾದ ಉತ್ತಮ ಲ್ಯಾಪ್-ಟಾಪ್ ಕೊಡಿಸಿದೆ. ಅವರು ಅದನ್ನು ಅವರ ಮಗನಿಗೆ ಕೊಟ್ಟರು. ಮಗನಿಗೆ ಕಂಪ್ಯೂಟರ್ ಗೇಮ್ ಆಡುವ ಅಭ್ಯಾಸ. ಆತ ತಾನು ತಂದ ಹೊಸ ಗೇಮ್ ಹಾಕಲು ಪ್ರಯತ್ನಿಸಿದ. ಅದು ಅವನ ಲ್ಯಾಪ್-ಟಾಪ್ ಆ ಗೇಮ್ ಆಡಲು ಸಮರ್ಥವಿಲ್ಲ (minimum configuration) ಎಂದು ಸೂಚಿಸಿತು. ಆತ ತನ್ನ ತಂದೆಯ ಬಳಿ ಹೋಗಿ 'ಅಪ್ಪ ಲ್ಯಾಪ್-ಟಾಪ್ ನಲ್ಲಿ ನನ್ನ ಕಾಲೇಜಿನ ಒಂದು ಸಾಫ್ಟವೇರ್ ಹಾಕ್ಕೋಬೇಕಿತ್ತು ಅದು ಹಾಕ್ಕೋದಿಕ್ಕೆ ಕೊಡ್ತಾ ಇಲ್ಲ, ಸರಿ ಇಲ್ಲ ಈ ಲ್ಯಾಪ್-ಟಾಪ್ ಅನ್ಸುತ್ತೆ' ಅಂದ.
ಆತನ ತಂದೆ ನನಗೆ ಫೋನ್ ಮಾಡಿ 'ಏನೋ, ಲ್ಯಾಪ್-ಟಾಪ್ ಅವನಿಗೆ ಕಾಲೇಜಿನ ಸಾಫ್ಟವೇರ್ ಹಾಕೋದಿಕ್ಕೆ ಕೊಡ್ತಾ ಇಲ್ಲವಂತೆ, ಎಂಥ ಲ್ಯಾಪ್-ಟಾಪ್ ಕೊಡ್ಸಿದ್ದೀಯೋ ಇದು.....?' ದಡಬಡನೆ ಒಂದೇ ಸಮನೆ ನನ್ನನ್ನು ದೂಷಿಸಿದ್ದೇ.. ವಿಷಯ ಏನು ಅನ್ನೋದನ್ನ ತಿಳಿಯುವ ಪ್ರಯತ್ನ ಕೂಡ ಮಾಡಲಿಲ್ಲ. ನನಗೋ, 'ನೀವು ಕೊಟ್ಟ ದುಡ್ಡಿಗೆ ಬರೋದು ಇಷ್ಟೇಯ' ಎಂದು ಹೇಳುವ ಹಾಗೂ ಇಲ್ಲ. ತುಂಬಾ ಹತ್ತಿರದವರು ಬೇರೆ, ಸುಮ್ಮನೆ ನಿಷ್ಠುರ ಮಾಡಿಕೊಳ್ಳೋ ಹಾಗೆ ಇಲ್ಲ. ಇದಕ್ಕೆ ನಾನು ಏನೆಂದೂ ಉತ್ತರ ಕೊಡಲಿ? ನಾನು ಯಾವ ತಪ್ಪಿಗೆ ಆ ಮಾತುಗಳನ್ನು ಕೇಳಲಿ?

ಇಲ್ಲಿ ಯಾರ ತಪ್ಪು ಯಾರು ಸರಿ ಅನ್ನೋದನ್ನ ನಾನು ಸಮರ್ಥಿಸಲು ಬಯಸುತ್ತಿಲ್ಲ; ಇಲ್ಲಿ ನನಗೆ ತಿಳಿಯದಿದ್ದದ್ದು ಒಂದು ವಿಷಯ ಅಂದ್ರೆ, ಜನ ಯಾಕೆ ಒಂದು ವಿಷಯ ಮಾತನಾಡುವ ಮೊದಲು, ಅದು ಬಾಯಿಯಿಂದ ಹೊರಬರುವ ಮೊದಲು ಯೋಚಿಸುವುದಿಲ್ಲ? ಮಾತನಾಡುವ ವಿಷಯದ ಪರಿಪಕ್ವತೆ ಜನ ತಿಳಿಯಲು ಯಾಕೆ ಬಯಸುವುದಿಲ್ಲ? ಇಂದಿನ ಜನಾಂಗ (ಬಹುಶಃ ನಾನೂ ಇದರಿಂದ ಹೊರತೇನಲ್ಲ) ಯಾಕೆ ಇಷ್ಟೊಂದು ತಾಳ್ಮೆ ಕಳೆದುಕೊಂಡಿದ್ದಾರೆ? ತಾನು ಮಾತನಾಡುವ ಸಂಗತಿಗಳಮೇಲೆ ಯಾಕೆ ಅವರಿಗೆ ಹಿಡಿತ ಇಲ್ಲ? ಪರಿಪೂರ್ಣ ಉತ್ತರ ನಿಜಕ್ಕೂ ನನ್ನಲ್ಲಿ ಇಲ್ಲ.

ಇನ್ನೂ ಹೆಚ್ಚಿನವರನ್ನು ನೋಡಿದ್ದೇನೆ ತನ್ನದೇನೋ ಒಂದನ್ನು ಸಮರ್ಥಿಸಿ ಬಿಡುತ್ತೇನೆ ಎಂಬ ಯೋಚನೆಯಲ್ಲಿ ಮಾತನಾಡುತ್ತಾರೆ. ಯಾರಾದರೂ ಮಾತನಾಡುವಾಗ ಒಮ್ಮೆ ಗಮನಿಸಿ, ಅವರಿಗೆ ತಾವು ಹೇಳಿದ ವಿಷಯವನ್ನು ಕೂಡಲೇ ಸಮರ್ಥಿಸಿ ಬಿಡಬೇಕೆಂಬ ತರಾತುರಿಯಲ್ಲಿ ಏನೇನೋ ಸರ್ಕಸ್ ಮಾಡಿ ಮಾತನಾಡಲು ಪ್ರಯತ್ನಿಸುತ್ತಿರುತ್ತಾರೆ. 'ಓಹೋ, ಏನೋ ಸಾಧಿಸಿಬಿಡುತ್ತೇನೆ ಈಗ' ಎಂಬಂತೆ ಮಾತನಾಡುತ್ತಾರೆ. ಎದುರಿನವನು ವಿಷಯವನ್ನು ಇವರು ಎಣಿಸಿದಂತೆ ಅಂದುಕೊಳ್ಳದಿದ್ದಲ್ಲಿ, ಏನೋ ಒಂದನ್ನು ಕಳೆದುಕೊಳ್ಳುತ್ತಿರುವಂತೆ ಚಡಪಡಿಸುತ್ತಿರುತ್ತಾರೆ. ತಾವು ಈಗ ಮಾತನಾಡದಿದ್ದಲ್ಲಿ ತಮ್ಮನ್ನು ಏನೋ ಶಿಕ್ಷೆಗೆ ಗುರಿಪಡಿಸಿ ಬಿಡುತ್ತಾರೆ ಎಂಬಂತೆ ವರ್ತಿಸುತ್ತಾರೆ. ಈ ತರಾತುರಿಯಲ್ಲಿ ಮಾತನಾಡುತ್ತಿರುವ ವಿಷಯದ ಆಳ ಅಳೆಯಲು ಮರೆತುಬಿಡುತ್ತಾರೆ.
ನನ್ನ ಪ್ರಶ್ನೆ ಒಂದೇ (ನನಗೂ ಸೇರಿಸಿ ಕೇಳಿಕೊಳ್ಳುತ್ತೇನೆ), ಯಾಕೆ ಈ ಸರ್ಕಸ್? ಏನನ್ನು ಸಮರ್ಥಿಸಿ ಸಾಧಿಸಲು ಯತ್ನಿಸುತ್ತಿದ್ದೇವೆ ನಾವು? ಯಾಕೆ ಯಾರದ್ದೋ ಮನವೊಲಿಸುವಲ್ಲಿ ನಮ್ಮ ಜೀವನ ವ್ಯರ್ಥ ಮಾಡುತ್ತಿದ್ದೇವೆ? ಯಾವುದೋ ಒಂದು ಅಯೋಗ್ಯ ವಿಷಯದ ಸಮರ್ಥನೆಯಿಂದ ನಮಗೇನು ಲಾಭ? ಅದನ್ನು ನಾವು ಸಮರ್ಥಿಸದಿದ್ದಲ್ಲಿ ಕಳೆದುಕೊಳ್ಳುವುದಾದರೂ ಏನನ್ನು? (ಇಲ್ಲಿ ಲಾಭ ನಷ್ಟ ಎಂಬ ಪದದ ಬಳಕೆಯಿಂದ ಕೆಲವರು ನನ್ನಲ್ಲಿ ಕೇಳಿದ್ದರು, "ಓಹೋ, ನಿನ್ನ ಅರ್ಥದಲ್ಲಿ ಯಾವುದೇ ಕೆಲಸ ಮಾಡುವ ಮೊದಲು ಏನೋ ಒಂದು ಲಾಭ/ನಷ್ಟ ಸಿಗುತ್ತೆ ಅನ್ನೋದನ್ನ ಇಟ್ಟುಕೊಂಡೇ ಮಾಡಬೇಕಾ?". ಇಲ್ಲ ಸ್ವಾಮಿ ಇಲ್ಲಿ ನನ್ನನ್ನು ತಪ್ಪು ತಿಳಿಯಬೇಡಿ, ನಾನು ನಿಮ್ಮ "ವ್ಯಾಪಾರದ" ಲಾಭ ನಷ್ಟದ ಬಗ್ಗೆ ಹೇಳಬಯಸುತ್ತಿಲ್ಲ, ನಾನು ಹೇಳುತ್ತಿರುವುದು ನಮ್ಮ ಮೌಢ್ಯತೆಯ ಬಗ್ಗೆ, ಅಷ್ಟೇ.)

ನಾನಾಗಲೇ ಹೇಳಿದಂತೆ ಇದಕ್ಕೆ ಪರಿಪೂರ್ಣ ಉತ್ತರ ನನ್ನಲ್ಲಿ ಇಲ್ಲ. ಆದರೆ ಸಮಸ್ಯೆಯ ಮೂಲ ಅರಿಯುವ ಪ್ರಯತ್ನ ಮಾಡಬೇಕಿದೆ.

ಈ ಬದಲಾವಣೆಯ ಮೂಲ, ನನಗೆ ಅನ್ನಿಸಿದಂತೆ, ನಾವು ನಮ್ಮನ್ನು ಸಮರ್ಥಿಸುವಲ್ಲಿ ತೊಡಗಿರುವುದರಲ್ಲಿ ಇದೆ. ನಮ್ಮ ಸಮರ್ಥನೆ ಎಂಬ ತಪ್ಪು ಹಾದಿಯಲ್ಲಿ ಏನು ಅಡಚಣೆಗಳು ಬಂದರೂ ಅದನ್ನು ಮೀರಿ ಹೋಗಬೇಕೆಂಬ ಕೆಟ್ಟ ಹಟದಿಂದ ಶುರುವಾಗಿದೆ. ಇದರ ಇನ್ನೊಂದು ಮುಖ, ನಮ್ಮ ದಾರಿಗೆ ಅಡಚಣೆ ಎಂದು ತಿಳಿದು 'ಬೇರೆಯವರ ಮೇಲೆ ತಪ್ಪು ಹೊರಿಸಿ' ನಾವು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ನಮ್ಮನ್ನು (ನಾನು + ನನ್ನನ್ನು + ನನ್ನದು) ಅತೀ ಬುದ್ದಿವಂತನೆಂದು, ಅತೀ ತಿಳಿದವನೆಂದು ತೋರಿಸಿ ಬಿಡುತ್ತೇನೆ ಎಂಬ ಕೆಟ್ಟ ಚಟದಲ್ಲಿ ನಾವು ಬೇರೆಯವರ ಮೇಲೆ ಗೂಬೆ ಕೂರಿಸುವ ಯತ್ನದಲ್ಲಿದ್ದೇವೆ. ಕೊನೆಗೆ ವ್ಯರ್ಥ ಸಮರ್ಥನೆಯ ಹಾದಿಯಲ್ಲಿಯೇ ಉಳಿದುಬಿಡುತ್ತೇವೆ.
ಬಹುಶಃ, ನನಗನ್ನಿಸಿದಂತೆ, ಈ ಸಮಸ್ಯೆಯಿಂದ ಹೊರಬರಲು ಪ್ರಯತ್ನಿಸುವುದಾದರೆ, ನಾನು ಜೀವನದಲ್ಲಿ ಏನನ್ನು ತಿಳಿದಿದ್ದೆನೊ ಅದನ್ನು ಸಮರ್ಥಿಸಿ ಸಾಧಿಸ ಹೊರಡುವ ಮೊದಲು ನಾನು ತಿಳಿದ ವಿಷಯದ ನೈಜತೆ ಎಷ್ಟು ಎಂಬುದನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು. ಇದನ್ನು ತಿಳಿಯಲು, ಈ ಪ್ರಯತ್ನದ ಮೊದಲ ಹೆಜ್ಜೆಯಾಗಿ "ಬೇರೆಯವರ ಮೇಲೆ ಗೂಬೆ ಕೂರಿಸುವುದನ್ನು ಮೊದಲು ನಾವು ನಿಲ್ಲಿಸಬೇಕು".

ಅಂತಾನು ಮಿಂತಾನುಮೆಂತೊ ನಿನಗಾದಂತೆ |
ಶಾಂತಿಯನು ನೀನರಸು ಮನ ಕೆರಳಿದಂದು ||
ಸಂತವಿಡುತೊಮ್ಮೆ ಶಿಕ್ಷಿಸುತೊಮ್ಮೆ ಶಿಶುವೆಂದು |
ಸ್ವಾಂತಮಂ ತಿದ್ದುತಿರು ಮಂಕುತಿಮ್ಮ ||

No comments:

Post a Comment