Friday, August 26, 2011

ಲೋಕೋ ಭಿನ್ನ ರುಚಿಃ

ಅವತ್ತು ಬೆಳಿಗ್ಗೆ 8 ಗಂಟೆಗೆ ಎದ್ದೆ. ಸೀದಾ ಅಡುಗೆಮೆನೆಗೆ ಹೋಗಿ "ಆಮಾ.. ತಿಂಡಿ ಎಂತ ಇವತ್ತು?" ಎಂದೆ.
"ಅಕ್ಕಿ ದೋಸೆ ಕಣೋ" ಅಮ್ಮ ಅಂದರು.
ಅಸ್ಟರಲ್ಲಿ ಅಕ್ಕ ಒಳಗೆ ಬಂದು "ವಾವ್ಹ್ ಅಕ್ಕಿ ದೋಸೆನ" ಅಂದ್ರು.
"ಅಯ್ಯೋ ನಿನ್ ಬರೀ ಅವಳಿಗೆ ಬೇಕಾದ್ದು ಮಾತ್ರ ಮಾಡ್ತೀಯಾ. ಮೊನ್ನೆ ತಾನೇ ಅಕ್ಕಿ ದೋಸೆ ಮಾಡಿದ್ದೆ. ಇವತ್ತು ಅಕ್ಕಿ ದೋಸೆ. ನಾನ್ ಕೇಳಿದ್ದು ಉದ್ದಿನ ದೋಸೆ, ಅದು ಮಾತ್ರ ಮಾಡ್ಬೇಡ ನೀನು.." ಎಂದು ಅಮ್ಮನ ಮೇಲೆ ಸಿಟ್ಟು ಮಾಡಿಕೊಂಡೆ.
ಅಸ್ಟರಲ್ಲಿ ಅಪ್ಪ ಆಚೆ ಕೋಣೆಯಿಂದ ಕೂಗಿ ಹೇಳಿದ್ರು, "ಯಾಕೋ ಅಕ್ಕಿ ದೋಸೆ ತಿಂದ್ರೆ ಏನಾಗುತ್ತೆ ನಿಂಗೆ? ಮನುಷ್ಯರು ತಿನ್ನೋ ವಸ್ತುನೇ ತಾನೆ ಅದು."
"ಹೀಗೆ ಒಂದೊಂದೇ ನೆಪ ಹೇಳ್ತಾ ಏನೋ ಒಂದ್ ಮಾಡ್ತೀರಾ" ಹೇಳಿ ಅಡುಗೆಮನೆಯಿಂದ ಹೊರ ನಡೆದೆ.
ನೇರ ಅಪ್ಪನ ಕೋಣೆಗೆ ಹೋದೆ.
"ಅಪ್ಪಯ್ಯ ನಂಗೆ ಈಸಲ ಶಾಲೆಗೆ ಹೊಸ ಬ್ಯಾಗ್ ಬೇಕು".
"ನಂಗೂ ಹೊಸ ಬ್ಯಾಗ್ ಬೇಕಪ್ಪಯ್ಯ" ಅಂದ್ಲು ಅಕ್ಕ.
"ನಂಗೆ ಗ್ರೀನ್ ಕಲರ್ ಬ್ಯಾಗು, ಅದರತುಂಬ ಪಾಕಿಟ್ ಇರಬೇಕು, ಅದಕ್ಕೆ ಎರಡು ಜಾಗ ಬೇಕು, ಒಂದ್ರಲ್ಲಿ ಪುಸ್ತಕ ಇಡುಕೆ ಇನ್ನೊಂದ್ರಲ್ಲಿ ನೋಟ್ಸ್ ಇಡುಕೆ" ಅಂದೆ ನಾನು.
"ಅಪ್ಪಯ್ಯ ನಂಗೆ ಬ್ಲಾಕ್ ಕಲರ್ ಬ್ಯಾಗು. ಬ್ಲಾಕ್ ಕಲರ್ ಬ್ಯಾಗು ಬೇಗ ಮಣ್ಣ್ ಆಗೋಲ್ಲ ಗೊತ್ತಾ.." ಅಂದ್ಲು ಅಕ್ಕ.
"ನನ್ನ ಗ್ರೀನ್ ಬ್ಯಾಗೂ ಮಣ್ಣ್ ಆಗೋಲ್ಲ, ಹೂಂ.." ಅಂತ ಕೋಪ ಮಾಡಿಕೊಂಡೆ.
"ನೀವಿಬ್ರೂ ನನ್ ಕೋಣೆಯಿಂದ ಮೊದಲು ಹೊರಗೆ ಹೋಗಿ, ನಂಗೆ ಆಫೀಸಿಗೆ ಲೇಟ್ ಆತ್ತು, ಸಂಜೆ ಮಾತಾಡುವ" ಅಂದ್ರು ಅಪ್ಪ.
"ನಂಗೆ ಗ್ರೀನ್ ಕಲರ್ ಹೊಸ ಬ್ಯಾಗ್ ಬೇಕು, ಮುಂಚೇ ಹೇಳಿದ್ದೆ ನಾನು.." ಅಂತ ನಾನು ಹೇಳಿ, ನಾನು ಅಕ್ಕ ಕೋಣೆಯಿಂದ ಹೊರಗೆ ಹೋದೆವು.

ನನ್ನಲ್ಲಿ ಇಂತಹ ಭಾವನೆಗಳು ಏಕೆ ಬರುತ್ತವೆ? ನಮಗೆ ಇದು ಬೇಕು, ಇದು ಅವನದ್ದು, ನನಗೆ ಇದು ಬೇಡ, ಇದು ನನ್ನ ಇಷ್ಟದ್ದು, ನನಗೆ ಅದೆಂದ್ರೆ ತುಂಬಾ ಇಸ್ಟ. ಒಂದು ರೀತಿಯಲ್ಲಿ ಎಲ್ಲದರಲ್ಲೂ  ತಾರತಮ್ಯದ ಮನಸ್ಸು. ನಮಗೆ ದೊರೆತದ್ದರಲ್ಲಿ ಸಂತೋಷವಿಲ್ಲ. ಪ್ರತಿ ಸಣ್ಣ ವಿಷಯಕ್ಕೂ ವಿಷಾದದ ಮನೋಭಾವ, ಪ್ರತೀ ಚಿಕ್ಕ ಪುಟ್ಟ ವಿಷಯದಲ್ಲೂ ದುಖಃ. ಯಾಕೆ ನಮ್ಮಲ್ಲಿ ಇಂತಹ ಮನೋವ್ಯಾಧಿ? ಅದೂ ಇಸ್ಟು ಸಣ್ಣ ವಯಸ್ಸಿನಲ್ಲಿ (ನನಗೆ ಮತ್ತು ನಿಮಗೆ)! ನನ್ನ ಮೇಲಿನ ಉದಾಹರಣೆ ಒಂದು ಚಿಕ್ಕ ಸ್ಯಾಂಪಲ್ಲು ಅಸ್ಟೇ. ಅದರ ಹತ್ತು ಪಟ್ಟು ನೂರು ಪಟ್ಟು ದೊಡ್ಡ ಉದಾಹರಣೆಗಳಿವೆ. ನಾವು ಬೆಳೆದಂತೆ ನಮ್ಮ ಈ ಭಾವನೆಗಳು ಬೆಳೆಯುತ್ತವೆ. ಮೊದಲು ಸಣ್ಣ ಪುಟ್ಟ ವಿಷಯಗಳ ಜೊತೆ ಕೂಡಿದ್ದು, ಬೆಳೆಯುತ್ತಾ ನಮ್ಮ ಪ್ರತೀ ಹೆಜ್ಜೆಯಲ್ಲೂ ಇವು ಸೇರಿಕೊಳ್ಳುತ್ತವೆ.
ಹೆಚ್ಚಿನ ಜನ ಇದನ್ನು ಒಪ್ಪಲು ರೆಡಿ ಇಲ್ಲ. ಬಹುಶಃ ನಮ್ಮಲ್ಲಿ ನಿಜವನ್ನು ನಿಜವೆಂದು ಒಪ್ಪಿಕೊಳ್ಳುವ ವ್ಯವಧಾನವೂ ಉಳಿದಿಲ್ಲ ಎಂದು ಅನ್ನಿಸುತ್ತೆ. ಅದಕ್ಕೆ ಜನ (ನಾನೂ ಸೇರಿ) ಹೇಳಿದ್ರು
"ಅವರವರ ಮನದಂತೆ ದೃಷ್ಟಿಯೂ ಬೇರೆ"... "ಅವರವರ ಭಾವಕ್ಕೆ ಅವರವರ ಭಕುತಿಗೆ"... "ಅವರವರ ದಾರಿ ಅವರವರಿಗೆ"...

ನಮ್ಮ ವಿಚಾರಗಳು ಎಲ್ಲಿಯವರೆಗೆ ಕುಗ್ಗಿವೆ ಅಂದ್ರೆ, ಒಂದು ಉದಾಹರಣೆ ನೋಡಿ,
ನಮಗೆ ತುಂಬಾ ಮೈ ಕೈ ನೋವು ಎಂದು ನಮ್ಮ ಫ್ಯಾಮಿಲಿ ಡಾಕ್ಟರ್ ಬಳಿ ಹೋಗುತ್ತೇವೆ. ಡಾಕ್ಟರ್ ಪರೀಕ್ಷೆ ಮಾಡಿ "ಏನು ಇಲ್ಲಪ್ಪಾ ನಿನಗೆ, ಸಾದಾರಣ ಸುಸ್ತು ಅಸ್ಟೆಯ. ಮನೆಗೆ ಹೋಗಿ ಸ್ವಲ್ಪ ರೆಸ್ಟ್ ತಗೋ ಸಾಕು. ಬೇರೆ ಏನೂ ಮಾತ್ರೆ ಔಷಧಿ ಬೇಡ" ಅಂತಾರೆ. ಅದಕ್ಕೆ ನಮಗೆ ಸಮಾಧಾನ ಇಲ್ಲ, ಆದರೆ ನಾವು ಅಲ್ಲಿ ಡಾಕ್ಟರ್ ಎದುರು ತಲೆ ಆಡಿಸುತ್ತೇವೆ, ಹೊರಗೆ ಬಂದು "ಎಂತ ಡಾಕ್ಟರೋ, ಸರಿಯಾಗಿ ಒಂದು ಪರೀಕ್ಷೆ ಮಾಡಿ ಔಷಧಿ ಕೊಡಬಾರ್ದ, ಥೂ".
ಹೇಗಿದೆ??.. ನಮ್ಮನ್ನು ನಾವು ಒಮ್ಮೆ ನೋಡಿಕೊಳ್ಳಬೇಕು ಇಂಥ ಸಮಯದಲ್ಲಿ.
ಡಾಕ್ಟರ್ ಹೇಳಿದ್ದೇನು, "ನಿಮಗೆ ಏನೂ ಆಗಿಲ್ಲ ನೀವು ಸರಿಯಾಗಿದ್ದೀರಾ.." ಎಸ್ಟು ಪಾಸಿಟಿವ್ ಆಗಿ ಹೇಳಿದ್ರು. ಎಸ್ಟು ಯೋಗ್ಯವಾಗಿ ಹೇಳಿದ್ರು. ಆದರೆ ನಾವು ಮಾಡಿದ್ದೇನು?..
ನಮಗೆ ಸ್ವತಃ ನಮ್ಮ ಮೇಲೇ ನಂಬಿಕೆ ಇಲ್ಲ, ಇನ್ನೂ ಆ ಡಾಕ್ಟರ್ ಹೇಳಿದ್ದು ನಮಗೆ ಎಲ್ಲಿ ನಂಬಿಕೆ ಬರುತ್ತೆ? ಯೋಚಿಸಿ ನೋಡಿ.

ಇದಕ್ಕೆ ಪರಿಹಾರ ಹುಡುಕಲು ಯೋಚಿಸಿದೆ. ಬೇರೆ ಬೇರೆ ಪುಸ್ತಕಗಳನ್ನು ಓದಿದೆ. ಸೂಕ್ತ ಪರಿಹಾರ ಸಿಗಲಿಲ್ಲವಾದರೂ ಒಂದು ಪುಸ್ತಕದಲ್ಲಿ ಬರೆದ ವಿಷಯ ತುಂಬಾ ನನ್ನ ಗಮನ ಸೆಳೆಯಿತು. ಇವೆಲ್ಲದುದಕ್ಕೆ ಮೂಲ ಕಾರಣ ನಮ್ಮ "ದೃಷ್ಟಿಕೋನ". ನಾವು ನೋಡುವ ದೃಷ್ಟಿಕೋನದಿಂದ ನಮ್ಮ ನಡತೆ ಮತ್ತು ಮನಸ್ಥಿತಿಗಳು ಬದಲಾಗುತ್ತವೆ. ಅಂದರೆ ನಾವು ನೋಡುವ "ದೃಷ್ಟಿಕೋನ" ನಮ್ಮ ಪರಿಸರವನ್ನು ಬದಲಾಯಿಸುತ್ತೆ. ಅಂತೆಯೇ ಇದರ ಇನ್ನೊಂದು ಭಾಗವಾಗಿ ನಮ್ಮ ಪರಿಸರದಲ್ಲಿ ಬದಲಾವಣೆ ಆದಂತೆ ನಮ್ಮ ದೃಷ್ಟಿಕೋನವೂ ಬದಲಾಗುತ್ತದೆ. ನಿಜ ಒಂದೇ ವಿಷಯಕ್ಕೆ ಎರಡು ಮುಖಗಳಿರುತ್ತವೆ. ಈ ಕೆಳಗಿನ ಎರಡು ವಾಕ್ಯಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ,
"ಅವಳು ಸುಂದರವಾಗಿದ್ದಾಳೆ, ಹಾಗಾಗಿ ನೀನವಳನ್ನು ಪ್ರೀತಿಸುತ್ತಿಯೆ."
ಅಥವಾ
"ನೀನವಳನ್ನು ಪ್ರೀತಿಸುತ್ತಿಯೆ, ಹಾಗಾಗಿ ಅವಳು ನಿನಗೆ ಸುಂದರವಾಗಿ ಕಾಣುತ್ತಾಳೆ."

ಸ್ವಲ್ಪ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸೋಣ. ಸಿಂಪಲ್ ಆಗಿ ಹೇಳುತ್ತೇನೆ - ನಾವು ಚಿಕ್ಕಂದಿನಿಂದ ನೋಡಿ ಕಲಿತ ವಿಷಯಗಳೇ ನಮ್ಮ ಮೇಲೇ ಪ್ರಭಾವ ಬೀರಿದವು; ಅವು ನಮ್ಮಲ್ಲಿ ಪ್ರಭಾವ ಬೀರಿದ ಕಾರಣದಿಂದಾಗಿಯೇ ನಾವು ನೋಡುವ ದ್ರಷ್ಟಿಕೋನವೂ ಬದಲಾಗುತ್ತಾ ಹೋಗಿ ನಮ್ಮ ಈಗಿನ ಪರಿಸ್ಥಿತಿ ತಲುಪಿದ್ದೇವೆ. ಇದನ್ನು ನಿಮಗೆ ಒಂದೇ ಉದಾಹರಣೆಯಿಂದ ತಿಳಿಸಲು ಪ್ರಯತ್ನಿಸುತ್ತೇನೆ. ಈ ಕೆಳಗಿನ ಉದಾಹರಣೆಯಲ್ಲಿ ನಮ್ಮ ಮನಸ್ಸಿನಲ್ಲಿ ಕ್ಷಣದಲ್ಲಿ ಆದ ಬದಲಾವಣೆಗಳನ್ನು ನೋಡಿ. ನಮ್ಮ ದೃಷ್ಟಿಕೋನದಲ್ಲಿ ಆದ ಬದಲಾವಣೆಗಳು ಹೇಗೆ ನಮ್ಮ ಪರಿಸರದಲ್ಲಿ ಬದಲಾವಣೆ ತರುತ್ತವೆ, ಅದೇ ಪರಿಸರದಲ್ಲಿ ಆದ ಬದಲಾವಣೆ ನಮ್ಮ ದೃಷ್ಟಿಕೋನದ ಪುನರ್ ಬದಲಾವಣೆಗೆ ಹೇಗೆ ಸಾಧ್ಯವಾಯಿತು ಎಂದು ಗಮನಿಸಿ.
(ಇದೊಂದು ಕಾಲ್ಪನಿಕ ಉದಾಹರಣೆ)..
ಅದೊಂದು ಬೆಳಿಗ್ಗೆ, ನಾನು ಒಂದು ಪಾರ್ಕ್ ನಲ್ಲಿ ಬೆಂಚಿನಮೇಲೆ ಕುಳಿತಿದ್ದೆ. ಕೆಲವರು ಪಕ್ಕದ ಬೆಂಚಿನಮೇಲೆ ಕುಳಿತು 
ಪೇಪರ್ ಓದುತ್ತಿದ್ದರು, ಇನ್ನು ಕೆಲವರು ಕಣ್ಣು ಮುಚ್ಚಿ ರೆಸ್ಟ್ ತಗೋತ ಇದ್ದರು. ಆಗ ಒಬ್ಬ ಮನುಷ್ಯ ತನ್ನ ಮೂವರು ಚಿಕ್ಕ ಚಿಕ್ಕ ಮಕ್ಕಳೊಂದಿಗೆ ಬಂದು ನನ್ನ ಪಕ್ಕದಲ್ಲಿ ಕುಳಿತುಕೊಂಡು ಸುಮ್ಮನೆ ಆಕಾಶದ ಕಡೆ ನೋಡತೊಡಗಿದ. ಆತನ ಮಕ್ಕಳೋ ಶೈತಾನನ ಪುತ್ರರು, ಆತನಿಂದ ಜಾರಿಕೊಂಡು ಅಲ್ಲೆಲ್ಲ ಓಡಾಡತೊಡಗಿದರು. ಆತ ಏನೂ ಮಾಡಲಿಲ್ಲ, ಸುಮ್ಮನೆ ಕಣ್ಣು ಮುಚ್ಚಿಕೊಂಡ. ಆ ಮಕ್ಕಳ ತುಂಟತನ ಇನ್ನೂ ಜೋರಾಯಿತು. ಪಕ್ಕದ ಜನರ ಪೇಪರ್ ಎಳೆಯುವುದು, ಮಲಗಿದವರನ್ನು ಸುಮ್ಮನೆ ತಟ್ಟಿ ಎಬ್ಬಿಸುವುದು, ಹೀಗೆ ಮಾಡತೊಡಗಿದರು. ಕೀಟಲೆ ಹೆಚ್ಚಾಗತೊಡಗಿತು, ಜನರಿಗೆ ಇದು ಕಿರಿಕಿರಿ ಆಗತೊಡಗಿತು. ನಾನು ಆತನೆಡೆಗೆ ನೋಡಿದೆ, ಆತ ಇದಾವುದು ಪರಿವೆ ಇಲ್ಲದೆ ಸುಮ್ಮನೆ ಕಣ್ಣು ಮುಚ್ಚಿ ಕುಳಿತಿದ್ದ. ನಾನೂ ರೋಸಿ ಹೋದೆ. (ಇಲ್ಲಿಂದ ಮುಂದೆ ನನ್ನ ದೃಷ್ಟಿಕೋನ ನನ್ನ ನಡತೆ ಮತ್ತು ನನ್ನ ಮನಸ್ಥಿತಿ ಮೇಲೆ ಬೀರಿದ ಪರಿಣಾಮಗಳನ್ನು ನೋಡಿ) 'ಇದೆಂಥಾ ಪರಿ, ಮಕ್ಕಳನ್ನು ಇಲ್ಲಿಗೆ ತಂದು ಬಿಟ್ಟು ಅವನ್ನು ಸ್ವಲ್ಪವಾದರೂ ನಿಯಂತ್ರಣದಲ್ಲಿಡುವುದ ಬಿಟ್ಟು ಈ ಮನುಷ್ಯ ಕಣ್ಣು ಮುಚ್ಚಿ ತನಗೆ ಸಂಬಂಧವೆ ಇಲ್ಲದಂತೆ ಕೂತಿದ್ದಾನೆ. ನನ್ನನ್ನೂ ಸೇರಿ ಇಲ್ಲಿರುವ ಎಲ್ಲರಿಗೂ ಎಸ್ಟು ತೊಂದರೆ ಆಗುತ್ತಿದೆ'. ಕೊನೆಗೆ ಕಿರಿ ಕಿರಿ ಹೆಚ್ಚಾಗಿ ತಾಳಲಾರದೇ ಆತನನ್ನು ತಟ್ಟಿ ಎಬ್ಬಿಸಿ ಕೇಳಿಯೇ ಬಿಟ್ಟೆ, "ಏನಿದು, ಸ್ವಲ್ಪವಾದರೂ ಜವಾಬ್ದಾರಿ ಬೇಡವೇ. ನಿಮ್ಮ ಮಕ್ಕಳು ಇಲ್ಲಿ ಎಲ್ಲರಿಗೂ ತೊಂದರೆ ಕೊಡುತ್ತಿವೆ. ನೀವು ನೋಡಿದರೆ ಇಲ್ಲಿ ಕಣ್ಣು ಮುಚ್ಚಿ ತನಗೆ ಸಂಬಂಧವೆ ಇಲ್ಲ ಅನ್ನೋ ತರ ಕೂತಿದ್ದಿರಿ".
--- ಇದು ನಾನು ಆ ಮನುಷ್ಯನನ್ನು ನೋಡಿದ ದೃಷ್ಟಿಕೋನ ನನ್ನ ಮನಸ್ಸಿನಮೇಲೆ ಬೀರಿದ ಪರಿಣಾಮಗಳು. ಕಥೆ ಮುಂದುವರಿಯುತ್ತೆ. ಈಗ ಆ ಮನುಷ್ಯನ ಉತ್ತರ ಕೇಳಿ.

ಆತ ಹೇಳಿದ "ಹೌದೇ, ಕ್ಷಮಿಸಿ, ನಾನು ತುಂಬಾ ಚಿಂತೆಯಲ್ಲಿದ್ದೆ, ತಿಳಿಯಲಿಲ್ಲ. ಮೂರು ದಿನಗಳ ಹಿಂದೆಯಷ್ಟೆ ನನ್ನ ಹೆಂಡತಿ ತೀರಿಹೋದಳು, ಆ ಮಕ್ಕಳು ತಮ್ಮ ತಾಯಿಯನ್ನು ಕಳೆದುಕೊಂಡವು. ನಿನ್ನೆ ತಾನೆ ಅಂತ್ಯ ಕ್ರಿಯೆಗಳೆಲ್ಲ ಮುಗಿದವು, ನನಗೆ ಮುಂದೆ ಏನು ಮಾಡಬೇಕೆಂದು ತೋಚುತ್ತಿಲ್ಲ."
"...ಓಹ್..." ನಾನು ಉದ್ಗರಿಸಿದೆ. "ಕ್ಷಮಿಸಿ ನಾನು ನಿಮ್ಮನು ತಪ್ಪಾಗಿ ತಿಳಿದುಕೊಂಡೆ. ನನಗೆ ಈ ವಿಷಯ ತಿಳಿದಿರಲಿಲ್ಲ. ದಯವಿಟ್ಟು ಬೇಜಾರು ಮಾಡ್ಕೊಬೇಡಿ. ಪಾಪ ಮಕ್ಕಳು....."
ಪೂರ್ತಿ ಸನ್ನಿವೇಶ ಹೇಗೆ ಬದಲಾಯಿತು ನೋಡಿ. ಅದೇ ಒಂದು ಘಳಿಗೆಯ ಮೊದಲು ನಾನು ಅವನಲ್ಲಿ ತೋರಿದ್ದ ಸಿಟ್ಟು ಈಗ ಕ್ಷಣಾರ್ಧದಲ್ಲಿ ಮಾಯ. ನನ್ನ ದೃಷ್ಟಿಕೋನ ಕ್ಷಣದಲ್ಲಿ ಬದಲಾಯಿಸಿತು. ನನ್ನ ಮನಸ್ಸಿನ ಮೇಲೆ ಆದ ಪರಿಣಾಮ ಅವನ ಮೇಲಿನ ನನ್ನ ಭಾವನೆಯನ್ನು ಬದಲಾಯಿಸಿತು.
ಅಂದರೆ, ನಾವು ನೋಡುವ ದೃಷ್ಟಿಕೋನ ನಮ್ಮ ಪರಿಸರವನ್ನು ಬದಲಾಯಿಸುತ್ತೆ. ಅಂತೆಯೇ ನಮ್ಮ ಪರಿಸರದಲ್ಲಿ ಬದಲಾವಣೆ ಆದಂತೆ ನಮ್ಮ ದೃಷ್ಟಿಕೋನವೂ ಬದಲಾಗುತ್ತದೆ. ಇದನ್ನು ನಾವು ಅರ್ಥ ಮಾಡಿಕೊಳ್ಳಬೇಕು.

ಸರಿ, ಇದರ ಸುಧಾರಣೆ ಹೇಗೆ? ನನ್ನನ್ನು ನಾನು ಪ್ರಶ್ನಿಸಿಕೊಂಡೆ.

ನನ್ನ, ನಿಮ್ಮ ಮತ್ತು ಬಹಳಷ್ಟು ಜನರ ಮನೋವ್ಯಾಧಿ ನೋಡಿ,
ನಮಗೆ "ಸಮಸ್ಯೆ" ಇದೆ ಎಂಬುದು ಅರಿವಾಗುತ್ತೆ (ಅಸ್ಟು ಬುದ್ದಿ ಇದೆ ನಮಗೆ), ಆದರೆ ಅದರ ಪರಿಹಾರಕ್ಕೆ ನಾವು ಅವಲಂಬಿಸುವ ಮಾರ್ಗ ಮಾತ್ರ ಅನುಪಯುಕ್ತ (ಯೂಸ್ ಲೆಸ್). ಹೆಚ್ಚಿನ ಜನ ಒಂದು ಸಮಸ್ಯೆ ಇದೆ ಎಂದಾದರೆ ಆ ಸಮಸ್ಯೆಯ ಕಡೆ ಕೇಂದ್ರೀಕೃತವಾಗಿ (ಫೋಕಸ್) ಪರಿಹಾರಕ್ಕೆ ಪ್ರಯತ್ನಿಸುತ್ತಾರೆಯೇ ಹೊರತು, ಆ ಸಮಸ್ಯೆಯ ಮೂಲ ಎಲ್ಲಿಂದ ಎಂದು ಆಲೋಚಿಸುವುದಿಲ್ಲ. ಉದಾಹರಣೆಗೆ ನನ್ನಲ್ಲಿ ಹಣದ ಸಮಸ್ಯೆ ಇದೆ ಎಂದಾದರೆ ನಾನು ಹಣ ಮಾಡುವುದು ಹೇಗೆ.. ಹಣ ಹೇಗೆ ಪಡೆಯುವುದು.. ಎಂದು ಹಣದ ಮೇಲೆ ಫೋಕಸ್ ಮಾಡುತ್ತೇನೆ ಹೊರತು, ನನ್ನ ಹಣದ ಸಮಸ್ಯೆ ಹೇಗೆ ಶುರುವಾಯಿತು? ಆ ಶುರುವಾದ ಜಾಗವನ್ನ ಹೇಗೆ ಸರಿಪಡಿಸುವುದು ಎಂದು ಯಾವತ್ತೂ ಯೋಚಿಸುವುದಿಲ್ಲ. ಆ ಸಮಸ್ಯೆಗೆ ಮೂಲವಾದ ಜಾಗವನ್ನು ಸರಿಪಡಿಸದ ಹೊರತು ನಾನು ಎಸ್ಟು ಹಣ ಸಂಪಾದಿಸಿದರು ಅದು ನನ್ನಲ್ಲಿ ಉಳಿಯುವುದಿಲ್ಲ. ನಿಜ ತಾನೆ...

ಹಾಗೆಯೇ ನಾನು ಮೇಲೆ ಹೇಳಿದ ಸಮಸ್ಯೆಗೆ ಮೂಲವನ್ನು ಹುಡುಕಬೇಕು. ಈಗ ನಮ್ಮಲ್ಲಿ ಎರಡು ಚಾಯಿಸ್ ಇವೆ, ನಮ್ಮ ಪರಿಸರ ಬದಲಾದರೆ ನಮ್ಮ ದೃಷ್ಟಿಕೋನವನ್ನು ಬದಲಾಯಿಸಬಹುದು. ಅಥವಾ, ನಮ್ಮ ದೃಷ್ಟಿಕೋನ ಬದಲಾದಂತೆ ನಮ್ಮ ಪರಿಸರವೂ ಬದಲಾಗುತ್ತೆ. ಇವೆರಡರಲ್ಲಿ ಯಾವುದು ಸಮಂಜಸ?
ಮೊದಲನೆಯದು ಪರಿಸರವನ್ನು ಬದಲಾಯಿಸುವುದು.. ಇದು ಕಷ್ಟಸಾಧ್ಯ. ಎಲ್ಲ ಸಮಯದಲ್ಲೂ ನಮಗೆ ಅನುಕೂಲವಾದ ಪರಿಸರ ದೊರೆಯುವುದು ಕಷ್ಟ. ಹಾಗೂ ಹೀಗೂ ಪ್ರಯತ್ನ ಪಟ್ಟು ನಮ್ಮ ಪರಿಸರವನ್ನು ಬದಲಾಯಿಸ ಹೊರಟರೆ ಅದು ಬ್ರಹ್ಮ್ಹ ದಂಡ. ಏಕೆಂದರೆ ನಾನು ಮೊದಲೇ ಹೇಳಿದಂತೆ ಸಮಸ್ಯೆಯ ಮೂಲ ಇರುವುದು ನಮ್ಮ ದೃಷ್ಟಿಕೋನದಲ್ಲಿ, ಆದರೆ ನಾವು ಪ್ರಯತ್ನ ಪಡುತ್ತಿರುವುದು ನಮ್ಮ ಪರಿಸರ (ನಮ್ಮ ನಡತೆ ಮತ್ತು ನಮ್ಮ ಮನಸ್ಥಿತಿ) ಬದಲಾಯಿಸಲು. ಇದಕ್ಕೆ ಉತ್ತಮ ಉದಾಹರಣೆ ಕೊಡಲು ಬಯಸುತ್ತೇನೆ. ಹೇಗೆ ನಾವು ನಮ್ಮ ನಡತೆ ಮತ್ತು ಮನಸ್ಥಿತಿ ಬದಲಾಯಿಸುವುದರಿಂದ ಸಮಸ್ಯೆ ಪರಿಹಾರ ಆಗುವುದಿಲ್ಲ ಎಂದು ನೋಡೋಣ.

ನೀವು ಮೊದಲಬಾರಿಗೆ ಬೆಂಗಳೂರಿಗೆ ಬಂದಿದ್ದೀರಿ ಎಂದು ಇಟ್ಟುಕೊಳ್ಳೋಣ. ನಿಮಗೆ ಇಲ್ಲಿಯ ಮಾರ್ಗಗಳ ಪರಿಚಯ ಇಲ್ಲ. ನೀವು ಒಂದು ಅಂಗಡಿಗೆ ಹೋಗಿ ಒಂದು ಬೆಂಗಳೂರಿನ ನಕ್ಷೆ (ಮ್ಯಾಪ್) ಕೊಳ್ಳುತ್ತೀರಿ. ಆದರೆ ಆ ಮ್ಯಾಪ್ ನಲ್ಲಿ ಸಣ್ಣ ತಪ್ಪಾಗಿ, ಮೈಸೂರಿನ ನಕ್ಷೆಗೆ ಬೆಂಗಳೂರು ಎಂದು ಬರೆದಿದ್ದಾರೆ. ಅಂಗಡಿಯಾತ ತಿಳಿಯದೆ ನಿಮಗೆ ಆ ಮ್ಯಾಪ್ ಕೊಟ್ಟಿದ್ದಾನೆ. -- ಇಲ್ಲಿದೆ ಸಮಸ್ಯೆಯ ಮೂಲ, ಇಲ್ಲಿಂದ ಮುಂದೆ ಗಮನಿಸಿ.
ನಿಮಗೆ ಗೊತ್ತಾಗಿದೆ 'ತನಗೆ ಬೆಂಗಳೂರಿನ ಪರಿಚಯ ಇಲ್ಲ, ನಾನು ಒಂದು ರೀತಿಯ ಸಮಸ್ಯೆಯನ್ನು ಅನುಭವಿಸುತ್ತಿದ್ದೇನೆ'.
ಮೈಸೂರಿನ ಮ್ಯಾಪ್ ಇಟ್ಟುಕೊಂಡು ಬೆಂಗಳೂರಿನಲ್ಲಿ ತಿರುಗಾಡುವುದು ಸಾಧ್ಯವಿಲ್ಲ. ಸರಿ, ಈಗ ನಮ್ಮ ಫಾರ್ಮುಲಾದಂತೆ, ನಮ್ಮ ಪರಿಸರದಲ್ಲಿ ಬದಲಾವಣೆ ಮಾಡಲು ಪ್ರಯತ್ನಿಸೋಣ.
ಮೊದಲನೆಯದು ನಮ್ಮ ನಡತೆ ಯಲ್ಲಿ ಬದಲಾವಣೆ ತರೋಣ - 'ನೀವಂದುಕೊಳ್ಳುತ್ತೀರಿ ಬಹುಶಃ ಈ ರೋಡ್ ಆದ ನಂತರ ನನಗೆ ಬೇಕಾದ ರೋಡ್ ಬರಬಹುದು. ಸರಿ ನಾನು ಸ್ವಲ್ಪ ವೇಗವಾಗಿ ನಡೆಯುತ್ತೇನೆ (ನಡತೆಯಲ್ಲಿ ಬದಲಾವಣೆ) -- ಏನಾದರೂ ಫಲಿತಾಂಶ ದೊರೆಯುವುದೇ? ನಿಮ್ಮ ನಡತೆಯಲ್ಲಿ ಬದಲಾವಣೆ ತಂದುಕೊಂಡಿರಿ. ನಿಮಗೆ ಈಗ ಮೈಸೂರಿನ ಮ್ಯಾಪ್ ಇಟ್ಟುಕೊಂಡು ಬೆಂಗಳೂರು ತಿರುಗಬಹುದೇ? ಇಲ್ಲ, ಯಾಕಂದ್ರೆ ಸಮಸ್ಯೆ ನಿಮ್ಮ ನಡತೆಯದ್ದಲ್ಲ.
ಎರಡನೆಯದಾಗಿ ನಮ್ಮ ಮನಸ್ಥಿತಿಯಲ್ಲಿ ಬದಲಾವಣೆ ತರೋಣ. ನನ್ನ ಉದಾಹರಣೆಗೆ ಒಂದುರೀತಿಯ ಮನಸ್ಥಿತಿ ತೆಗೆದುಕೊಳ್ಳುತ್ತೇನೆ. - ನೀವು ಉದಾತ್ತ ಮನಸ್ಕರು. ನೀವು ಅಂದುಕೊಳ್ಳುತ್ತೀರಿ, ಸರಿ ಇದೆಲ್ಲ ದೇವರ ಇಚ್ಚೆ. ಹೇಗೆ ಅವನು ನಡೆಸುತ್ತಾನೋ ಅದರಂತೆ ನಡೆಯಲಿ. ನಾನು ಈ ಸಮಯದಲ್ಲಿ ಧೈರ್ಯಗೆಡಬಾರದು. ಮರಳಿ ಪ್ರಯತ್ನವ ಮಾಡು (ಬೇಕಾದರೆ ಭಗವ್ದ್ ಗೀತೆ ಸೇರಿಸೋಣ "ಕರ್ಮಣ್ಯೆ ವಾದಿಕಾರಸ್ತೆ ಮಾಫಲೆಶು ಕದಾಚನ"). -- ನಿಮ್ಮ ಸಮಸ್ಯೆಗೆ ಪರಿಹಾರ ಸಿಕ್ಕಿತೇ? ನಿಮ್ಮ ಮನಸ್ಥಿತಿ ಬದಲಾಯಿಸಿದ ಮೇಲೆ ಮೈಸೂರಿನ ಮ್ಯಾಪ್ ಹಿಡಿದು ಬೆಂಗಳೂರು ಸುತ್ತಲು ಸಾಧ್ಯವಾಯಿತೇ? ಇಲ್ಲ, ಯಾಕಂದ್ರೆ ಸಮಸ್ಯೆ ನಿಮ್ಮ ಮನಸ್ಥಿತಿಯದಲ್ಲ.
ಕೆಲವೊಂದು ಸಲ ನಾವು ಇಂತಹ ಅನೇಕ ಸಮಸ್ಯೆಗಳಲ್ಲಿ ಸಿಲುಕಿ, ಸಮಸ್ಯೆಯ ಮೂಲವನ್ನು ಅರಿಯದೆ ಸುಮ್ಮನೆ ಗೋಳಾಡುತ್ತೇವೆ. ನಮ್ಮ ಮನಸ್ಥಿತಿ ಬದಲಾಯಿಸಿ ಸುಮ್ಮನೆ ವ್ಯರ್ಥ ಪ್ರಯತ್ನಗಳನ್ನು ಮಾಡಿ ಕೊನೆಗೆ ಫಲ ಸಿಗದೆ ಬೇರೆಯವರನ್ನು (ಕೊನೆಗೆ ದೇವರನ್ನೂ) ದೂರುತ್ತೇವೆ. ಇದನ್ನು ಮೂರ್ಖತನ ಎಂದು ಕರೆಯದೆ ಬೇರೇನೂ ಹೇಳಲಾಗದು (ನನ್ನನ್ನೂ ಸೇರಿಸಿ).
ಸಮಸ್ಯೆಯ ಪರಿಹಾರಕ್ಕೆ ನೀವಿಗ ನೋಡಬೇಕಾದ್ದು ಬೇರೆ. ನಿಮ್ಮ ದೃಷ್ಟಿಕೋನ. ಒಂದು ರೋಡ್ ಸರಿಯಿಲ್ಲ, ಸರಿ, ಬೇರೆಯೊಬ್ಬ ವ್ಯಕ್ತಿಯಲ್ಲಿ ವಿಚಾರಿಸಿ ನೋಡೋಣ. ಅಥವಾ ನಮಗೆ ಹೋಗಬೇಕಾದ ಜಾಗವನ್ನು ಬೇರೆಯವರಲ್ಲಿ ಮೊದಲು ವಿಚಾರಿಸಿ ಆ ಜಾಗ ನನ್ನ ಬಳಿ ಇರುವ ಮ್ಯಾಪ್ ನಲ್ಲಿ ಇದೆಯೇ ಎಂದು ಪರೀಕ್ಷಿಸೋಣ. ಅಂತೂ ಸಮಸ್ಯೆ ಮ್ಯಾಪ್ ನದ್ದು ಎಂದು ನಮಗೆ ಗೊತ್ತಾಗಬೇಕು ಅಸ್ಟೇ.

ನಾನಿಲ್ಲಿ ಏನನ್ನು ಸಮರ್ಥಿಸ ಹೊರಟಿದ್ದೆ ಎಂದರೆ, ನಮ್ಮ ಸಮಸ್ಯೆಗಳಿಗೆ ಹೆಚ್ಚಿನ ಪಾಲು ನಮ್ಮ ದೃಷ್ಟಿಕೋನವೇ ಮೂಲ ಕಾರಣ. ನಾವದನ್ನು ಅರ್ಥ ಮಾಡಿಕೊಳ್ಳಬೇಕು. ನಾನು ಮೊದಲು ಹೇಳಿದ ನನ್ನ ಸಿಟ್ಟು, ಸಿಡುಕುಗಳ ಸಮಸ್ಯೆಯೂ ಇದರಿಂದ ಹೊರತಲ್ಲ. ಮೊದಲು ನಮ್ಮ ನೋಡುವ ದೃಷ್ಟಿಕೋನ ಸರಿಪಡಿಸಿಕೊಳ್ಳೋಣ. ನಂತರ ಸಮಸ್ಯೆಗಳು ತಾನಾಗಿಯೇ ದೂರಾಗುತ್ತವೆ. ಇಂದಿನಿಂದ ಪ್ರತಿಯೊಂದಕ್ಕೂ ಕೊರಗುವುದು, ಪ್ರತೀ ವಿಷಯದಲ್ಲೂ ನ್ಯೂನ್ಯತೆ (ನೆಗೆಟಿವಿಟಿ) ಯನ್ನು ಕಾಣುವುದು  ಬಿಡೋಣ. ನಾನು ಬದಲಾದರೆ ಜಗತ್ತು ಬದಲಾಗುತ್ತೆ ಎಂಬ ಸತ್ಯವನ್ನು ಅರಿಯೋಣ.

ಓಂ ಶಾಂತಿಃ ಶಾಂತಿಃ ಶಾಂತಿಃThursday, August 25, 2011

ನಮಸ್ಕಾರ ಗೆಳೆಯರೆ...

ಎಲ್ಲರೊಳು ತಾನು ತನ್ನೊಳಗೆಲ್ಲರಿರುವರೋ |
ಲೆಲ್ಲೆಲ್ಲಿಯುo ನೋಡಿ ನಡೆದು ನಗುತಳುತ ||
ಬೆಲ್ಲ ಲೋಕಕ್ಕಾಗಿ ತನಗೆ ತಾಂ ಕಲ್ಲಾಗ |
ಬಲ್ಲವನೆ ಮುಕ್ತನಲ ಮಂಕುತಿಮ್ಮ ||
ನಿಜ, ನಿರ್ವಾಣವನ್ನು ಬಲ್ಲವನು (ಬಾಹು ಬಂಧನಗಳಿಂದ ಮುಕ್ತನಾದವನು) ಲೋಕದ ಸುಖಕ್ಕಾಗಿ ತನ್ನನು ತಾನು ಅರ್ಪಿಸಿಕೊಳ್ಳುತ್ತಾನೆ. ಎಲ್ಲರ ಸುಖವೆ ತನ್ನ ಸುಖ ಎಂಬ ಉದಾತ್ತ ಮನಸ್ಕನಾಗುತ್ತಾನೆ. ತನ್ನ ಸುಖಕ್ಕೆ ತಾನು ಬದುಕದೇ, ಪರರ ನೋವು ನಲಿವುಗಳಿಗೆ ಮಿಡಿಯುತ್ತಾನೆ.
ಇದು ನನ್ನ ಮೊದಲ ಕನ್ನಡ ಬ್ಲಾಗು. ಹೊಸ ದಿನ ಎಂದು ಇದಕ್ಕೆ ನಾಮಕರಣ ಮಾಡಿದ್ದೇನೆ. 'ಹೊಸ ದಿನ'ದ ಒಳಾರ್ಥ ಹೆಚ್ಚು ಹೊಸದೇನಲ್ಲ, ಆದರೆ ಇಲ್ಲಿಯ ಅನುಭವಗಳು ನನಗೆ ಹೊಸವು. ಮಾನವನು ತನ್ನ ಜೀವಿತದಲ್ಲಿ ಪ್ರತಿದಿನವೂ ಹೊಸ ಹೊಸ ವಿಷಯಗಳೊಂದಿಗೆ ಮುಖಾಮುಖಿ ಆಗುತ್ತಾನೆ. ಪ್ರತಿ ದಿನವೂ ಅವನ ಜೀವನದಲ್ಲಿ ಹೊಸ ಅನುಭವಗಳನ್ನು ಪಡೆಯುತ್ತಾನೆ. ಅಂತೆಯೇ ನನ್ನ ಜೀವನವು ಸಾಗುವ ಹಾದಿಯಲ್ಲಿ ನಾನು ಅನುಭವಿಸಿದ ವಿಷಯಗಳು, ಘಟನೆಗಳು, ಅವುಗಳ ಒಂದೊಂದು ತುಣುಕುಗಳನ್ನು ಇಲ್ಲಿ ಹಂಚಿಕೊಳ್ಳಲು ಇಚ್ಚಿಸುತ್ತೇನೆ.