Tuesday, December 27, 2011

ಶಕ್ತಿಮಾನ್, ಇಂಡಿಯಾದ ಮೊದಲ ಸೂಪರ್ ಹೀರೊ


"ಹೇ ಕಿರಣ ನಿಂತ್ಕಳ, ತಿಂಡಿ ತಿಂದ್ಕ ಹೋಗಾ"..
"ಇಲ್ಲಾ ಅಮ್ಮ, ನಾ ಕಡೆಗ್ ಬಂದ್ ತಿಂತಿ, ಲೇಟ್ ಆಗ್ತು"..
ಎಂತ ಹೇಳದ್ರು ನಿಲ್ತಿದ್ದಿಲ್ಲ, ಒಂದೇ ಓಟ, ರವಿವಾರ ಬೆಳಿಗ್ಗೆ ಹತ್ತ ಗಂಟೆಗೆ, ಶಕ್ತಿಮಾನ್ ಸುರು ಆಗ್ತು ಟೀವಿಲಿ!

ಆಗ ನಮ್ ಮನಿಲಿ ಟೀವಿ ಇದ್ದಿದ್ದಿಲ್ಲ. ನಾವು ಬಾಡಿಗೆಗಿದ್ದ ಮನೆಯವ್ರತ್ರ ಹೋಗಿ ಟೀವಿ ನೋಡ್ತಿದ್ದಿ ನಾ.
"ವಿಷ್ಣುಅಣ್ಣ, ಟೀವಿ ಹಾಕ್ಕೊಡ, ಶಕ್ತಿಮಾನ್ ಸುರುವಾಗ್ತು" ಒಂಚೂರೂ ನಾಚ್ಕೆ ಇಲ್ದೆ ಕೆಳ್ತಿದ್ದಿ. ನಾ ಆಗ ೫ ನೇ ಕ್ಲಾಸು.
ಅವ್ರಿಗಂತೂ ನಾ ಅಂದ್ರೆ ಪಂಚಪ್ರಾಣ. ಒಂದ್ಚೂರು ಬೇಜಾರಿಲ್ದೆ ಟೀವಿ ಹಾಕಿ ಕೊಡ್ತಿದ್ರು. ಅವ್ರ ಮನೆಯವು ಎಂತ ನೋಡುಲು ಕೊಡ್ತಿದ್ದಿಲ್ಲ ನಾನು, ನನ್ನ ಶಕ್ತಿಮಾನ್ ಸೀರಿಯಲ್ಲು ಮುಗು ತಂಕನೂ. ಒಂದ್ಸಲ ಶಕ್ತಿಮಾನ್ ಸುರು ಆಯ್ತೋ, ಕಣ್ಣು ಬಿಟ್ಕಂಡಿ ನೋಡ್ತಾ ಹೊಪುದು. ಕೊನಿಗ್ ಅಮ್ಮ ಬಂದು ಎಬ್ಬಿಸ್ಕ ಹೋಗವು, ತಿಂಡಿ ತಿನ್ನು ಹೇಳಿ, ಅಲ್ಲಿ ತಂಕ ಎಳ್ತಿದ್ದಿಲ್ಲ ದೂರ್ದರ್ಶನ್ ಬಿಟ್ಟು.
ನೆನಪಿದ್ದಾ ಆ ದಿವಸ? ನಂಗಂತೂ ಇನ್ನೂ ಹಸಿ ಹಸಿ ನೆಂಪು. ಗಂಗಾಧರ್ ವಿದ್ಯಾಧರ್ ಮಾಯಾಧರ್ ಓಂಕಾರ್ ನಾಥ್ ಶಾಸ್ತ್ರಿ, ಗೀತಾ ವಿಶ್ವಾಸ್, ಡಾಕ್ಟರ್ ಜೆಕಾಲ್, ಕಿಲ್ವಿಶ್ ಎಲ್ಲರ ನೆಂಪು ಇದ್ದು. "ದೇವಿಜಿ.. ದೇವಿಜಿ" ಹೇಳಿಕ್ಯತ್ತ ಗೀತಾ ವಿಶ್ವಾಸ್ ನ ಹಿಂದೆ ಮುಂದೆ ಓಡಾಡ್ಕ್ಯತ್ತಿ ಅವಳ್ತ್ರೆ ಮಾತಾಡ್ತಿದ್ದ ಮುಂಬು ಹಲ್ಲಿನ್ ಚಷ್ಮಿಶ್ ಗಂಗಾಧರ್. ಅವನ್ ವಿಚಿತ್ರ ಅಂದ್ರೆ ಅದೇ ಗಂಗಾಧರ ಗರಗರ ತಿರ್ಗಿ ಶಕ್ತಿಮಾನ್ ಆಗ್ತಿದ್ದ. ನಾ ಮನೆಗ್ ಬಂದ್ಕಂಡಿ ಅವನ್ ತರನೇ ತಿರ್ಗ್ತಿದ್ದಿ, ನಾನು ಶಕ್ತಿಮಾನ್ ಆಗ್ತ್ನ ಹೇಳಿ ಟೆಸ್ಟ್ ಮಾಡುಲೆ, ತಲೆ ತಿರ್ಗ್ತಿತ್ತು ಬಿಟ್ರೆ ಮತ್ತೆಂತೂ ಆಗ್ತಿತ್ತಿಲ್ಲೆ. ಅಪ್ಪಯ್ಯನತ್ರೆ ಕೆಳುದು, ಅದು ಹೆಂಗೆ ಅವ ತಿರ್ಗಿ ತಿರ್ಗಿ ಶಕ್ತಿಮಾನ್ ಆಗ್ತಾ ಹೇಳಿ. ಅಪ್ಪಯ್ಯ "ಅದೆಲ್ಲ ಟಿವಿಲಿ ತೋರ್ಸುದು, ಹಂಗೆಲ್ಲ ನಿಜಕ್ಕೂ ಆಗ್ತಿಲ್ಲೆ" ಹೇಳಿ ಸಮಾಧಾನ ಮಾಡುದು.
೧೯೯೭ ನೆ ಇಸ್ವಿಲೆ ಎಂತ ಕ್ರಿಯೇಟಿವಿಟಿ ಅಲ್ದಾ ಅದು. ದಿನಕರ್ ಜಾನಿ ಡೈರೆಕ್ಟ್ ಮಾಡಿದ್ದು, ಬೇರೆ ಹೊತ್ತಲ್ಲಿ ನಾರ್ಮಲ್ ಮಂಶನಂಗೆ ಇದ್ದ ಗಂಗಾಧರ್ ಜನ್ರಿಗೆ ತೊಂದ್ರೆ ಆದ್ರೆ ಮಾತ್ರ ಶಕ್ತಿಮಾನ್ ಆಗಿ ಬದಲಾಗ್ತಿದ್ದ. ಯಾರಿಗೂ ಗೊತ್ತಾಗ್ದಿದ್ದಂಗೆ ಜನರ ಮದ್ಯನೇ ಇದ್ದ್ಕಂಡು ಅವ್ರ ರಕ್ಷಣೆ ಮಾಡ್ತಿದ್ದ.

ಟೈಟಲ್ ಸಾಂಗ್ ನೆನಪಿದ್ದ ಯಾರಿಗದ್ರು? ಯಂಗ್ ನೆನಪಿದ್ದು,

ಶಕ್ತಿಮಾನ್ ಶಕ್ತಿಮಾನ್ ಶಕ್ತಿಮಾನ್,
ಅಧ್ಭುತ್ ಅಸಂಭವ್ ಅನಾಹತ್ ಕಿ, ಪರಿ ಭಾಷಾ ಹೈ,
ಯೇ ಮಿಟ್ತಿ ಮಾನವತಾ ಕಿ ಇಕ್ ಆಶಾ ಹೈ|
ಯೇ ದಿವ್ಯ ಶಕ್ತಿ ಯಾನ್, ವರದಾನ ಹೈ,
ಯೇ ಅವತಾರ್ ನಹೀ ಹೈ, ಯೇ ಇನ್ಸಾನ ಹೈ|

ಶಕ್ತಿಮಾನ್ ಶಕ್ತಿಮಾನ್ ಶಕ್ತಿಮಾನ್,
ತೆರೆ ಹಾತ್ ಜೋ ಶಕ್ತಿ ಹೈ,
ದುನಿಯಾ ಬದಲ್ ಸಕ್ತಿ ಹೈ,
ಫೂಲೋಮೇ ಧಲ್ ಸಕ್ತಿ ಹೈ,
ಶೋಲೋ ಸೆ ಜಲ್ ಸಕ್ತಿ ಹೈ|
ಹೋತಾ ಹೈ ಜಬ್ ಆದಮಿಸೆ ಅಪನಾ ಗ್ಯಾನ್, ಕೆಹೆನಾಯ ವೋ, ಶಕ್ತಿಮಾನ್|
ಶಕ್ತಿಮಾನ್ ಶಕ್ತಿಮಾನ್ ಶಕ್ತಿಮಾನ್|

ಒಳ್ಳೆ ಮಸ್ತ್ ಅಲ್ದಾ......
ಕಾನ್ಸೆಪ್ಟ್ ತಗಂಡ್ರೆ, ಶಕ್ತಿಮಾನ್ ನಿಜಕ್ಕೂ ಆ ಕಾಲಕ್ಕೆ ಒಬ್ಬ ಸುಪರ್ ಹಿರೋನೆಯ. ತನ್ನ ೭ ಜನ ಗುರುಗಳಿಂದ ಶಕ್ತಿ ತಗತ್ತ, ಆ ಸಪ್ತ ಋಷಿಗಳು ಶಕ್ತಿಮಾನ್ ಗೆ, ಯೋಗಿಕ್ ಶಕ್ತಿ ಕೊಟ್ಟು ಭೂಮಿನ ಕಾಪಾಡು ಹೇಳಿ ಹರಸಿ ಕಳಿಸಿ ಕೊಡ್ತೋ. ಸೂರ್ಯವಂಶದ ಫಾಲೋವರ್ಸ್ ಆಗಿ ಜನ್ಮ ತಳ್ಕಂಡಿ ದುಷ್ಟ ಶಕ್ತಿನ ನಾಶ ಮಾಡುಲೆ ಭೂಮಿಗೆ ಬತ್ತ ಶಕ್ತಿಮಾನ್. ಅವಂಗೆ ಆ ಸಪ್ತ ಋಷಿಗಳು ಸೇರ್ಕಂಡಿ ಟ್ರೇನಿಂಗ ಕೊಡ್ತೋ, ಅದ್ರಲ್ಲಿ ಕುಂಡಲಿನಿ ಯೋಗದ ಬಗ್ಗೆ ತೋರಿಸ್ತೋ, ಏಳು ಕುಂಡಲಿನಿ ಚಕ್ರಗಳನ್ನ ಜಾಗ್ರತೆ ಮಾಡಕಂಡಿ ಅದ್ರಿಂದ ಸೂಪರ್ ನೆಚುರಲ್ ಪವರ್ ತಗತ್ತ ಅವ. ಯಜ್ಞ ಯಾಗನೆಲ್ಲ ಮಾಡಿ, ಪಂಚಭೂತಗಳಿಂದ ಅವ್ನ ದೇಹಕ್ಕೆ ಶಕ್ತಿ ಕೊಟ್ಟು ಅವಂಗೆ ಮರಣವೇ ಇಲ್ದಂಗೆ ಮಾಡಿ, ದುಷ್ಟ ಶಕ್ತಿಗಳ ವಿರುದ್ದ ಶಕ್ತಿಮಾನ್ ಆಗಿ ಹೋರಾಟ ಮಾಡುಲೆ ಸಜ್ಜು ಮಾಡಿ ಕಳಿಸ್ತ.
ಶಕ್ತಿಮಾನ್ ನ ದೊಡ್ಡ ಶತ್ರು ಅಂಧೇರಿಕೆ ರಾಜಾ ಕಿಲ್ವಿಶ್. ಆ ಕಿಲ್ವಿಶ್ ಜತಿಗೆ ಇಪ್ಪವೆಲ್ಲ ಅವನ್ನ ನೋಡುಕೆ ಬಂದ್ರೆ ಅವರದ್ದು ಒಂದು ಸಿಂಬಾಲ್ ಇದ್ದಲ ಎರಡೂ ಕೈ ನ
ಕತ್ತಿನತ್ರ ಕ್ರಾಸ್ ಮಾಡಿ ಹಿಡ್ಕಂಡಿ, "ಅಂಧೇರ ಖಾಯಂ ರಹೇ" ಅಂತಾ ಹೇಳ್ತಿದ್ದೋ, ಅದಕ್ಕೆ ಕಿಲ್ವಿಶ್ ತಾನೂ ಕೈ ಕ್ರಾಸ್ ಮಾಡಿ ಹಿಡ್ಕಂಡಿ "ಅಂಧೇರ ಖಾಯಂ ರಹೇಗಾ" ಅಂತಾ ರಿಪ್ಲೈ ಕೊಡ್ತಿದ್ದ. ಇದೆಲ್ಲ ಒಂದತರ ಮನಸಲ್ಲಿ ಹೆದ್ರಿಕೆ, ಮೋಜು, ಕುತೂಹಲ ಎಲ್ಲಾ ತರ್ತಿತ್ತು. ಶಕ್ತಿಮಾನ್ ಗೆ ಕಿಲ್ವಿಶ್ ನ ಒಂದೇ ಸಮ್ನೆ ಸಾಯ್ಸುಲೆ ಆಗ್ತಿಲ್ಲೆ. ದುಷ್ಟ ಶಕ್ತಿ ನಾಶ ಆದವಿನ ಕಿಲ್ವಿಶ್ ಸಾಯ್ತಿಲ್ಲೇ ಹೇಳಿ ಅವ್ನ ಮಹಾಗುರು ಹೇಳಿರ್ತ. ಅದಿಕ್ಕೆ ಸಣ್ಣ ಸಣ್ಣ ರಾಕ್ಷಸ್ರನ್ನೆಲ್ಲ ಮುಗಿಸ್ಕ್ಯತ್ತ, ಡಾಕ್ಟರ ಜೆಕಾಲ್ ನಂತ ಕೆಟ್ಟವರನ್ನೆಲ್ಲ ಹಿಡದು ಬಡದು, ಕೊನಿಗ್ ಟೈಮ್ ಮಷಿನ್ ಬಳಸ್ಕಂಡಿ ಕಿಲ್ವಿಶ್ ನ ಸಾಯಿಸ್ತ ಶಕ್ತಿಮಾನ್.
ಪ್ರತೀಸಲ ಶಕ್ತಿಮಾನ್ ಮುಗುದ್ ಕುಡ್ಲೆ ನಂಗೆ ಬೇಜಾರ್ ಆಪುದು, ಛೆ ಮುಗಧೋತಲೆ ಹೇಳಿ. ಮತ್ತೆ ಮುಂದಿನ್ ವಾರ ತಂಕ ಕಾಯವಲೇ. ನಾ ಶಕ್ತಿಮಾನ್ ದು ಸ್ಟಿಕ್ಕರ್, ಪೋಟೋ ಎಲ್ಲಾ ಕಲೆಕ್ಟ್ ಮಾಡ್ತಿದ್ದಿ. ಯಾರಿಗೂ ಕೊಡ್ತಿದ್ದಿಲ್ಲ ಮತ್ತೆ, ಯಾರು ಮುಟ್ಟುಲೂ ಆಗಾ.
ಸಣ್ಣ ಮಕ್ಕಳಿಂದ ಹಿಡದಿ ದೊಡ್ಡವು ನೋಡ್ತಿದ್ದ ಶಕ್ತಿಮಾನ್ ಸೀರಿಯಲ್ಲು. ಸುಮಾರು ೧೫ ವರ್ಷದ ಹಿಂದೆಯ ಇಂತಾ ಒಂದು ಕಾನ್ಸೆಪ್ಟ್ ಇಟ್ಕಂಡಿ ಜನರ ಮನ್ಸು ಗೆಲ್ಲುದು ಅಷ್ಟೊಂದ್ ಸುಲಭ ಇದ್ದಿದ್ದಿಲ್ಲ. ಈಗಿನ್ ತರ ಟೆಕ್ನಾಲಜಿ ಕೂಡ ಇದ್ದಿದ್ದಿಲ್ಲ ಅವತ್ತು, ಎಂತ ಮಾಡವಾದ್ರೂ ತುಂಬಾ ಖರ್ಚು ವೆಚ್ಹ, ಜತಿಗೆ ಸಣ್ಣ ಪುಟ್ಟ ಟೆಕ್ನಿಶಿಯನ್ ಎಲ್ಲಾ ಸಾಕಗ್ತಿದ್ದಿಲ್ಲೆ, ದೊಡ್ಡ ದೊಡ್ಡ ಮನಿಶ್ರೆ ಆಗವು ಮತ್ತೆ ಕೆಲ್ಸ ಮಾಡುಲೆ.
ಇವೆಲ್ಲ ಸ್ವೀಟ್ ಮೆಮೊರಿ ಈಗಿನ ಜನಕ್ಕೆ ಬಹುಶ ಸಿಗ್ತಿಲ್ಲೆ. ಈಗೆಲ್ಲ ಸಾವ್ರ ಚಾನೆಲ್ಸು ಟಿವಿಲಿ, ಯಾವ್ದು ನೋಡವು ಹೇಳೇ ಕನ್ಫ್ಯೂಸ್ ಆಗೋಗ್ತು. ಅದೂ ಅಲ್ದೆ ಭಾರತೀಯ ಚಾನೆಲ್ ಮೇಲೆ ಪರಕೀಯರ ಚಾನೆಲ್ ಗಳ ಆಕ್ರಮಣ. ಈಗಿನ್ ಮಕ್ಕಳಿಗೆಲ್ಲ ಕಾರ್ಟೂನ್ ನೆಟ್ವರ್ಕ್, ಪೋಗೋ ಮತ್ತೂ ಎಂತೆಂತದೋ ಚಾನೆಲ್ಸು ಬಂದಿದ್ದು. ಈಗೆಲ್ಲ ಮೊದ್ಲಿನ್ ತರ ಕಷ್ಟಪಡು ಅವಶ್ಯಕತೆ ಇಲ್ಲೆ, ಕಾರ್ಟೂನ್ ಮಾಡುಲೆ ಎಲ್ಲಾ ಕಂಪ್ಯೂಟರ್ ಬಳಸ್ಕತ್ತೋ, ಎಲ್ಲಾ ಸಾಫ್ಟ್ವೇರ್ ಯುಗ. ಹೆಚ್ಗೆ ಖರ್ಚೂ ಇಲ್ಲೆ ಮತ್ತೆ.
ಆಗ್ಲಿ, ಟೆಕ್ನಾಲಜಿ ತುಂಬಾ ಮುಂದುವರ್ದಿದ್ದು ಮಕ್ಕ್ಲಿಗೆಲ್ಲ ಹೊಸಾ ಹೊಸಾ ತರ ಎಂಟ್ರ್ಟೆನ್ಮೆಂಟ್ ಕೊಡುಲೆ ಹೆಲ್ಪ್ ಆಗ್ತಾ ಇದ್ದು. ಹೌದು ಇದ್ರಿಂದ ಸ್ವಲ್ಪ ಮಟ್ಟಿಗೆ ಕೆಟ್ಟದ್ದು ಆಗ್ತು, ಆದ್ರುವೆ, ಮಿತದಲ್ಲಿ ಬಳಸ್ಕಂಡ್ರೆ ಮಕ್ಕಳ ವಿಕಾಸಕ್ಕೆ ತುಂಬಾ ಹೆಲ್ಪ್ ಆಗ್ತು.
ಸಾಕು, ನಾ ಕೊರ್ದದ್ದು, ಜಾಸ್ತಿ ತಲೆ ತಿನ್ತಿಲ್ಲೆ. ಕೊನಿಗ್ ಒಂದು ಮಾತು ಹೇಳವಾದ್ರೆ, ಈಗಿನ್ ಮಕ್ಳಿಗೆ ಎಂತಾ ಎಂಟ್ರ್ಟೆನ್ಮೆಂಟ್ ಇದ್ದ್ರುವೆ "ಕದ್ದ ತಿಂದ ಮಾಯಣಣ್ ರುಚಿನೇ ಬೇರೆ ಬಿಡಿ".

Monday, November 21, 2011

ನಂಬಿಕೆ...

ರಾಮಾಯಣ ಮುಗಿದು ಸುಮಾರು ೧೦ ವರ್ಷಗಳು ಕಳೆದಿದ್ದವು. ವಿಭೀಷಣನ ಆಳ್ವಿಕೆಯಲ್ಲಿ ಲಂಕೆ ಸುಭಿಕ್ಷೆಯಿಂದ ನಡೆದಿತ್ತು. ಒಮ್ಮೆ ರಾಮಾಯಣದಲ್ಲಿ ರಾವಣನ ರಾಕ್ಷಸ ಸೈನ್ಯದೊಂದಿಗೆ ಹೋರಾಡಿದ ಕಪಿರಾಯನೊಬ್ಬನಿಗೆ ಲಂಕೆಗೆ ಹೋಗಬೇಕಿತ್ತು. ಎಲ್ಲಾ ಮಾರ್ಗಗಳೂ ಕೊನೆಗೆ ಬಂದು ಸೇರುವುದು ಸಮುದ್ರ ದಡಕ್ಕೆ. ಕಪಿರಾಯನೂ ಅಲ್ಲಿಯವರೆಗೆ ಬಂದು ನಿಂತು ಯೋಚಿಸತೊಡಗಿದ.  "ಈಗ ಈ ಸಮುದ್ರವನ್ನು ದಾಟುವುದು ಹೇಗೆ?? ಅಂದಾದರೋ ಶ್ರೀರಾಮನ ಹೆಸರು ಬರೆದ ಬಂಡೆಗಳಿಂದ ಸೇತುವೆ ಕಟ್ಟಿ ದಾಟಿದ್ದಾಯಿತು. ಇಂದು? ಇಲ್ಲಿ ಯಾವ ಸೇತುವೆಯೂ ಕಾಣುತ್ತಿಲ್ಲ". ಹೀಗೆ ಯೋಚಿಸುತ್ತಾ ಕಪಿರಾಯ ಸಮುದ್ರ ದಂಡೆಯಲ್ಲಿ ಕುಳಿತಿರುವಾಗ ಅತ್ತ ಕಡೆಯಿಂದ ವಿಭೀಷಣ ಮಹಾರಾಜ ಸಮುದ್ರದ ಮೇಲೆ ನಿರಾಳವಾಗಿ ನಡೆದುಬರುತ್ತಿರುವುದು ಕಾಣಿಸಿತು. ಹತ್ತಿರ ಬಂದ ವಿಭೀಷಣನಿಗೆ ಕಪಿರಾಯ ವಂದಿಸಿ ತನ್ನ ಸಮಸ್ಯೆಯನ್ನು ಹೇಳಿಕೊಂಡ,
"ವಿಭೀಷಣ ಮಹಾರಾಜ, ನನಗೆ ಈ ಸಮುದ್ರವನ್ನು ದಾಟಿ ಅತ್ತ ನಿಮ್ಮ ರಾಜ್ಯಕ್ಕೆ ಹೋಗಬೇಕಿದೆ, ಹನುಮಂತನಂತೆ ಹಾರುವ ಶಕ್ತಿ ನನಗಿಲ್ಲ. ನೀವು ನೋಡಿದರೆ ಸಮುದ್ರದ ಮೇಲೆ ನಿರಾಳವಾಗಿ ನಿಶ್ಚಿಂತೆಯಿಂದ ನಡೆದು ಬಂದಿರಿ. ನನಗೂ ದಾರಿ ತೋರಿಸಿ."
ಮಂದಹಾಸದೊಂದಿಗೆ ವಿಭೀಷಣ ಹೇಳಿದ "ಕಪಿರಾಯ, ಅದು ಅತೀ ಸುಲಭ. ನನ್ನ ಬಳಿ ಮಂತ್ರಿಸಿದ ಒಂದು ಕಲ್ಲಿದೆ. ಕಲ್ಲಿನಮೇಲೆ ನೀರಿನ ಮೇಲೆ ನಡೆಯುವ ಮಂತ್ರವೊಂದು ಬರೆದಿದೆ. ಅದನ್ನು ನಿನ್ನ ಮುಷ್ಟಿಯಲ್ಲಿ ಗಟ್ಟಿಯಾಗಿ ಹಿಡಿದು ಅದನ್ನು ಎದೆಗೊತ್ತಿಕೊಂಡು ಕಣ್ಣು ಮುಚ್ಚಿ ನಿರಿನಮೇಲೆ ಹೆಜ್ಜೆ ಇಡು. ಆ ಮಂತ್ರದ ಶಕ್ತಿಯಿಂದ ನೀನೂ ನಿರಿನಮೇಲೆ ನಡೆಯಬಹುದು. ಆದರೆ ಒಂದು ಷರತ್ತು, ನೀನು ಆ ಮಂತ್ರವನ್ನು ಓದುವ ಹಾಗಿಲ್ಲ. ಒಪ್ಪಿಗೆಯೇ? ಇಗೋ ತಗೋ ಮಂತ್ರ ಕಲ್ಲು."
"ಆಗಬಹುದು ಮಹಾರಾಜ, ತುಂಬಾ ಧನ್ಯವಾದಗಳು." ಹೇಳಿದ ಕಪಿರಾಯ ಕಣ್ಣುಮುಚ್ಚಿ ಮಂತ್ರಿಸಿದ ಕಲ್ಲನ್ನು ಎದೆಗೊತ್ತಿಕೊಂಡು ನಿರಿನಮೇಲೆ ಹೆಜ್ಜೆಯಿಟ್ಟು ನಡೆಯತೊಡಗಿದ. ಆಶ್ಚರ್ಯ ಎಂಬಂತೆ ಆತ ನಿಜಕ್ಕೂ ನಿರಿನಮೇಲೆ ತೇಲುತ್ತಾ ನಡೆಯುತ್ತಿದ್ದ.
ಅರ್ಧ ಸಮುದ್ರ ತಲುಪಿದ ಕಪಿರಾಯನ ತಲೆಯಲ್ಲಿ ಪ್ರಶ್ನೆ ಹುಳವೊಂದು ಓಡತೊಡಗಿತು. "ವಿಭೀಷಣ ಕೊಟ್ಟ ಇಷ್ಟು ಚಿಕ್ಕ ಕಲ್ಲಿನಲ್ಲಿ ಯಾವ ಮಂತ್ರ ಬರೆದಿರಬಹುದು?, ಅಲ್ಲದೆ ನನಗೆ ಆ ಮಂತ್ರವನ್ನು ಓದಬಾರದೆಂದು ಯಾಕೆ ಹೇಳಿದರು? ಯಾಕೆ ಒಮ್ಮೆ ನೋಡಿಬಿಡಬಾರದು? ಸುತ್ತ ಯಾರೂ ಇಲ್ಲ, ಸುಮ್ಮನೆ ಒಮ್ಮೆ ನೋಡಿ ಪುನಃ ಹಾಗೆಯೇ ಇಟ್ಟುಕೊಂಡು ನಡೆದರಾಯಿತು" ಎಂದುಕೊಂಡವನೇ ಕಪಿರಾಯ ಮೆಲ್ಲನೆ ಕಣ್ಣುತೆರೆದು ಮುಷ್ಠಿ ಬಿಡಿಸಿ ಕಲ್ಲನ್ನು ತೆರೆದು ನೋಡಿದ.
ಅದರಲ್ಲಿ "ಶ್ರೀರಾಮ" ಎಂದು ಬರೆದಿತ್ತು.
ಕಪಿರಾಯನಿಗೆ ಆಶ್ಚರ್ಯವಾಯಿತು. "ಇದೇನಿದು ಈ ಕಲ್ಲಿನಮೇಲೆ ಯಾವ ಮಂತ್ರವೂ ಇಲ್ಲ !!"
ಹಿಂದೆ ಮುಂದೆ ಎಲ್ಲಾ ತಿರುಗುಸಿ ನೋಡಿದ, ಉಹುಂ, ಬೇರೇನೂ ಇಲ್ಲ.
"ಬರಿಯ ಶ್ರೀರಾಮ? ಇದೆಂತಾ ಮಂತ್ರ? ಬರಿಯ ಈ ಕಲ್ಲಿನಿಂದ ಸಮುದ್ರ ದಾಟಬಹುದೇ?" ಎಂದುಕೊಂಡದ್ದೇ ತಡ, ಕಪಿರಾಯ ಗುಳಕ್ ಎಂದು ನೀರಿನಲ್ಲಿ ಮುಳುಗಿಹೋದ..
"ಕಾಪಾಡಿ... ಯಾರದ್ರೂ ಕಾಪಾಡಿ.. ನಾನು ಮುಳುಗುತ್ತಿದ್ದೇನೆ.. ಕಾಪಾಡಿ" ಎಂದು ಮೂರು ನಾಲ್ಕು ಬಾರಿ ನೀರು ಕುಡಿದಮೇಲೆ ವಿಭೀಷಣ ಬಂದು ಆತನನ್ನು ಮೇಲೆತ್ತಿ ದಡಕ್ಕೆ ತಂದು ಹಾಕಿದ.
ಮೆಲ್ಲ ಸುಧಾರಿಸಿಕೊಂಡು ಕಪಿರಾಯ, "ಮಹಾರಾಜ ಏನಿದು, ಆ ಕಲ್ಲಿನಲ್ಲಿ ಯಾವ ಮಂತ್ರವೂ ಬರೆದಿರಲಿಲ್ಲ, ಬರೀ ಶ್ರೀರಾಮ ಎಂದಷ್ಟೇ ಬರೆದಿತ್ತು."
ಮತ್ತೆ ಮುಗುಳುನಕ್ಕು ವಿಭೀಷಣ ಹೇಳಿದ "ಅಯ್ಯೋ ಕಪಿರಾಯ, ನೀನು ಆ ಕಲ್ಲನ್ನು ಹಿಡಿದು ಅರ್ಧ ಸಮುದ್ರ ದಾಟಿದ್ದಿ. ಅದು ಕಲ್ಲಿನ ಮಹಿಮೆಯೂ ಅಲ್ಲ, ಶ್ರೀರಾಮನ ಮಹಿಮೆಯೂ ಅಲ್ಲ. ಆ ಕಲ್ಲಿನಮೇಲೆ ಯಾವುದೋ ಮಂತ್ರವಿದೆ ಎಂದು ನೀನು ನಂಬಿದ್ದೆಯಲ್ಲ, ಆ ನಂಬಿಕೆಯ ಮಹಿಮೆ. ಆ ಕಲ್ಲಿನ ಮಂತ್ರಶ್ಕ್ತಿಯಿದ್ದರೆ ನೀನು ಸಮುದ್ರವನ್ನು ದಾಟಬಲ್ಲೆ ಎಂದು ನೀನು ನಂಬಿದ್ದ ನಿನ್ನ ಆತ್ಮ ವಿಶ್ವಾಸದ ಮಹಿಮೆ ಅಷ್ಟೇ. ನಾನು ನೋಡಬೇಡವೆಂದರೂ ಸಮುದ್ರ ಮಧ್ಯದಲ್ಲಿ ನೀನು ಕಲ್ಲನ್ನು ತೆರೆದು ನೋಡಿದೆ,
ನಿನಗೆ ಆ ಕಲ್ಲಿನಮೇಲೆ ಇದ್ದ ನಂಬಿಕೆ ಕಳೆದುಕೊಂಡೆ, ಜತೆಗೆ ಮಂತ್ರದ ಶಕ್ತಿ ಇದೆ ಎಂಬ ನಂಬಿಕೆಯನ್ನೂ ಕಳೆದುಕೊಂಡೆ. ಅಷ್ಟೇ, ನೀನು ಮುಳುಗಿಹೋದೆ.

ನಮ್ಮೆಲ್ಲರ ಜೀವನವೂ ಇಂತಹದೇ ರೀತಿಯಲ್ಲಿ ಸಾಗುತ್ತಿದೆ. ಮನುಷ್ಯನಲ್ಲಿ ನಂಬಿಕೆ ಎಂಬ ದ್ರವ ದಿನಬರುತ್ತಾ ಆವಿಯಾಗುತ್ತಿದೆ.  ಪ್ರತಿಯೊಬ್ಬ ಮನುಷ್ಯನಿಗೆ ತನ್ನ ಸ್ವ ಶಕ್ತಿಯ ಮೇಲೆ ನಂಬಿಕೆ ಕುಂಟಿತವಾಗಿದೆ. ತನ್ನ ಸಾಮರ್ಥ್ಯದಬಗ್ಗೆ ನಂಬಿಕೆ ಕ್ಷೀಣವಾಗಿದೆ. ಏನನ್ನೂ ನಂಬಲಾರದ ಸ್ಥಿಥಿ ಮನುಷ್ಯ ಈಗ ತಲುಪಿದ್ದಾನೆ.

ಇಂತಹ ಒಂದು ಅಸಹನೀಯ ಬೆಳವಣಿಗೆಗೆ ಕಾರಣವೆನಿರಬಹುದು, ಇದನ್ನು ತಿಳಿಯಲು ಪ್ರಯತ್ನ ಮಾಡಿದೆ. ತಕ್ಕ ಮಟ್ಟಿಗೆ ಕಾರಣಗಳನ್ನು ಕಂಡುಕೊಂಡೆ ಸಹ. ನನಗೆ ತಿಳಿದುಬಂದಂತೆ ನಮ್ಮ ನಂಬಿಕೆಗೆ ಘಾಸಿಗೊಳಿಸಿದ ಅಂಶಗಳೆಂದರೆ ನಮ್ಮಲ್ಲಿ ವೈಚಾರಿಕತೆಯ ಕೊರತೆ, ನಮ್ಮ ಋಣಾತ್ಮಕ ಯೋಚನೆಗಳು ಮತ್ತು ನಮ್ಮ ಅಪನಂಬಿಕೆಗಳು.

ವಿಚಾರ ಮಾಡುವ ಗುಣ ನಮ್ಮಿಂದ ಯಾವತ್ತೋ ದೂರಾಗಿದೆ. ದುಡುಕುವಿಕೆಯೇ ನಮ್ಮ ಸಾಧನ. ಯಾರೋ ಹೇಳಿದರು "ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ..." ಸರಿ, ನುಗ್ಗುವುದೊಂದೇ ನಮ್ಮ ಗುರಿ ಈಗ. ಇದು ಅವರು ಹೇಳಿದ ವಾಕ್ಯದ ದುರುಪಯೋಗವೊ, ಅಥವಾ ನಮ್ಮ ಮೌಢ್ಯತೆಯೋ ನನಗೆ ಗೊತ್ತಿಲ್ಲ. ತಪ್ಪು ಮಾಡುತ್ತಿದ್ದೇವೆ ನಾವೆಲ್ಲ. ಪ್ರತಿ ವಿಷಯದಲ್ಲೂ ವೈಚಾರಿಕತೆ ಅಗತ್ಯ. ಕಣ್ಣಾರೆ ಕಂಡರೂ ಪರಾಂಬರಿಸಿ ನೋಡು ಎಂದಿದ್ದಾರೆ ನಮ್ಮ ಹಿರಿಯರು. ಮಾಡಿದ ಕೃತಿಗಳ ಮನ-ಮಂಥನ ಅಗತ್ಯ (ನಿನ್ನೊಳಗಿನ ಅರಿವನ್ನು ಜಾಗ್ರತಗೊಳಿಸಿ). ತಪ್ಪಿದ್ದಲ್ಲಿ ತಿದ್ದಿಕೊಳ್ಳುವ ಭಾವನೆ ಅಗತ್ಯ. ಹೆಜ್ಜೆ ಹೆಜ್ಜೆಗೂ ಮನಶುದ್ಧಿ ಇರಲಿ, ತಾಳ್ಮೆ ನಮ್ಮ ಸಂಗಾತಿಯಾಗಿರಲಿ.
ಇನ್ನು ಋಣಾತ್ಮಕ ಯೋಚನೆಗಳು, ಇವು ನಮ್ಮ ವಿಕಾಸಕ್ಕೆ ಕೊಡಲಿ ಪೆಟ್ಟಿದ್ದಂತೆ. ಸಾಲದೆಂಬಂತೆ ಈ ಋಣಾತ್ಮಕ ಯೋಚನೆಗಳಿಗೆ ರೆಕ್ಕೆ ಪುಕ್ಕ ಕಟ್ಟಿ ಹಾರಬಿಟ್ಟಿದ್ದೇವೆ, ನಮ್ಮ ಮನಸಿನ ಧನಾತ್ಮಕ ಭಾವನೆಗಳ ಬಲಿಕೊಟ್ಟು ಋಣಾತ್ಮಕಕ್ಕೆ ನೀರೆರೆಯುತ್ತಿದ್ದೇವೆ. ನನಗೆ ತಿಳಿದಂತೆ, ಸಹಜವಾಗಿ, ಈ ಋಣಾತ್ಮಕ ವಿಚಾರಗಳಿಗೆ ಸ್ವತಃ ಯಾವುದೇ ಬಲವಿರುವುದಿಲ್ಲ, ಬದಲಾಗಿ ನಾವು ಇದರಬಗ್ಗೆ ಆಲೋಚಿಸಿ ಆಲೋಚಿಸಿ, ಇದಕ್ಕೆ ಬಲ ನೀಡುತ್ತಿದ್ದೇವೆ.
ಇನ್ನು ಅಪನಂಬಿಕೆಯ ಬಗ್ಗೆ ಹೇಳಿದಷ್ಟೂ ಕಮ್ಮಿಯೇ. "ನಮಗೆ ನಮ್ಮ ಸ್ವಸಾಮರ್ಥ್ಯದಬಗ್ಗೆ ಬಹಳ ಅನುಮಾನ ಹಾಗೂ ನಮ್ಮ ಅನುಮಾನದಮೇಲೆ ಬಹಳ ನಂಬಿಕೆ", ಏನಂತಿರಿ ಇದಕ್ಕೆ? ಒಂದು ನಕಾರಾತ್ಮಕ ವಿಷಯವನ್ನು ಹೇಳುವಾಗ ನಮಗೆ ಎಷ್ಟು ನಂಬಿಕೆ ಅಂದರೆ, "ನೋಡ್ತಾ ಇರು ಇವತ್ತು ಖಂಡಿತಾ ನಿನಗೆ ಕೆಲಸ ಸಿಗೋಲ್ಲ", "ಇವತ್ತು ನಾನು ಪರೀಕ್ಷೆಯಲ್ಲಿ ಫೈಲೆ", "ಈ ನೀರು ಕುಡಿದರೆ ನನಗೆ ಖಂಡಿತಾ ಜ್ವರ ಬರುತ್ತೆ", "ಇವತ್ತು ಮಳೆಯಲ್ಲಿ ನೆನೆದಿದ್ದೇನೆ, ನಾಳೆ ನನಗೆ ಜ್ವರ ಗ್ಯಾರಂಟಿ". ಎಷ್ಟು ಖಡಾಖಂಡಿತವೆಂದರೆ ಇನ್ನೇನು ಆಗದ್ದೂ ಆಗಿಬಿಡಬೇಕು, ಅಂತಹ ನಂಬಿಕೆ ನಮಗೆ. ಅದೇ ನಂಬಿಕೆ ನಮಗೆ ನಮ್ಮ ಆತ್ಮವಿಶ್ವಾಸದಮೇಲೆ ಇಲ್ಲ. "ನಾನಿವತ್ತು ಈ ಪೂರ್ತಿ ಪುಸ್ತಕ ಓದಿ ಮುಗಿಸಿಯೇ ಮುಗಿಸುತ್ತೇನೆ", "ನನಗೆ ಇವತ್ತು ಖಂಡಿತ ಆ ಕೆಲಸ ದೊರೆಯುತ್ತದೆ", "ನನ್ನಷ್ಟು ಆರೋಗ್ಯವಂತ ಇನ್ನಿಲ್ಲ, ನನಗೆ ಯಾವುದೇ ರೋಗ ಅಂಟಲಾರದು" ಇಂತಹ ಧನಾತ್ಮಕ ಯೋಚನೆಗಳು ತಲೆ ಕೆಳಗೆ ಮಾಡಿ ನಿಂತರೂ ನಮಗೆ ಬರುವುದಿಲ್ಲ. ನನ್ನನ್ನು ಹೊರತುಪಡಿಸಿ ನಾನೇನೂ ಮಾತನಾಡುತ್ತಿಲ್ಲ. ಇದು ನನ್ನ ಸಮಸ್ಯೆಯೂ ಹೌದು. ಪರಿಹಾರ ನನಗೆ ತಿಳಿದಂತೆ ನಮ್ಮಲ್ಲೇ ಇದೆ; ವೈದ್ಯರ ಮಾತ್ರೆ ಔಷಧಿಗಳಲ್ಲ, ನಮಗೆ ನಮ್ಮ ಸ್ವ-ಬದಲಾವಣೆಯ ಅಗತ್ಯ ಇದೆ.

ನನ್ನ ಗೆಳೆಯನೊಬ್ಬ ನನ್ನಲ್ಲಿ ಮೊಂಡು ವಾದ ಮಾಡುತ್ತಾ ಕೇಳಿದ, "ವಿಜ್ನಾನ ಇಂತಹ ಬೆಳವಣಿಗೆ ಕಾಣುತ್ತಿದೆ, ಅತ್ಯಾಕರ್ಷಕ ಅಪರಿಮಿತ ಅನ್ವೇಷಣೆಗಳು ನಡೆಯುತ್ತಿವೆ, ಭೂಮಿ ಮೇಲಿನ ಹುಟ್ಟು ಸಾವು ಇದರಬಗ್ಗೆ ಈಗಾಗಲೇ ಹಲವಾರು ಅಂಶಗಳನ್ನು ವಿಜ್ನಾನ ಬಯಲಿಗೆಳೆದಿದೆ, ಇಂತಹ ಸ್ಥಿತಿಯಲ್ಲೂ ನೀನು ದೇವರು, ಸೃಷ್ಟಿಕರ್ತ ಇದೆಲ್ಲ ನಂಬುತ್ತೀಯಾ?". ನಿಜಕ್ಕೂ ಆತನಿಗೆ ಉತ್ತರ ಕೊಡುವಷ್ಟು ಜ್ನಾನ ನನಗಿರಲಿಲ್ಲ, ಈಗಲೂ ಇಲ್ಲ ಬಿಡಿ, ಆದರೆ ಕೆಲವು ದಿನದ ಹಿಂದೆ ಒಂದು ಸಣ್ಣ ಕಥೆಯನ್ನು ಓದಿದೆ, ನಿಮ್ಮೊಂದಿಗೆ ಇದನ್ನು ಹಂಚಿಕೊಳ್ಳಬೇಕೆಂದು ಅನ್ನಿಸುತ್ತಿದೆ,

ಒಂದ್ ಸಲ ಸರ್ ಥೋಮಸ್ ಆಳ್ವ ಎಡಿಸನ್ ರೈಲಲ್ಲಿ ಹೋಗುತ್ತಿದ್ದಾಗ ಬೈಬಲ್ ಓದುತ್ತಾ ಕುಳಿತಿದ್ದರು. ಪಕ್ಕದಲ್ಲಿ ಇರೋ ಒಬ್ಬ ಯಂಗ್ ಇಂಜಿನಿಯರ್ ಇವರ ಬಗ್ಗೆ ತಿಳಯದೆ "ಎಂತಾ ಸ್ಟುಪಿಡ್ ಜನರು, ವಿಜ್ಞಾನ ಇಷ್ಟು ಮುಂದುವರಿದಿರಬೇಕಾದ್ರೆ, ಇನ್ನೂ ಅದೇ ಹಳೇ ಬೈಬಲ್ ಓದ್ತಾ ಕುತಿದಿರ. ನಾಚ್ಕೆ ಅನ್ನಿಸೋಲ್ವಾ ನಿಮಗೆ" ಅಂದ. ಅದಿಕ್ಕೆ ಎಡಿಸಿನ್ "ಯಾಕೆ ಮರಿ, ಬೈಬಲ್ ಓದೋದ್ರಿಂದ ಏನೂ ಪ್ರಯೋಜನ ಇಲ್ಲಾ ಅಂತಿಯ?" ಕೇಳಿದ್ರು. ಅದಿಕ್ಕೆ ಯಂಗ್ ಇಂಜಿನಿಯರ್ "ಏನೂ ಪ್ರಯೋಜನ ಇಲ್ಲಾ ಓಲ್ಡ್ ಮ್ಯಾನ್. ವಿಜ್ಞಾನ ಎಷ್ಟೋ ಮುಂದುವರಿದಿದೆ, ಸೃಷ್ಟಿಯ ಎಷ್ಟೋ ಅಂಶಗಳನ್ನ ನಾವು ಕಂಡುಹಿಡಿದ್ದೀವಿ,  ನಾವು ಬೇರೆ ಜಗದ ಜೀವಿಗಳ ಜತೆಗೆ ಸಂಪರ್ಕ ಮಾಡಲು ಟ್ರೈ ಮಾಡ್ತಾ ಇದ್ದಿವಿ.. ಬ್ಲಾ ಬ್ಲಾ ಬ್ಲಾ.. ನಿಂಗೆ ಈಗ ಎಲ್ಲಾ ವಿವರಣೆ ಕೊಡೋದಿಕ್ಕೆ ನನಗೆ ಸಮಯ ಇಲ್ಲ, ಒಂದು ಬಾರಿ ನನ್ನ ಲ್ಯಾಬ್ ಗೆ ಬಾ, ಎಲ್ಲಾ ಡೆಮೋ ಜೊತೆಗೆ ಪೂರ್ತಿಯಾಗಿ ವಿವರಣೆ ಕೊಡ್ತೀನಿ, ನಿಮ್ಮಂತಹ ಹಳೆಕಾಲದ ಜನರನ್ನ ತಿದ್ದಿ ಸರಿಪಡಿಸುವುದು ನಮ್ಮಂತಹ ಯಂಗ್ ಜನರೇಷನ್ರ ಕರ್ತವ್ಯ ಕೂಡ" ಅಂತಾ ತನ್ನ ವಿಸಿಟಿಂಗ್ ಕಾರ್ಡ್ ಕೊಟ್ಟ. ಎಡಿಸನ್ ಆ ಕಾರ್ಡ್ ನ ಜೇಬಲ್ಲಿ ಇಟ್ಟುಕೊಂಡರು. ಯಂಗ್ ಇಂಜಿನಿಯರ್ "ನಿನ್ನ ಪರಿಚಯಕ್ಕೆ ನಿನ್ನ ಕಾರ್ಡ್ ಏನಾದ್ರೂ ಇದ್ರೆ ಕೊಡು" ಅಂದ. ಎಡಿಸನ್ ತನ್ನ ವಿಸಿಟಿಂಗ್ ಕಾರ್ಡ್ ತೆಗೆದು ಕೊಟ್ರು. ಕಾರ್ಡ್ ನೋಡಿದ ಯಂಗ್ ಇಂಜಿನಿಯರ್, "ಒಹ್ ಮೈ ಗಾಡ್, ದಿ ಗ್ರೇಟ್ ಸರ್ ಥೋಮಸ್ ಎಡಿಸನ್, ಐ ಯಾಮ್ ಸೋರಿ ಸರ್" ಹೇಳಿ ಅವ್ರ ಕಾಲಿಗೆ ಬಿದ್ದ. "ಸರ್, ನೀವು ಅಂತ ಗೊತ್ತಿಲ್ಲದೆ ಮಾತನಾಡಿದೆ, ತಪ್ಪಾಯ್ತು, ಕ್ಷಮಿಸಿ ನನ್ನನ್ನು" ಅಂದ. ಎಡಿಸನ್ ಮುಗುಳುನಗುತ್ತ ಅಂದರು "ಪರವಾಗಿಲ್ಲ ಮರಿ, ನಿನ್ನದೇನೂ ತಪ್ಪಿಲ್ಲ ಬಿಡು, ನಿನ್ನ ವಯಸ್ಸಿಗೆ ತಕ್ಕಂತೆ ಮಾತನಾಡಿದ್ದೀಯಾ". ಯಂಗ್ ಇಂಜಿನಿಯರ್ "ಸರ್, ನಿಮಗೆ ನನ್ನ ಮೇಲೆ ಬೇಜಾರಿಲ್ಲ ಅಂದ್ರೆ, ನಿಮ್ಮ ಲ್ಯಾಬ್ ಗೆ ಒಂದು ಸಾರಿ ಬರಬೇಕು ನಾನು, ಒಂದು ಅಪಾಯಿಂಟ್ಮೆಂಟ್ ಕೊಡಿ ಸರ್" ಅಂದ. ಅದಿಕ್ಕೆ ಎಡಿಸನ್ "ನನ್ನ ಲ್ಯಾಬ್ ಯಾವಾಗಲು ತೆರೆದೇ ಇರುತ್ತೆ, ನೀನು ಯಾವಾಗ ಬೇಕಾದ್ರು ಬರಬಹುದು" ಅಂದ್ರು. ಅವರಿಗೆ ಥ್ಯಾಂಕ್ಸ್ ಹೇಳಿ ಯಂಗ್ ಇಂಜಿನಿಯರ್ ಅಲ್ಲಿಂದ ಹೊರಟುಹೋದ.
ಮಾರನೆ ದಿನ, ಯಂಗ್ ಇಂಜಿನಿಯರ್ ಎಡಿಸನ್ ಲ್ಯಾಬ್ ಗೆ ಭೇಟಿ ಕೊಟ್ಟ. ಅಲ್ಲಿದ್ದ ಚಿತ್ರ ವಿಚಿತ್ರ ಮಾಡೆಲ್ಲುಗಳು, ಎಕ್ಷಪೆರಿಮೆಂಟ್ಗಳು ಎಲ್ಲಾ ನೋಡಿ ತಲೆ ತಿರುಗುವುದೊಂದು ಬಾಕಿ ಆತನಿಗೆ. ಕೊನೆಗೆ ಅಲ್ಲಿದ್ದ ಒಂದು ಸೌರವ್ಯೂಹದ ಮಾಡೆಲ್ ನೋಡಿ ಬಾಳ ಸಂತೋಷಪಟ್ಟು ಯಂಗ್ ಇಂಜಿನಿಯರ್ ಕೇಳಿದ "ಸರ್ ಈ ಸೌರವ್ಯೂಹದ ಮಾಡೆಲ್ ತುಂಬಾ ಚೆನ್ನಾಗಿದೆ, ನೀವು ಮಾಡಿದ್ದ?". ಅದಿಕ್ಕೆ ಎಡಿಸನ್ "ಎಲ್ಲಿ, ಅರೇ ಇದು ಹೇಗೆ ಬಂತು ಇಲ್ಲಿಗೆ? ಯಾರು ತಂದಿದ್ದು. ನನಗೆ ಗೊತ್ತಿಲ್ಲ, ಇದು ಯಾರು ಮಾಡಿದ್ದು ಅಂತ. ಇದು ಇಲ್ಲಿಗೆ ಹೇಗೆ ಬಂತು, ಇಷ್ಟೊತ್ತು ಇರಲಿಲ್ಲವಲ್ಲಾ ಇದು?" ಅಂದರು. ಯಂಗ್ ಇಂಜಿನಿಯರ್ "ತಮಾಷೆ ಮಾಡಬೇಡಿ ಸರ್, ಇಲ್ಲಿಗೆ ನನ್ನ ಬಿಟ್ಟು ಬೇರೆ ಯಾರು ಬಂದಿಲ್ಲ ಈಗ, ಇದು ತನ್ನಷ್ಟಕ್ಕೆ ತಾನೇ ಹೇಗೆ ಬರೋಕೆ ಸಾದ್ಯ. ಇದು ನೀವು ಮಾಡಿದ್ದೆ ಇರಬೇಕು" ಅಂದ.
ಅದಿಕ್ಕೆ ಎಡಿಸನ್ "ಹೌದೇ, ಇಷ್ಟು ಸಣ್ಣ ಸೌರವ್ಯೂಹದ ಮಾಡೆಲ್ ತನ್ನಿಂದ ತಾನೇ ಬರೋಕೆ ಸಾದ್ಯ ಇಲ್ಲಾ ಅಂತಾ ಆದ್ರೆ, ನಾವಿರೋ ನಿಜವಾದ ಸೌರ ಮಂಡಲ, ಈ ಜಗತ್ತು ಎಲ್ಲಾ ತನ್ನಿಂದ ತಾನೇ ಬರೋಕೆ ಸಾದ್ಯ ಇಲ್ಲಾ ತಾನೇ? ಇಷ್ಟು ಸಣ್ಣ ಸೌರವ್ಯೂಹದ ಮಾಡೆಲ್ ಮಾಡೋದಿಕ್ಕೆ ಯಾರೋ ಒಬ್ಬರು ಬೇಕೇ ಬೇಕು ಅಂತಿದ್ದರೆ, ಅಂತಹ ದೊಡ್ಡ ಸೌರವ್ಯೂಹದ ಸೃಷ್ಟಿಕರ್ತ ಒಬ್ಬ ಇರಲೇ ಬೇಕು ಅಲ್ವಾ?"
".. ಅದನ್ನೇ ನಿನ್ನೆ ನಾನು ಬೈಬಲ್ ನಲ್ಲಿ ಓದಿ ತಿಳಿದುಕೊಳ್ಳೋಕೆ ಪ್ರಯತ್ನ ಮಾಡ್ತಾ ಇದ್ದೆ" ಅಂದ್ರು..

ನಮ್ಮ ಹಿರಿಯರು ಬದುಕಿಗೆ ಹಲವು ಉತ್ತಮ ಅಂಶಗಳನ್ನು ಕೊಟ್ಟು ಹೋಗಿದ್ದಾರೆ. ಉತ್ತಮ ಮಾರ್ಗವೊಂದನ್ನು ಆರಿಸಿಕೊಂಡು ಆ ಮಾರ್ಗದಲ್ಲಿ ನಂಬಿಕೆಯೊಂದಿಗೆ ನಡೆಯಬೇಕಾದ್ದು ನಮ್ಮ ಕರ್ತವ್ಯ. ಸ್ವ-ಸಾಮರ್ಥ್ಯದ ಮೇಲೆ ನಂಬಿಕೆ ಇರಲಿ, ಅಪನಂಬಿಕೆ ಬೇಡ. ಧನಾತ್ಮಕತೆ ನಮ್ಮ ಶಕ್ತಿಯಾಗಿರಲಿ, ಋಣಾತ್ಮಕತೆ ಬೆಳೆಯಲು ಅವಕಾಶ ಕೊಡದಿರಿ. ಮಾಡುವ ಕೃತಿಯಲ್ಲಿ ವೈಚಾರಿಕತೆ ಇರಲಿ, ದುಡುಕುತನ ಬೇಡ.

ನಂಬದಿರ್ದನು ತಂದೆ ನಂಬಿದನು ಪ್ರಹ್ಲಾದ |
ನಂಬಿಯೂ ನಂಬದಿರುವಿಬ್ಬಂದಿ ನೀನು ||
ಕಂಬದಿನೋ ಬಿಂಬದಿನೋ ಮೋಕ್ಷವವರಿಂಗಾಯ್ತು |
ಸಿಂಬಳದ ನೊಣ ನೀನು - ಮಂಕುತಿಮ್ಮ||

-- ಧೃಡ ನಂಬಿಕೆಗೆ ಪ್ರಹ್ಲಾದ ಮತ್ತು ಹಿರಣ್ಯಕಶಿಪು ಇಬ್ಬರೂ ಉತ್ತಮ ಉದಾಹರಣೆಗಳು. ಹರಿಯೇ ಸರ್ವಸ್ವವೆಂಬ ಧೃಡ ನಂಬಿಕೆ ಮಗನದಾದರೆ, ಹರಿ ಎಂಬುವನೇ ಇಲ್ಲ, ಇದ್ದರೂ ಅವನು ನಮ್ಮ ಶತ್ರು ಎಂಬ ಅಪನಂಬಿಕೆ ತಂದೆಯಾದ ಹಿರಣ್ಯಕಶಿಪುವಿನದು. ಅವರವರ ನಂಬಿಕೆಗೆ ತಕ್ಕಂತೆ ನಂಬದ ತಂದೆಗೆ ಉಗ್ರರೂಪಿ ನರಸಿಂಹನಾಗಿ, ನಂಬಿದ ಮಗನಿಗೆ ವಿಶ್ವರೂಪಿ ನಾರಾಯಣನಾಗಿ ಬಂದ ಪರಮಾತ್ಮನು, ಅವರವರ ನಂಬಿಕೆಗೆ ತಕ್ಕಂತಹ ಮೋಕ್ಷವನ್ನು ಕರುಣಿಸಿದನಲ್ಲವೇ?

Wednesday, September 14, 2011

ನನಗದು ಗೊತ್ತಿದೆ...

ಬಂಗಾರದ ಮೊಟ್ಟೆ ಇಡುವ ಕೋಳಿಯ ಕಥೆ:
ಒಂದಾನೊಂದು ಊರಲ್ಲಿ ಒಬ್ಬ ರೈತನ ಬಳಿ ಒಂದು ಕೋಳಿ ಇದ್ದಿತ್ತು. ಒಂದು ದಿನ ಅದು ಒಂದು ಬಂಗಾರದ ಮೊಟ್ಟೆ ಇಟ್ಟಿತು. ಮೊದಲಿಗೆ ರೈತ ಅದು ಬಂಗಾರದ ಮೊಟ್ಟೆ ಎಂದು ನಂಬಲಿಲ್ಲ. ಇದೆಲ್ಲೋ ಬ್ರಮೆ ಇರಬೇಕು ಎಂದುಕೊಂಡ. ಮಾರನೆಯ ದಿನವೂ ಕೋಳಿ ಪುನಃ ಒಂದು ಬಂಗಾರದ ಮೊಟ್ಟೆ ಇಟ್ಟಿತು. ಈ ಬಾರಿ ರೈತ ಸ್ವಲ್ಪ ಹೌಹಾರಿದ. ಅದನ್ನು ಪರೀಕ್ಷಿಸಿ ನೋಡಿದ, ನಿಜವಾದ ಬಂಗಾರದ ಮೊಟ್ಟೆ. ರೈತ ಸಂತೋಷದಿಂದ ಹಿರಿ ಹಿರಿ ಹಿಗ್ಗಿದ. ಇದು ಹೀಗೆಯೇ ನಡೆಯಿತು, ಕೋಳಿ  ದಿನವೂ ಒಂದೊಂದು ಬಂಗಾರದ ಮೊಟ್ಟೆ ಇಡುತ್ತಿತ್ತು. ಬಂಗಾರದ ಮೊಟ್ಟೆಯನ್ನು ಮಾರಿ ಬಂದ ಹಣದಿಂದ ತನ್ನ ಸಾಲವನ್ನೆಲ್ಲಾ ತೀರಿಸಿಕೊಂಡ ರೈತ ಕ್ರಮೇಣ ಶ್ರೀಮಂತನಾಗತೊಡಗಿದ. ರೈತನಿಗೆ ತನ್ನ ಕೋಳಿಯಮೇಲೆ ಎಲ್ಲಿಲ್ಲದ ಪ್ರೀತಿ ಮತ್ತು ಕಾಳಜಿ. ದಿನವೂ ಕೋಳಿಗೆ ಹೊಟ್ಟೆ ತುಂಬಾ ಆಹಾರವನ್ನು ಕೊಡುತ್ತಿದ್ದ, ಚೆನ್ನಾಗಿ ಪಾಲನೆ ಪೋಷಣೆ ಮಾಡುತ್ತಿದ್ದ. ಇದೆರೀತಿ ನಡೆಯುತ್ತಿರುವಾಗ ಒಂದು ದಿನ ರೈತನಿಗೆ ಒಂದು ಆಲೋಚನೆ ಬಂತು. "ಹೀಗೆ ದಿನ ಒಂದೊಂದೇ ಮೊಟ್ಟೆ ಕೊಡುತ್ತಿದೆ ಈ ಕೋಳಿ, ಯಾಕೆ ತಾನು ಒಂದೇಸಲ ಎಲ್ಲ ಮೊಟ್ಟೆಗಳನ್ನು ತೆಗೆದುಕೊಂಡು, ಮಾರಿ, ಬೇಗ ಶ್ರೀಮಂತನಾಗಬಾರದು? ಬಹುಶಃ ಈ ಕೋಳಿಯ ಹೊಟ್ಟೆಯಲ್ಲಿ ತುಂಬಾ ಚಿನ್ನದ ಮೊಟ್ಟೆಗಳಿರಬೇಕು. ಈ ಕೋಳಿಯ ಹೊಟ್ಟೆ ಬಗೆದರೆ ಎಲ್ಲ ಚಿನ್ನದ ಮೊಟ್ಟೆಗಳನ್ನು ಒಮ್ಮೆಲೇ ಪಡೆಯಬಹುದು", ಎಂದುಕೊಂಡು ಕೋಳಿಯ ಹೊಟ್ಟೆ ಬಗೆದು ಅದನ್ನು ಕೊಂದು ಬಿಟ್ಟ. ಹೊಟ್ಟೆ ಒಳಗೆ ನೋಡುತ್ತಾನೆ ಒಂದು ಬಂಗಾರದ ಮೊಟ್ಟೆಯೂ ಇಲ್ಲ. ಇತ್ತ ಮೊಟ್ಟೆ ಕೊಡುವ ಕೋಳಿಯೂ ಬದುಕಿಲ್ಲ. ರೈತ ತನ್ನ ಮೂರ್ಖತನಕ್ಕೆ ಕೊನೆಗೆ ಗೋಳಿಟ್ಟ.

ಈಗ ನಿಮ್ಮಲ್ಲಿ ಕೆಲವರು ಬಂಗಾರದ ಮೊಟ್ಟೆ ಇಡುವ ಕೋಳಿಯ ಕಥೆಯನ್ನು ಇಲ್ಲಿ, ಈ ಬ್ಲಾಗ್ ನಲ್ಲಿ, ನಾನು ಬರೆದದ್ದು ಪೂರ್ತಿ ಓದಿಲ್ಲ. ಇನ್ನು ಕೆಲವರು ಈ ಕಥೆಯ ಹೆಡ್ಡಿಂಗ್ ನೋಡಿದಕೂಡಲೆ ಕಥೆಯನ್ನು ಸ್ಕಿಪ್ ಮಾಡಿ ಇಲ್ಲಿಗೆ ಬಂದಿದ್ದೀರಿ. ಯಾರಿಗೂ ಈ ಕಥೆ ಇನ್ನೊಮ್ಮೆ ಕೇಳೋ ಇಂಟರೆಸ್ಟ್ ಇಲ್ಲ. ಇನ್ನು ಕೆಲವರು ಇದನ್ನ ಕಾಟಾಚಾರಕ್ಕೆ ಪೂರ್ತಿ ಓದಿದ್ದೀರಾ ಆದರೆ ಕಥೆ ಪೂರ್ತಿ ಮುಗಿದಮೇಲೆ ಹೇಳಿದ್ದೇನೆಂದರೆ "ಏನೂ ಹೊಸದಿಲ್ಲ, ನಂಗೆ ಈ ಕಥೆ ಮುಂಚೆನೇ ಗೊತ್ತಿತ್ತು". ಇನ್ನುಕೆಲವರಿಗೆ ಕಥೆ ಪೂರ್ತಿ ಓದಿದಮೇಲೆ ಮನಸ್ಸಿನಲ್ಲೇ ಬೇಜಾರಾಗಿದೆ ಆದ್ರೂ ಇಲ್ಲಿ ಮುಂದೆ ಓದುತ್ತಿದ್ದೀರಿ. ಎಷ್ಟೋ ಜನ ಬೇಜಾರಿನಿಂದ ಈ ಬ್ಲಾಗ್ ಆಗ್ಲೆ ಕ್ಲೋಸ್ ಮಾಡಿದ್ದಾರೆ.

ನಿಜ ಅಂದ್ರೆ, ಮೊನ್ನೆ ಈ ಕಥೆ ಪುನಃ ಓದಿದಾಗ ನಿಮಗನ್ನಿಸಿದ್ದೇ ನನಗೂ ಅನ್ನಿಸಿದ್ದು, "ಇದು ನನಗೆ ಮೊದಲೇ ಗೊತ್ತು..." ಆದರೆ ಈಗ ಹೇಳುತ್ತೇನೆ ಕೇಳಿ, ಈ ಕಥೆಯಲ್ಲಿ ಒಂದು ಸೂಪರ್ ಬಿಸಿನೆಸ್ಸ್(ವ್ಯವಹಾರ) ನೀತಿ ಅಡಗಿದೆ!.. ನಂಬುತ್ತಿರಾ? ಆ ನೀತಿಯನ್ನು ನಾನು ನಿಮಗೆ ಈ ಪೋಸ್ಟಿನ ಕೊನೆಯಲ್ಲಿ ತಿಳಿಸುತ್ತೇನೆ. ಈಗ ನಾವು ಫೋಕಸ್ ಮಾಡಬೇಕಾದ್ದು ನಮ್ಮ ಮನಸ್ಸಿನಲ್ಲಿ ಬಂದ ಭಾವನೆಗಳ ಮೇಲೆ.

ಈ ಕಥೆ ಓದುವಾಗ ನನ್ನ ಮತ್ತು ನಿಮ್ಮ ಮನಸ್ಸಲ್ಲಿ ಏನು ಬಂತೆಂದರೆ "ನನಗೆ ಈ ಕಥೆ ಮೊದಲೇ ಗೊತ್ತು, ತುಂಬಾ ಹಳೆಯದು, ಕೇಳಿ ಕೇಳಿ ಬೇಜಾರಾಗಿದ್ದೇನೆ, ಹೊಸತೇನೂ ಇಲ್ಲ ಇದರಲ್ಲಿ" ಹೀಗೆ ಬೇರೆ ಬೇರೆ ನಕಾರಾತ್ಮಕ ಭಾವನೆಗಳು. ನಮ್ಮ ಮನಸ್ಸು ಇದನ್ನು ಪುನಃ ಕೇಳಲು ತಯಾರಿಲ್ಲ. ನನಗಿದು ಇನ್ನೊಮ್ಮೆ ಬೇಡ, ಅಷ್ಟೇ. ನನ್ನ ಮಾತು ಕೇಳಿ -- ನಾವು ಎಲ್ಲಿಯತನಕ "ನನಗೆ ಅದು ಗೊತ್ತು..." ಎಂದು ಸುಮ್ಮನಾಗುತ್ತೇವೋ ಅಲ್ಲಿಯ ತನಕ "ನಾವು ಜೀವನದಲ್ಲಿ ಬೆಳೆಯುವುದಿಲ್ಲ". Until we say "I know it..." we don't grow further in life. Our growth will be stagnant there.

ಒಂದು ಸಿಂಪಲ್ ಉದಾಹರಣೆ ನೋಡೋಣ, ನಾವು ಎಲ್.ಕೆ.ಜಿ(LKG) ಯಿಂದ ಈಗ ಮಾಸ್ಟರ್ ಡಿಗ್ರಿ(Master Degree) ವರೆಗೆ ಏನೆಲ್ಲಾ ಹೊಸದನ್ನು(NEW) ಕಲಿತಿದ್ದೆವೋ ಅದು ಹೇಗೆ ಕಲಿತೆವು? ನಾನು ಹೇಳುತ್ತಿರುವುದು ನಾವು ಕಲಿತ ಪ್ರತಿಯೊಂದು ಹೊಸ ವಿಷಯಗಳ ಬಗ್ಗೆ. ಉದಾಹರಣೆಗೆ, ಚಿಕ್ಕಂದಿನಲ್ಲಿ ನಮಗೆ ಕೂಡಿಸುವ ಕಳೆಯುವ ಲೆಕ್ಕ ಕೂಡ ಬರುತ್ತಿರಲಿಲ್ಲ, ಮುಂದೆ ನಾವು ಅದನ್ನು ಚೆನ್ನಾಗಿ ಕಲಿತೆವು. ನಮ್ಮ ವಿಧ್ಯಾಭ್ಯಾಸ ಮುಂದುವರೆದಂತೆ, ನಮ್ಮ ವಯಸ್ಸು ಬೆಳೆದಂತೆ ನಾವು ತುಂಬಾ ಹೊಸ ಹೊಸದನ್ನು ಕಲಿತೆವು. ಹೇಗೆ? ಹೇಗೆಂದರೆ ನಾವು ಪ್ರತಿಸಲ ಹೊಸದನ್ನು ಕಲಿಯಲು ಕೂತಾಗ ನಮ್ಮ ಸುಪ್ತ ಮನಸ್ಸಿನಲ್ಲಿ ಎಲ್ಲೋ ಒಂದು ಮೂಲೆಯಲ್ಲಿ "ನನಗಿದು ಹೊಸದು, ಇದರಬಗ್ಗೆ ನನಗೆ ಗೊತ್ತಿಲ್ಲ, ಇದು ಇಂಟರೆಸ್ಟಿಂಗ್ ಆಗಿದೆ ಸ್ವಲ್ಪ ಇದರಬಗ್ಗೆ ತಿಳಿದುಕೊಳ್ಳೋಣ, ಇದು ಎಕ್ಷಾಮಿಗೆ ಬರಬಹುದು ಹಾಗಾಗಿ ನಾನು ಗಮನವಿಟ್ಟು ಕಲಿಯಬೇಕು.." ಹೀಗೆ ಪಾಸಿಟಿವ್ ಭಾವನೆಗಳು ಮೂಡಿದ್ದವು. ನಿಮ್ಮನ್ನು ನೀವೇ ಕೇಳಿಕೊಳ್ಳಿ, ನಿಮಗೆ ಮುಂಚೆನೇ ಪೂರ್ತಿಯಾಗಿ ಗೊತ್ತಿದೆ ಎಂದು ಅನ್ನಿಸಿದ ವಿಷಯ ಯಾವತ್ತಾದರೂ ಪುನಃ ಒಮ್ಮೆ ನೋಡೋಣ ಎಂದು ಅನ್ನಿಸಿದೆಯಾ ನಿಮಗೆ? ಇಲ್ಲ, ಯಾಕೆ? "ನನಗದು ಗೊತ್ತು". ನೀವು ಒಮ್ಮೆ ಈ ಪ್ರಯೋಗವನ್ನು ಮಾಡಿ ನೋಡಿ. ಹೊಸದಾಗಿ ಒಂದು ವಿಷಯ ಕಲಿಯುತ್ತಿರುವಾಗ ಮನಸ್ಸಿನಲ್ಲಿ ಬಲವಾಗಿ ಹೇಳಿಕೊಳ್ಳಿ "ನನಗೆ ಇದು ಪೂರ್ತಿಯಾಗಿ ಗೊತ್ತು, ಇದು ನನಗೆ ಬೇಡ, ಇದು ನನಗೆ ಇಂಟರೆಸ್ಟಿಂಗ್ ಆಗಿ ಇಲ್ಲ, ನನಗೆ ಇದರಬಗ್ಗೆ ಗೊತ್ತಿರೋದ್ರಿಂದ ಪುನಃ ತಿಳಿದುಕೊಳ್ಳೋ ಅವಶ್ಯಕತೆ ಇಲ್ಲ". ನೀವೇ ಗಮನಿಸಿ, ಆಮೇಲೆ ನಿಮಗೆ ಬೇಕು ಅಂದ್ರು ಆ ವಿಷಯ ನಿಮ್ಮ ತಲೆಗೆ ಹೋಗುವುದಿಲ್ಲ. ಮಾಡಿ ನೋಡಿ.

ನಮಗೆ ಗೊತ್ತಿಲ್ಲದ ವಿಷಯ ಕಲಿಯುವಾಗ ನಮ್ಮ ಮನಸ್ಸಿನಲ್ಲಿ ಬಂದ ಭಾವನೆ "ನನಗದು ಗೊತ್ತಿಲ್ಲ", ಅದೇ, ಮೊದಲೇ ನಿಮಗೆ ತಿಳಿದಿದ್ದ ವಿಷಯದಬಗ್ಗೆ ಪುನಃ ಕೇಳಿದರೆ ಮನಸ್ಸಿನಲ್ಲಿ ಬಂದ ಭಾವನೆ "ನನಗದು ಗೊತ್ತು..." ಎಲ್ಲಿಯತನಕ ನಮ್ಮ ಮನಸ್ಸಿನಲ್ಲಿ "ನನಗದು ಗೊತ್ತಿಲ್ಲ, ಹೊಸದಾಗಿ ಕಲಿಯುತ್ತೇನೆ" ಎಂಬ ಭಾವನೆಗಳು ಬರುವುದಿಲ್ಲವೋ ಅಲ್ಲಿಯ ತನಕ ನಮಗೆ ಹೊಸ ವಿಷಯಗಳು ತಿಳಿಯುವುದಿಲ್ಲ; ಎಲ್ಲಿಯ ತನಕ ನಮಗೆ ಹೊಸ ವಿಷಯಗಳು ತಿಳಿಯುವುದಿಲ್ಲವೋ ಅಲ್ಲಿಯ ತನಕ ನಮ್ಮ ಮಾನಸಿಕ ಬೆಳವಣಿಗೆ ಆಗುವುದಿಲ್ಲ. ಇದರಲ್ಲಿ ಯಾವ ಮ್ಯಾಜಿಕ್ಕೂ ಇಲ್ಲ; ಇದು ಬರಿಯ ಲಾಜಿಕ್ಕು ಅಸ್ಟೆಯ.
ಒಮ್ಮೆ ಯೋಚಿಸಿ ನೋಡಿ, ನಮ್ಮ ನಿತ್ಯ ಜೀವನದಲ್ಲಿ ಎಷ್ಟೆಲ್ಲ ಚಿಕ್ಕ ಚಿಕ್ಕ ವಿಷಯಗಳಿವೆ, ಅದರಲ್ಲಿ ಎಷ್ಟು ವಿಷಯದಲ್ಲಿ ನಾವು "ನನಗೆ ಗೊತ್ತಿಲ್ಲ, ಹೊಸದಾಗಿ ಕಲಿಯೋಣ" ಎಂದು ಎಣಿಸಿದ್ದೇವೆ? ಎಷ್ಟು ವಿಷಯಗಳ ಕಡೆಗೆ ಗಮನ ಹರಿಸಿ ಅದರ ಅರ್ಥ ಇನ್ನೊಮ್ಮೆ ತಿಳಿಯಲು ಪ್ರಯತ್ನಿಸಿದ್ದೇವೆ? ಬಹುಶಃ ಅತೀ ಕಡಿಮೆ. ಹಾಗಾದರೆ "ನಮ್ಮ ಜೀವನದಲ್ಲಿ ಪ್ರತಿದಿನವೂ ಅತಿ ವೇಗದ ಬೆಳವಣಿಗೆಯಿಂದ ನಾವು ಎಷ್ಟು ವಂಚಿತರಾಗುತ್ತಿದ್ದೇವೆ?".
ಹಾಗಾದರೆ ಪ್ರತಿ ದಿನವೂ ನಮ್ಮ ಜೀವನವನ್ನು ಎಷ್ಟು ನಿಧಾನಗತಿಯಲ್ಲಿ ನಡೆಸುತ್ತಾ, ಎಷ್ಟು ವ್ಯರ್ಥ ಮಾಡುತ್ತಿದ್ದೇವೆ? ಎಷ್ಟೋ ಚಿಕ್ಕ ಚಿಕ್ಕ ವಿಷಯಗಳ (which are our basic needs of life) ಮೇಲೆ ಗಮನ ಕೊಡಲಾಗದೆ, ಆ ಚಿಕ್ಕ ಚಿಕ್ಕ ಅತಿಮೌಲ್ಯ ವಿಷಯಗಳ ಸಂಪೂರ್ಣ ಬೆಳವಣಿಗೆಯಿಂದ ವಂಚಿತರಾದ ನಾವು, ಜೀವನದಲ್ಲಿ ಎಷ್ಟು ಪ್ರೌಢಿಮೆ ಪಡೆದು ಯೋಗ್ಯರಾಗಿ ಬದುಕಲು ಅರ್ಹರಾಗಿದ್ದೇವೆ? ಮತ್ತೇಕೆ ಪ್ರತಿದಿನ ನಾವು "ನಾನೇಕೆ ಜೀವನದಲ್ಲಿ ಬೆಳೆಯುತ್ತಿಲ್ಲ? ನನಗೆ ಮಾತ್ರ ಈ ತರಹದ ಕಷ್ಟಗಳು ಬರುತ್ತವೆ" ಎಂದೆಲ್ಲಾ ಕೊರಗುತ್ತೇವೆ? ಇದಕ್ಕೆಲ್ಲ ಮೂಲ ಕಾರಣ ಏನು? ಮೂಲ ಕಾರಣ "ನನಗೆ ಅದರಬಗ್ಗೆ ಎಲ್ಲಾ ಗೊತ್ತು.."

ಜೀವನದಲ್ಲಿ ಸಾಧನೆ ಮಾಡಿದ ಪ್ರತಿಯೊಬ್ಬ ವ್ಯಕ್ತಿಯಬಗ್ಗೆ ಕೇಳಿ, ಆತ ಹೇಳುವ ಎಲ್ಲ ವಿಷಯಗಳ ತಾತ್ಪರ್ಯ ಒಂದೇ
"ನನ್ನ ಸಾಧನೆಗೆ ಕಾರಣ ನಾನು ತೆಗೆದುಕೊಳ್ಳುವ ಸರಿಯಾದ ನಿರ್ಧಾರಗಳು".
"ಸರಿಯಾದ ನಿರ್ಧಾರಗಳನ್ನು ಹೇಗೆ ತೆಗೆದುಕೊಳ್ಳುತ್ತೀರಿ?"
"ನನ್ನ ಅನುಭವಗಳಿಂದ".
ಸರಿಯಾದ ನಿರ್ಧಾರ ತೆಗೆದುಕೊಳ್ಳಲು ನಮಗೆ ಆ ವಿಷಯದ ಬಗ್ಗೆ ಸಂಪೂರ್ಣ ಮಾಹಿತಿ ಬೇಕು. ಜೀವನದ ಪ್ರತಿಯೊಂದು ಹೆಜ್ಜೆಯಲ್ಲೂ ಆಘಾಧವಾದ ಮಾಹಿತಿಗಳು ದೊರಕುತ್ತವೆ, ಆದರೆ ಆ ಮಾಹಿತಿಗಳನ್ನು ಸ್ವೀಕರಿಸಬೇಕಾದರೆ ಮೊದಲು ನಾವು ತೆರೆದ ಮನಸ್ಸಿನವರಾಗಬೇಕು. ಎಲ್ಲಿಯತನಕ ನನಗದು ಗೊತ್ತಿದೆ ಎಂದು ನಮ್ಮಲ್ಲಿಗೆ ಹರಿದು ಬರುತ್ತಿರುವ ಜ್ನಾನವನ್ನು ನಿಲ್ಲಿಸುತ್ತೇವೋ ಅಲ್ಲಿಯತನಕ ನಮ್ಮ ಬೆಳವಣಿಗೆ ಕುಂಟಿತವಾಗುತ್ತದೆ.

ಇನ್ನು ಬಂಗಾರದ ಮೊಟ್ಟೆ ಇಡುವ ಕೋಳಿಯ ಕಥೆಯ ನೀತಿಯನ್ನು ಹೇಳಬೇಕಾದರೆ, ವ್ಯವಹಾರದಲ್ಲಿ ನಿಮಗೆ ಎರಡು ವಿಷಯಗಳು ಗಮನದಲ್ಲಿ ಇರಬೇಕು, ಒಂದು ಬಂಗಾರದ ಮೊಟ್ಟೆ ಇಡುವ ಕೋಳಿ ಮತ್ತು ಎರಡನೆಯದು ಬಂಗಾರದ ಮೊಟ್ಟೆ. ಇವೆರಡೂ ಸಮಪ್ರಮಾಣದಲ್ಲಿ ಯೋಗ್ಯವಾದ ಅಂಶಗಳು. ಇವೆರಡರಲ್ಲಿ ಯಾವುದಾದರೂ ಒಂದು ಅಂಶದ ಬಗ್ಗೆ ನಮ್ಮ ಗಮನ ಕಡಿಮೆ ಆದರೂ ನಷ್ಟ ಖಂಡಿತ.
ಇದನ್ನು ಒಂದು ಫಾರ್ಮುಲಾ ದಲ್ಲಿ ವಿವರಿಸಬೇಕಾದರೆ,
ವ್ಯವಹಾರದ ಸಮತೋಲನೆ = (ಉತ್ಪಾದನೆಯ ಸಾಮರ್ಥ್ಯ / ಉತ್ಪಾದನೆ)
or, in English,
BB = (PC / P)
--- BB = Balance in Business
--- PC = Production Capability
--- P = Production
ಉತ್ಪಾದನೆಯ ಸಾಮರ್ಥ್ಯ ಎಂದರೆ, ಕಥೆಯಲ್ಲಿ, "ಕೋಳಿ", ಮತ್ತು ಅದರ ಉತ್ಪಾದನೆ "ಬಂಗಾರದ ಮೊಟ್ಟೆ".
ನೀವು ಕೋಳಿಯನ್ನು ನಿರ್ಲಕ್ಷ್ಯ ಮಾಡಿದರೂ ಅಥವಾ ಬಂಗಾರದ ಮೊಟ್ಟೆಯನ್ನು ನಿರ್ಲಕ್ಷ್ಯ ಮಾಡಿದರೂ ನಷ್ಟ ನಿಮಗೇ.
ಅಂತೆಯೇ ವ್ಯವಹಾರದಲ್ಲಿ, ನಿಮ್ಮ ಉತ್ಪಾದನೆಯ ಸಾಮರ್ಥ್ಯ ನಿಮ್ಮ ಕೆಲಸಗಾರರು (your employees), ಮತ್ತು ಉತ್ಪಾದನೆ "ನಿಮ್ಮ ಕೆಲಸಗಾರರು ಮಾಡಿಕೊಟ್ಟ ಕೆಲಸ (the work done)". ನೀವು ಇದರಲ್ಲಿ ಯಾವುದನ್ನು ನಿರ್ಲಕ್ಷಿಸಿದರೂ ಬಹಳ ನಷ್ಟ ಅನುಭವಿಸಬೇಕಾಗುತ್ತದೆ.
ಇದರ ಇನ್ನೊಂದು ಮುಖ ಎಂದರೆ, ಯಾವುದೇ ಒಂದು ಅಂಶದಮೇಲೆ ನೀವೂ ಹೆಚ್ಚು ಗಮನ ಹರಿಸಿದರೂ, ಅದೂ ನಿಮ್ಮ ವ್ಯವಹಾರಕ್ಕೆ ಕೇಡೆ. ಎರಡೂ ವಿಷಯಗಳ ಮೇಲೆ ಸರಿ ಪ್ರಮಾಣದ ಕಾಳಜಿ ಮುಖ್ಯ. ಈ ಕಥೆಯನ್ನು ನಮ್ಮ ಎಷ್ಟು ಚಿಕ್ಕ ವಯಸ್ಸಿನಲ್ಲಿ ಕೇಳಿದ್ದೇವೆ. ಆಗ ನಮಗೆ ಇಷ್ಟೊಂದು ಯೋಚಿಸುವ ಶಕ್ತಿ ಇರಲಿಲ್ಲ. ಆದರೆ ಈಗ?

ಬಚ್ಚಿಟ್ಟುಕೊಂಡಿಹುದೆ ಸತ್ಯ ಮಿಥ್ಯೆಯ ಹಿಂದೆ? |
ನಚ್ಚುವುದೆ ಮರೆಯೊಳಿಹುದನೆ ಸತ್ಯವೆಂದು? ||
ಅಚ್ಚರಿಯ ತಂತ್ರವಿದು; ಬ್ರಹ್ಮ ಸೃಷ್ಟಿಗಳೇಕೊ |
ಮುಚ್ಚಿಹವು ಸಾಜತೆಯ ಮಂಕುತಿಮ್ಮ

Sunday, September 4, 2011

ನಾವೇನು ಸಮರ್ಥಿಸ ಹೊರಟಿದ್ದೇವೆ?...

ಒಬ್ಬ ಶಿಷ್ಯ ಯಾವತ್ತೂ ಹಸುವನ್ನು (ಆಕಳು) ನೋಡಿರಲಿಲ್ಲ. ತನ್ನ ಗುರುಗಳಲ್ಲಿ ಬಂದು ಕೇಳಿದ,
"ಗುರುಗಳೇ, ಹಸು ಎಂಬ ಪ್ರಾಣಿ ಹೇಗಿರುತ್ತೆ?"
ಗುರು ಹೇಳಿದರು "ಮಗು, ಹಸು ಒಂದು ಸಾಧು ಪ್ರಾಣಿ, ಅದಕ್ಕೆ ನಾಲ್ಕು ಕಾಲುಗಳು, ಎರಡು ಕಿವಿ, ಎರಡು ಕಣ್ಣು... ಅದು ಸಸ್ಯಾಹಾರಿ ಪ್ರಾಣಿ. ಅದನ್ನು ಕೊಟ್ಟಿಗೆಯಲ್ಲಿ ಸಾಕುತ್ತಾರೆ. ಅದು ಹಾಲನ್ನು ಕೊಡುತ್ತದೆ. ಅದರ ಹಾಲು ಬಿಳಿಯ ಬಣ್ಣದ್ದು. ಹಾಲು ತುಂಬಾ ಪೌಷ್ಟಿಕ ಆಹಾರ. ಆರೋಗ್ಯದ ದೃಷ್ಟಿಯಿಂದ ಹಾಲು ಕುಡಿಯುವದು ತುಂಬಾ ಒಳ್ಳೆಯದು..." ಎಲ್ಲವನ್ನೂ ಸರಿಯಾಗಿ ವಿವರಿಸಿದರು.
ಶಿಷ್ಯ ತೀರ್ಮಾನಿಸಿದ, ಈ ಹಸು ಎಂಬ ಪ್ರಾಣಿಯನ್ನು ಇವತ್ತೇ ನೋಡಿಬಿಡಬೇಕು. ಹೀಗೆ ಎಣಿಸಿದವನು ಹಸುವನ್ನು ಹುಡುಕಿ ಹೊರಟ.
ಒಂದು ಜಾಗ ತಲುಪಿದಮೇಲೆ ಅಲ್ಲಿ ಒಂದು ಹಸುವಿನ ಸಿಮೆಂಟಿನ ಒಂದು ಪ್ರತಿಮೆಯನ್ನು ಕಂಡ. ಕೂಡಲೇ ಗುರುಗಳು ಹೇಳಿದ ಎಲ್ಲ ಮಾತುಗಳನ್ನು ನೆನಪಿಸಿಕೊಂಡು ಬಹುಷಃ ಗುರುಗಳು ಹೇಳಿದ ಹಸು ಇದೇ ಇರಬೇಕು ಎಂಬ ತೀರ್ಮಾನಕ್ಕೆ ಬಂದ. ಆ ಪ್ರತಿಮೆಯ ಪ್ರತಿಯೊಂದು ಅಂಗಗಳನ್ನು ಮುಟ್ಟಿ ಮುಟ್ಟಿ ನೋಡಿದ. ಹಸುವನ್ನು ನೋಡಿದೆ ಎಂಬ ಕುಶಿಯಲ್ಲಿ ಹಿರಿ ಹಿರಿ ಹಿಗ್ಗಿದ. 
ಅಲ್ಲಿ ಆ ಸಿಮೆಂಟಿನ ಪ್ರತಿಮೆಗೆ ಸುಣ್ಣ ಬಳಿಯಲು ಒಂದು ಬಕೆಟ್ ತುಂಬಾ ಸುಣ್ಣದ ನೀರನ್ನು ಇಟ್ಟಿದ್ದರು. ಅದನ್ನು ನೋಡಿದ ಶಿಷ್ಯ ಬಹುಷಃ ಗುರುಗಳು ಹೇಳಿದ ಹಸುವಿನ ಹಾಲು ಇದೇ ಇರಬೇಕು ಎಂಬ ತೀರ್ಮಾನಕ್ಕೆ ಬಂದುಬಿಟ್ಟ. ಕೊನೆಗೆ ಹಸುವನ್ನು ನೋಡಿದ್ದಾಯಿತು, ಇನ್ನು ಹಸುವಿನ ಹಾಲಿನ ರುಚಿ ನೋಡಿ ಬಿಡೋಣ ಎಂದು ಆ ಬಕೆಟಿನಲ್ಲಿದ್ದ ಸುಣ್ಣದ ನೀರನ್ನು ಕುಡಿದು ಬಿಟ್ಟ.

ಅವನನ್ನು ಆಸ್ಪತ್ರೆಗೆ ಸೇರಿಸಲಾಯಿತು. ಗುರುಗಳು ಅವನನ್ನು ನೋಡಲು ಬಂದರು.
"ಏನಾಯಿತು?" ಗುರುಗಳು ಕೇಳಿದರು.
ಶಿಷ್ಯ ಕೋಪದಿಂದ "ಗುರುಗಳಾ ನೀವು, ನನ್ನ ಹಿತ ಚಿಂತಕರಾಗಿ ನೀವು ಹೀಗೆ ಮಾಡಬಹುದಾ. ವಿಷಯ ತಿಳಿದಿಲ್ಲ ಅದಕ್ಕೆ ನಿಮ್ಮಲ್ಲಿ ಕೇಳಿದ್ದು, ನೀವು ಇಂತಹ ಸುಳ್ಳು ಹೇಳುವವರೆಂದು ನನಗೆ ತಿಳಿದಿರಲಿಲ್ಲ" ಎಂದ.
ಗುರು ಶಾಂತವಾಗಿ ಕೇಳಿದರು "ಏನಾಯಿತೆಂದು ತಿಳಿಸು ಮೊದಲು".
"ನೀವು ಹೇಳಿದ ಹಾಗೆ ಇರುವ ಒಂದು ಹಸುವನ್ನು ನೋಡಿದೆ. ಅದರಲ್ಲಿ ನೀವು ಹೇಳಿದ ಎಲ್ಲ ಅಂಶಗಳಿದ್ದವು. ಕೊನೆಗೆ ಹಸುವಿನ ಹಾಲನ್ನೂ ನೋಡಿದೆ. ನೀವೇ ಹೇಳಿದ್ದು ಹಸುವಿನ ಹಾಲು ಆರೋಗ್ಯಕ್ಕೆ ಬಹಳ ಉತ್ತಮ ಎಂದು. ನಾನು ಆ ಹಾಲನ್ನು ಕುಡಿದೆ. ಅಷ್ಟೇ, ನನ್ನನ್ನು ಆಸ್ಪತ್ರೆಗೆ ಸೇರಿಸುವ ಪ್ರಸಂಗ ಎದುರಿಬಂತು" ಎಂತೆಲ್ಲ ಶಿಷ್ಯ ರೇಗಾಡಿದ.
ಗುರುಗಳು ಬಹಳ ಶಾಂತವಾಗಿ ಕೇಳಿದರು "ನೀನು ಹಾಲನ್ನು ಕುಡಿದೆ, ಸರಿ, ಆ ಹಾಲನ್ನು ನೀನೇ ಕರೆದೆಯಾ?"
ಒಮ್ಮೆಲೇ ಶಿಷ್ಯ ಇಳಿದು ಹೋದ, ತಗ್ಗಿದ ದನಿಯಲ್ಲಿ ಉತ್ತರಿಸಿದ "ಇಲ್ಲ".
ಗುರು ಕೇಳಿದರು "ಹಾಗಾದರೆ ಅದನ್ನು ಹಾಲು ಎಂದು ನೀನು ಹೇಗೆ ತೀರ್ಮಾನಿಸಿದೆ?"

ದುಡುಕುತನ. ನಮ್ಮಲ್ಲಿ ಅಂತಹ ಶಿಷ್ಯರು ಬಹಳಷ್ಟಿದ್ದೇವೆ. ನಮಗೆ ಪೂರ್ತಿ ತಿಳಿಯುವ ವ್ಯವಧಾನವೂ ಇಲ್ಲ, ಕೇಳಿಸಿಕೊಳ್ಳುವ ಸಭ್ಯತೆಯೂ ಇಲ್ಲ, ಸ್ವತಃ ಅರಿತುಕೊಳ್ಳುವ ಪರಿಸ್ಥಿತಿಯಲ್ಲಂತೂ ಮೊದಲೇ ನಾವಿಲ್ಲ. ಯಾರೋ ಏನೋ ಹೇಳಿದರು, ಅದನ್ನು ನಮಗೆ ಆದಷ್ಟು ಬೇಗ ಎಲ್ಲರಲ್ಲಿ ಹೇಳಿಕೊಂಡು ತಿರುಗಬೇಕು. ವಿಷಯದ ಪರಿಪಕ್ವತೆ ತಿಳಿಯಬೇಕಾಗಿಲ್ಲ ನಮಗೆ. ಸರಿಯಾಗಿ ಹೇಳುವುದಾದರೆ, ಆ ವಿಷಯ ನಿಜವೊ ಸುಳ್ಳೋ ತಿಳಿಯುವ ತಾಳ್ಮೆ ಕೂಡ ನಮಗಿಲ್ಲ, ನಮಗೆ ಬೇಕಾಗಿಯೂ ಇಲ್ಲ. ಯಾರೋ ಹೇಳಿದರು, ನಮಗದು ವಿಷಯ ಚರ್ಚಿಸುವಲ್ಲಿ ಮುದ ನೀಡಿದರೆ ಸಾಕು. ಅದರಲ್ಲೂ, ಕೇಳಿದ್ದನ್ನು ಹೇಳುವ ಅಭ್ಯಾಸವಾದರೂ ನಮಗಿದೆಯೇ? ಇಲ್ಲ, ಅದಕ್ಕೆ ನಮ್ಮ ಕಾಲು ಬಾಲ ಸೇರಿಸಿ, ಮಸಾಲೆ ಒಗ್ಗರಣೆ ಹಾಕಿ ಇನ್ನೂ ರಸವತ್ತಾಗಿಸಿ ಅದರ ಮಜಾ ಸವಿಯಲು ಇಚ್ಚಿಸುತ್ತೇವೆ. ಕೊನೆಗೆ ಆ ಶಿಷ್ಯನಿಗಾದ ಪರಿಣಾಮವೇ ನಮಗೂ ಆಗುವುದು. ಬಹಳ ಯೋಚಿಸಬೇಕಾದ ವಿಷಯ ಇದು. ಆದರೆ, ನನ್ನ ವಿಷಯ ಸಧ್ಯ ಇದಲ್ಲ. ಇದರಬಗ್ಗೆ ಇನ್ನೊಮ್ಮೆ ಚರ್ಚಿಸೋಣ. ಇಲ್ಲಿ ನನ್ನ ವಿಷಯ, ನಮ್ಮ ತೊಂದರೆಗೆ ನಾವು ಬೇರೆಯವರ ಮೇಲೆ ಗೂಬೆ ಕೂರಿಸುತ್ತಿರುವುದು ಎಷ್ಟು ಉತ್ತಮ? ಆ ಶಿಷ್ಯ ವಿನಾಕಾರಣ ಗುರುಗಳ ಮೇಲೆ ಹಾರಾಡಿದ್ದು ಎಷ್ಟು ಸಮಂಜಸ? ಇದಕ್ಕೆ ನಮ್ಮ ಪರಿಯೇನು?

ಒಮ್ಮೆ ನನ್ನ ಹತ್ತಿರದ ಬಂಧು ಒಬ್ಬರಿಗೆ ಒಂದು ಲ್ಯಾಪ್-ಟಾಪ್ ಬೇಕಿತ್ತು. ಕೊಳ್ಳುವ ಮೊದಲು ಅವರ ರೂಲ್ಸ್, ಕಂಡಿಷನ್ಸ್, ರಿಕ್ವಯರ್ಮೆಂಟ್ಸ್ ತುಂಬಾ ಇದ್ದಿತ್ತು. ನನಗೆ ಇಷ್ಟೇ ದುಡ್ಡಿನಲ್ಲಿ (15k - 20k), ಒಳ್ಳೆಯ, ತುಂಬಾ ಸೌಲಭ್ಯ (features) ಇರುವ, ತುಂಬಾ ಬಾಳಿಕೆ ಬರುವ (very good warranty), ಗಟ್ಟಿಮುಟ್ಟಾದ, ಹೊಸಾ (new, not 2nd hand) ಲ್ಯಾಪ್-ಟಾಪ್ ಬೇಕು.
ಮೊದಲು ನಾನು ಅವರಿಗೆ ತಿಳಿಸಿ ಹೇಳಲು ಪ್ರಯತ್ನಿಸಿದೆ. ನೋಡಿ, ನೀವು ಹೇಳೋ ಎಲ್ಲ ರಿಕ್ವಯರ್ಮೆಂಟ್ಸ್ ಇರೋ ಲ್ಯಾಪ್-ಟಾಪ್ ಬೇಕು ಅಂದ್ರೆ ಹಣ ಸಾಲೋಲ್ಲ. ಹಣ ಹೆಚ್ಚಿಗೆ ಹಾಕೋದಾದ್ರೆ ನಿಮಗೆ ತುಂಬಾ ಒಳ್ಳೆ ಲ್ಯಾಪ್-ಟಾಪ್ ಕೊಡಿಸ್ತಿನಿ. ಅವರು ಕೇಳಲಿಲ್ಲ. ಇಲ್ಲ ತನಗೆ ಅಷ್ಟು ಹಣ ಕೊಡೋಕಾಗಲ್ಲ, ಇಷ್ಟೇ ಕೊಡೋದು, ಸ್ವಲ್ಪ ಪ್ರಯತ್ನ ಮಾಡಪ್ಪ, ಇಲ್ಲೇ ಕೂತು ಎಲ್ಲ ಡಿಸೈಡ್ ಮಾಡ್ತೀಯಾ ಅಂತ ಅಂದ್ರು. ನನಗೆ ಸಂಕಟದ ಪರಿಸ್ಥಿತಿ. ತುಂಬಾ ಹತ್ತಿರದವರು ಬೇರೆ. ಪ್ರಯತ್ನ ಮಾಡೋದಿಕ್ಕೆ ನನಗೆ ಅಭ್ಯಂತರ ಇಲ್ಲ, ಆದರೆ, ಕೆಲಸ ಆಗುತ್ತೆ ಎಂಬ ಸಣ್ಣ ಭರವಸೆ ಇದ್ರೆ ಪ್ರಯತ್ನ ಮಾಡಬೇಕಾದ್ದು ನನ್ನ ಧರ್ಮ. ಅದು ಬಿಟ್ಟು ಸಿಗೋಲ್ಲ ಎಂದು ಗೊತ್ತಿದ್ದೂ ಪ್ರಯತ್ನ ಮಾಡೋದು ಅಂದ್ರೆ ಕಾಡಲ್ಲಿ ಕೂತು ಕವಿತೆ ಓದಿದ ಹಾಗೆ. ನಾನೇನು ಮಾತನಾಡಲಿಲ್ಲ, ಎಲ್ಲ ತರಹದಲ್ಲೂ ನನ್ನಿಂದಾದ ಪ್ರಯತ್ನ ಮಾಡಿ ಅವರ ಹಣಕ್ಕೆ ಸಿಗಬಹುದಾದ ಉತ್ತಮ ಲ್ಯಾಪ್-ಟಾಪ್ ಕೊಡಿಸಿದೆ. ಅವರು ಅದನ್ನು ಅವರ ಮಗನಿಗೆ ಕೊಟ್ಟರು. ಮಗನಿಗೆ ಕಂಪ್ಯೂಟರ್ ಗೇಮ್ ಆಡುವ ಅಭ್ಯಾಸ. ಆತ ತಾನು ತಂದ ಹೊಸ ಗೇಮ್ ಹಾಕಲು ಪ್ರಯತ್ನಿಸಿದ. ಅದು ಅವನ ಲ್ಯಾಪ್-ಟಾಪ್ ಆ ಗೇಮ್ ಆಡಲು ಸಮರ್ಥವಿಲ್ಲ (minimum configuration) ಎಂದು ಸೂಚಿಸಿತು. ಆತ ತನ್ನ ತಂದೆಯ ಬಳಿ ಹೋಗಿ 'ಅಪ್ಪ ಲ್ಯಾಪ್-ಟಾಪ್ ನಲ್ಲಿ ನನ್ನ ಕಾಲೇಜಿನ ಒಂದು ಸಾಫ್ಟವೇರ್ ಹಾಕ್ಕೋಬೇಕಿತ್ತು ಅದು ಹಾಕ್ಕೋದಿಕ್ಕೆ ಕೊಡ್ತಾ ಇಲ್ಲ, ಸರಿ ಇಲ್ಲ ಈ ಲ್ಯಾಪ್-ಟಾಪ್ ಅನ್ಸುತ್ತೆ' ಅಂದ.
ಆತನ ತಂದೆ ನನಗೆ ಫೋನ್ ಮಾಡಿ 'ಏನೋ, ಲ್ಯಾಪ್-ಟಾಪ್ ಅವನಿಗೆ ಕಾಲೇಜಿನ ಸಾಫ್ಟವೇರ್ ಹಾಕೋದಿಕ್ಕೆ ಕೊಡ್ತಾ ಇಲ್ಲವಂತೆ, ಎಂಥ ಲ್ಯಾಪ್-ಟಾಪ್ ಕೊಡ್ಸಿದ್ದೀಯೋ ಇದು.....?' ದಡಬಡನೆ ಒಂದೇ ಸಮನೆ ನನ್ನನ್ನು ದೂಷಿಸಿದ್ದೇ.. ವಿಷಯ ಏನು ಅನ್ನೋದನ್ನ ತಿಳಿಯುವ ಪ್ರಯತ್ನ ಕೂಡ ಮಾಡಲಿಲ್ಲ. ನನಗೋ, 'ನೀವು ಕೊಟ್ಟ ದುಡ್ಡಿಗೆ ಬರೋದು ಇಷ್ಟೇಯ' ಎಂದು ಹೇಳುವ ಹಾಗೂ ಇಲ್ಲ. ತುಂಬಾ ಹತ್ತಿರದವರು ಬೇರೆ, ಸುಮ್ಮನೆ ನಿಷ್ಠುರ ಮಾಡಿಕೊಳ್ಳೋ ಹಾಗೆ ಇಲ್ಲ. ಇದಕ್ಕೆ ನಾನು ಏನೆಂದೂ ಉತ್ತರ ಕೊಡಲಿ? ನಾನು ಯಾವ ತಪ್ಪಿಗೆ ಆ ಮಾತುಗಳನ್ನು ಕೇಳಲಿ?

ಇಲ್ಲಿ ಯಾರ ತಪ್ಪು ಯಾರು ಸರಿ ಅನ್ನೋದನ್ನ ನಾನು ಸಮರ್ಥಿಸಲು ಬಯಸುತ್ತಿಲ್ಲ; ಇಲ್ಲಿ ನನಗೆ ತಿಳಿಯದಿದ್ದದ್ದು ಒಂದು ವಿಷಯ ಅಂದ್ರೆ, ಜನ ಯಾಕೆ ಒಂದು ವಿಷಯ ಮಾತನಾಡುವ ಮೊದಲು, ಅದು ಬಾಯಿಯಿಂದ ಹೊರಬರುವ ಮೊದಲು ಯೋಚಿಸುವುದಿಲ್ಲ? ಮಾತನಾಡುವ ವಿಷಯದ ಪರಿಪಕ್ವತೆ ಜನ ತಿಳಿಯಲು ಯಾಕೆ ಬಯಸುವುದಿಲ್ಲ? ಇಂದಿನ ಜನಾಂಗ (ಬಹುಶಃ ನಾನೂ ಇದರಿಂದ ಹೊರತೇನಲ್ಲ) ಯಾಕೆ ಇಷ್ಟೊಂದು ತಾಳ್ಮೆ ಕಳೆದುಕೊಂಡಿದ್ದಾರೆ? ತಾನು ಮಾತನಾಡುವ ಸಂಗತಿಗಳಮೇಲೆ ಯಾಕೆ ಅವರಿಗೆ ಹಿಡಿತ ಇಲ್ಲ? ಪರಿಪೂರ್ಣ ಉತ್ತರ ನಿಜಕ್ಕೂ ನನ್ನಲ್ಲಿ ಇಲ್ಲ.

ಇನ್ನೂ ಹೆಚ್ಚಿನವರನ್ನು ನೋಡಿದ್ದೇನೆ ತನ್ನದೇನೋ ಒಂದನ್ನು ಸಮರ್ಥಿಸಿ ಬಿಡುತ್ತೇನೆ ಎಂಬ ಯೋಚನೆಯಲ್ಲಿ ಮಾತನಾಡುತ್ತಾರೆ. ಯಾರಾದರೂ ಮಾತನಾಡುವಾಗ ಒಮ್ಮೆ ಗಮನಿಸಿ, ಅವರಿಗೆ ತಾವು ಹೇಳಿದ ವಿಷಯವನ್ನು ಕೂಡಲೇ ಸಮರ್ಥಿಸಿ ಬಿಡಬೇಕೆಂಬ ತರಾತುರಿಯಲ್ಲಿ ಏನೇನೋ ಸರ್ಕಸ್ ಮಾಡಿ ಮಾತನಾಡಲು ಪ್ರಯತ್ನಿಸುತ್ತಿರುತ್ತಾರೆ. 'ಓಹೋ, ಏನೋ ಸಾಧಿಸಿಬಿಡುತ್ತೇನೆ ಈಗ' ಎಂಬಂತೆ ಮಾತನಾಡುತ್ತಾರೆ. ಎದುರಿನವನು ವಿಷಯವನ್ನು ಇವರು ಎಣಿಸಿದಂತೆ ಅಂದುಕೊಳ್ಳದಿದ್ದಲ್ಲಿ, ಏನೋ ಒಂದನ್ನು ಕಳೆದುಕೊಳ್ಳುತ್ತಿರುವಂತೆ ಚಡಪಡಿಸುತ್ತಿರುತ್ತಾರೆ. ತಾವು ಈಗ ಮಾತನಾಡದಿದ್ದಲ್ಲಿ ತಮ್ಮನ್ನು ಏನೋ ಶಿಕ್ಷೆಗೆ ಗುರಿಪಡಿಸಿ ಬಿಡುತ್ತಾರೆ ಎಂಬಂತೆ ವರ್ತಿಸುತ್ತಾರೆ. ಈ ತರಾತುರಿಯಲ್ಲಿ ಮಾತನಾಡುತ್ತಿರುವ ವಿಷಯದ ಆಳ ಅಳೆಯಲು ಮರೆತುಬಿಡುತ್ತಾರೆ.
ನನ್ನ ಪ್ರಶ್ನೆ ಒಂದೇ (ನನಗೂ ಸೇರಿಸಿ ಕೇಳಿಕೊಳ್ಳುತ್ತೇನೆ), ಯಾಕೆ ಈ ಸರ್ಕಸ್? ಏನನ್ನು ಸಮರ್ಥಿಸಿ ಸಾಧಿಸಲು ಯತ್ನಿಸುತ್ತಿದ್ದೇವೆ ನಾವು? ಯಾಕೆ ಯಾರದ್ದೋ ಮನವೊಲಿಸುವಲ್ಲಿ ನಮ್ಮ ಜೀವನ ವ್ಯರ್ಥ ಮಾಡುತ್ತಿದ್ದೇವೆ? ಯಾವುದೋ ಒಂದು ಅಯೋಗ್ಯ ವಿಷಯದ ಸಮರ್ಥನೆಯಿಂದ ನಮಗೇನು ಲಾಭ? ಅದನ್ನು ನಾವು ಸಮರ್ಥಿಸದಿದ್ದಲ್ಲಿ ಕಳೆದುಕೊಳ್ಳುವುದಾದರೂ ಏನನ್ನು? (ಇಲ್ಲಿ ಲಾಭ ನಷ್ಟ ಎಂಬ ಪದದ ಬಳಕೆಯಿಂದ ಕೆಲವರು ನನ್ನಲ್ಲಿ ಕೇಳಿದ್ದರು, "ಓಹೋ, ನಿನ್ನ ಅರ್ಥದಲ್ಲಿ ಯಾವುದೇ ಕೆಲಸ ಮಾಡುವ ಮೊದಲು ಏನೋ ಒಂದು ಲಾಭ/ನಷ್ಟ ಸಿಗುತ್ತೆ ಅನ್ನೋದನ್ನ ಇಟ್ಟುಕೊಂಡೇ ಮಾಡಬೇಕಾ?". ಇಲ್ಲ ಸ್ವಾಮಿ ಇಲ್ಲಿ ನನ್ನನ್ನು ತಪ್ಪು ತಿಳಿಯಬೇಡಿ, ನಾನು ನಿಮ್ಮ "ವ್ಯಾಪಾರದ" ಲಾಭ ನಷ್ಟದ ಬಗ್ಗೆ ಹೇಳಬಯಸುತ್ತಿಲ್ಲ, ನಾನು ಹೇಳುತ್ತಿರುವುದು ನಮ್ಮ ಮೌಢ್ಯತೆಯ ಬಗ್ಗೆ, ಅಷ್ಟೇ.)

ನಾನಾಗಲೇ ಹೇಳಿದಂತೆ ಇದಕ್ಕೆ ಪರಿಪೂರ್ಣ ಉತ್ತರ ನನ್ನಲ್ಲಿ ಇಲ್ಲ. ಆದರೆ ಸಮಸ್ಯೆಯ ಮೂಲ ಅರಿಯುವ ಪ್ರಯತ್ನ ಮಾಡಬೇಕಿದೆ.

ಈ ಬದಲಾವಣೆಯ ಮೂಲ, ನನಗೆ ಅನ್ನಿಸಿದಂತೆ, ನಾವು ನಮ್ಮನ್ನು ಸಮರ್ಥಿಸುವಲ್ಲಿ ತೊಡಗಿರುವುದರಲ್ಲಿ ಇದೆ. ನಮ್ಮ ಸಮರ್ಥನೆ ಎಂಬ ತಪ್ಪು ಹಾದಿಯಲ್ಲಿ ಏನು ಅಡಚಣೆಗಳು ಬಂದರೂ ಅದನ್ನು ಮೀರಿ ಹೋಗಬೇಕೆಂಬ ಕೆಟ್ಟ ಹಟದಿಂದ ಶುರುವಾಗಿದೆ. ಇದರ ಇನ್ನೊಂದು ಮುಖ, ನಮ್ಮ ದಾರಿಗೆ ಅಡಚಣೆ ಎಂದು ತಿಳಿದು 'ಬೇರೆಯವರ ಮೇಲೆ ತಪ್ಪು ಹೊರಿಸಿ' ನಾವು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ನಮ್ಮನ್ನು (ನಾನು + ನನ್ನನ್ನು + ನನ್ನದು) ಅತೀ ಬುದ್ದಿವಂತನೆಂದು, ಅತೀ ತಿಳಿದವನೆಂದು ತೋರಿಸಿ ಬಿಡುತ್ತೇನೆ ಎಂಬ ಕೆಟ್ಟ ಚಟದಲ್ಲಿ ನಾವು ಬೇರೆಯವರ ಮೇಲೆ ಗೂಬೆ ಕೂರಿಸುವ ಯತ್ನದಲ್ಲಿದ್ದೇವೆ. ಕೊನೆಗೆ ವ್ಯರ್ಥ ಸಮರ್ಥನೆಯ ಹಾದಿಯಲ್ಲಿಯೇ ಉಳಿದುಬಿಡುತ್ತೇವೆ.
ಬಹುಶಃ, ನನಗನ್ನಿಸಿದಂತೆ, ಈ ಸಮಸ್ಯೆಯಿಂದ ಹೊರಬರಲು ಪ್ರಯತ್ನಿಸುವುದಾದರೆ, ನಾನು ಜೀವನದಲ್ಲಿ ಏನನ್ನು ತಿಳಿದಿದ್ದೆನೊ ಅದನ್ನು ಸಮರ್ಥಿಸಿ ಸಾಧಿಸ ಹೊರಡುವ ಮೊದಲು ನಾನು ತಿಳಿದ ವಿಷಯದ ನೈಜತೆ ಎಷ್ಟು ಎಂಬುದನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು. ಇದನ್ನು ತಿಳಿಯಲು, ಈ ಪ್ರಯತ್ನದ ಮೊದಲ ಹೆಜ್ಜೆಯಾಗಿ "ಬೇರೆಯವರ ಮೇಲೆ ಗೂಬೆ ಕೂರಿಸುವುದನ್ನು ಮೊದಲು ನಾವು ನಿಲ್ಲಿಸಬೇಕು".

ಅಂತಾನು ಮಿಂತಾನುಮೆಂತೊ ನಿನಗಾದಂತೆ |
ಶಾಂತಿಯನು ನೀನರಸು ಮನ ಕೆರಳಿದಂದು ||
ಸಂತವಿಡುತೊಮ್ಮೆ ಶಿಕ್ಷಿಸುತೊಮ್ಮೆ ಶಿಶುವೆಂದು |
ಸ್ವಾಂತಮಂ ತಿದ್ದುತಿರು ಮಂಕುತಿಮ್ಮ ||

Friday, August 26, 2011

ಲೋಕೋ ಭಿನ್ನ ರುಚಿಃ

ಅವತ್ತು ಬೆಳಿಗ್ಗೆ 8 ಗಂಟೆಗೆ ಎದ್ದೆ. ಸೀದಾ ಅಡುಗೆಮೆನೆಗೆ ಹೋಗಿ "ಆಮಾ.. ತಿಂಡಿ ಎಂತ ಇವತ್ತು?" ಎಂದೆ.
"ಅಕ್ಕಿ ದೋಸೆ ಕಣೋ" ಅಮ್ಮ ಅಂದರು.
ಅಸ್ಟರಲ್ಲಿ ಅಕ್ಕ ಒಳಗೆ ಬಂದು "ವಾವ್ಹ್ ಅಕ್ಕಿ ದೋಸೆನ" ಅಂದ್ರು.
"ಅಯ್ಯೋ ನಿನ್ ಬರೀ ಅವಳಿಗೆ ಬೇಕಾದ್ದು ಮಾತ್ರ ಮಾಡ್ತೀಯಾ. ಮೊನ್ನೆ ತಾನೇ ಅಕ್ಕಿ ದೋಸೆ ಮಾಡಿದ್ದೆ. ಇವತ್ತು ಅಕ್ಕಿ ದೋಸೆ. ನಾನ್ ಕೇಳಿದ್ದು ಉದ್ದಿನ ದೋಸೆ, ಅದು ಮಾತ್ರ ಮಾಡ್ಬೇಡ ನೀನು.." ಎಂದು ಅಮ್ಮನ ಮೇಲೆ ಸಿಟ್ಟು ಮಾಡಿಕೊಂಡೆ.
ಅಸ್ಟರಲ್ಲಿ ಅಪ್ಪ ಆಚೆ ಕೋಣೆಯಿಂದ ಕೂಗಿ ಹೇಳಿದ್ರು, "ಯಾಕೋ ಅಕ್ಕಿ ದೋಸೆ ತಿಂದ್ರೆ ಏನಾಗುತ್ತೆ ನಿಂಗೆ? ಮನುಷ್ಯರು ತಿನ್ನೋ ವಸ್ತುನೇ ತಾನೆ ಅದು."
"ಹೀಗೆ ಒಂದೊಂದೇ ನೆಪ ಹೇಳ್ತಾ ಏನೋ ಒಂದ್ ಮಾಡ್ತೀರಾ" ಹೇಳಿ ಅಡುಗೆಮನೆಯಿಂದ ಹೊರ ನಡೆದೆ.
ನೇರ ಅಪ್ಪನ ಕೋಣೆಗೆ ಹೋದೆ.
"ಅಪ್ಪಯ್ಯ ನಂಗೆ ಈಸಲ ಶಾಲೆಗೆ ಹೊಸ ಬ್ಯಾಗ್ ಬೇಕು".
"ನಂಗೂ ಹೊಸ ಬ್ಯಾಗ್ ಬೇಕಪ್ಪಯ್ಯ" ಅಂದ್ಲು ಅಕ್ಕ.
"ನಂಗೆ ಗ್ರೀನ್ ಕಲರ್ ಬ್ಯಾಗು, ಅದರತುಂಬ ಪಾಕಿಟ್ ಇರಬೇಕು, ಅದಕ್ಕೆ ಎರಡು ಜಾಗ ಬೇಕು, ಒಂದ್ರಲ್ಲಿ ಪುಸ್ತಕ ಇಡುಕೆ ಇನ್ನೊಂದ್ರಲ್ಲಿ ನೋಟ್ಸ್ ಇಡುಕೆ" ಅಂದೆ ನಾನು.
"ಅಪ್ಪಯ್ಯ ನಂಗೆ ಬ್ಲಾಕ್ ಕಲರ್ ಬ್ಯಾಗು. ಬ್ಲಾಕ್ ಕಲರ್ ಬ್ಯಾಗು ಬೇಗ ಮಣ್ಣ್ ಆಗೋಲ್ಲ ಗೊತ್ತಾ.." ಅಂದ್ಲು ಅಕ್ಕ.
"ನನ್ನ ಗ್ರೀನ್ ಬ್ಯಾಗೂ ಮಣ್ಣ್ ಆಗೋಲ್ಲ, ಹೂಂ.." ಅಂತ ಕೋಪ ಮಾಡಿಕೊಂಡೆ.
"ನೀವಿಬ್ರೂ ನನ್ ಕೋಣೆಯಿಂದ ಮೊದಲು ಹೊರಗೆ ಹೋಗಿ, ನಂಗೆ ಆಫೀಸಿಗೆ ಲೇಟ್ ಆತ್ತು, ಸಂಜೆ ಮಾತಾಡುವ" ಅಂದ್ರು ಅಪ್ಪ.
"ನಂಗೆ ಗ್ರೀನ್ ಕಲರ್ ಹೊಸ ಬ್ಯಾಗ್ ಬೇಕು, ಮುಂಚೇ ಹೇಳಿದ್ದೆ ನಾನು.." ಅಂತ ನಾನು ಹೇಳಿ, ನಾನು ಅಕ್ಕ ಕೋಣೆಯಿಂದ ಹೊರಗೆ ಹೋದೆವು.

ನನ್ನಲ್ಲಿ ಇಂತಹ ಭಾವನೆಗಳು ಏಕೆ ಬರುತ್ತವೆ? ನಮಗೆ ಇದು ಬೇಕು, ಇದು ಅವನದ್ದು, ನನಗೆ ಇದು ಬೇಡ, ಇದು ನನ್ನ ಇಷ್ಟದ್ದು, ನನಗೆ ಅದೆಂದ್ರೆ ತುಂಬಾ ಇಸ್ಟ. ಒಂದು ರೀತಿಯಲ್ಲಿ ಎಲ್ಲದರಲ್ಲೂ  ತಾರತಮ್ಯದ ಮನಸ್ಸು. ನಮಗೆ ದೊರೆತದ್ದರಲ್ಲಿ ಸಂತೋಷವಿಲ್ಲ. ಪ್ರತಿ ಸಣ್ಣ ವಿಷಯಕ್ಕೂ ವಿಷಾದದ ಮನೋಭಾವ, ಪ್ರತೀ ಚಿಕ್ಕ ಪುಟ್ಟ ವಿಷಯದಲ್ಲೂ ದುಖಃ. ಯಾಕೆ ನಮ್ಮಲ್ಲಿ ಇಂತಹ ಮನೋವ್ಯಾಧಿ? ಅದೂ ಇಸ್ಟು ಸಣ್ಣ ವಯಸ್ಸಿನಲ್ಲಿ (ನನಗೆ ಮತ್ತು ನಿಮಗೆ)! ನನ್ನ ಮೇಲಿನ ಉದಾಹರಣೆ ಒಂದು ಚಿಕ್ಕ ಸ್ಯಾಂಪಲ್ಲು ಅಸ್ಟೇ. ಅದರ ಹತ್ತು ಪಟ್ಟು ನೂರು ಪಟ್ಟು ದೊಡ್ಡ ಉದಾಹರಣೆಗಳಿವೆ. ನಾವು ಬೆಳೆದಂತೆ ನಮ್ಮ ಈ ಭಾವನೆಗಳು ಬೆಳೆಯುತ್ತವೆ. ಮೊದಲು ಸಣ್ಣ ಪುಟ್ಟ ವಿಷಯಗಳ ಜೊತೆ ಕೂಡಿದ್ದು, ಬೆಳೆಯುತ್ತಾ ನಮ್ಮ ಪ್ರತೀ ಹೆಜ್ಜೆಯಲ್ಲೂ ಇವು ಸೇರಿಕೊಳ್ಳುತ್ತವೆ.
ಹೆಚ್ಚಿನ ಜನ ಇದನ್ನು ಒಪ್ಪಲು ರೆಡಿ ಇಲ್ಲ. ಬಹುಶಃ ನಮ್ಮಲ್ಲಿ ನಿಜವನ್ನು ನಿಜವೆಂದು ಒಪ್ಪಿಕೊಳ್ಳುವ ವ್ಯವಧಾನವೂ ಉಳಿದಿಲ್ಲ ಎಂದು ಅನ್ನಿಸುತ್ತೆ. ಅದಕ್ಕೆ ಜನ (ನಾನೂ ಸೇರಿ) ಹೇಳಿದ್ರು
"ಅವರವರ ಮನದಂತೆ ದೃಷ್ಟಿಯೂ ಬೇರೆ"... "ಅವರವರ ಭಾವಕ್ಕೆ ಅವರವರ ಭಕುತಿಗೆ"... "ಅವರವರ ದಾರಿ ಅವರವರಿಗೆ"...

ನಮ್ಮ ವಿಚಾರಗಳು ಎಲ್ಲಿಯವರೆಗೆ ಕುಗ್ಗಿವೆ ಅಂದ್ರೆ, ಒಂದು ಉದಾಹರಣೆ ನೋಡಿ,
ನಮಗೆ ತುಂಬಾ ಮೈ ಕೈ ನೋವು ಎಂದು ನಮ್ಮ ಫ್ಯಾಮಿಲಿ ಡಾಕ್ಟರ್ ಬಳಿ ಹೋಗುತ್ತೇವೆ. ಡಾಕ್ಟರ್ ಪರೀಕ್ಷೆ ಮಾಡಿ "ಏನು ಇಲ್ಲಪ್ಪಾ ನಿನಗೆ, ಸಾದಾರಣ ಸುಸ್ತು ಅಸ್ಟೆಯ. ಮನೆಗೆ ಹೋಗಿ ಸ್ವಲ್ಪ ರೆಸ್ಟ್ ತಗೋ ಸಾಕು. ಬೇರೆ ಏನೂ ಮಾತ್ರೆ ಔಷಧಿ ಬೇಡ" ಅಂತಾರೆ. ಅದಕ್ಕೆ ನಮಗೆ ಸಮಾಧಾನ ಇಲ್ಲ, ಆದರೆ ನಾವು ಅಲ್ಲಿ ಡಾಕ್ಟರ್ ಎದುರು ತಲೆ ಆಡಿಸುತ್ತೇವೆ, ಹೊರಗೆ ಬಂದು "ಎಂತ ಡಾಕ್ಟರೋ, ಸರಿಯಾಗಿ ಒಂದು ಪರೀಕ್ಷೆ ಮಾಡಿ ಔಷಧಿ ಕೊಡಬಾರ್ದ, ಥೂ".
ಹೇಗಿದೆ??.. ನಮ್ಮನ್ನು ನಾವು ಒಮ್ಮೆ ನೋಡಿಕೊಳ್ಳಬೇಕು ಇಂಥ ಸಮಯದಲ್ಲಿ.
ಡಾಕ್ಟರ್ ಹೇಳಿದ್ದೇನು, "ನಿಮಗೆ ಏನೂ ಆಗಿಲ್ಲ ನೀವು ಸರಿಯಾಗಿದ್ದೀರಾ.." ಎಸ್ಟು ಪಾಸಿಟಿವ್ ಆಗಿ ಹೇಳಿದ್ರು. ಎಸ್ಟು ಯೋಗ್ಯವಾಗಿ ಹೇಳಿದ್ರು. ಆದರೆ ನಾವು ಮಾಡಿದ್ದೇನು?..
ನಮಗೆ ಸ್ವತಃ ನಮ್ಮ ಮೇಲೇ ನಂಬಿಕೆ ಇಲ್ಲ, ಇನ್ನೂ ಆ ಡಾಕ್ಟರ್ ಹೇಳಿದ್ದು ನಮಗೆ ಎಲ್ಲಿ ನಂಬಿಕೆ ಬರುತ್ತೆ? ಯೋಚಿಸಿ ನೋಡಿ.

ಇದಕ್ಕೆ ಪರಿಹಾರ ಹುಡುಕಲು ಯೋಚಿಸಿದೆ. ಬೇರೆ ಬೇರೆ ಪುಸ್ತಕಗಳನ್ನು ಓದಿದೆ. ಸೂಕ್ತ ಪರಿಹಾರ ಸಿಗಲಿಲ್ಲವಾದರೂ ಒಂದು ಪುಸ್ತಕದಲ್ಲಿ ಬರೆದ ವಿಷಯ ತುಂಬಾ ನನ್ನ ಗಮನ ಸೆಳೆಯಿತು. ಇವೆಲ್ಲದುದಕ್ಕೆ ಮೂಲ ಕಾರಣ ನಮ್ಮ "ದೃಷ್ಟಿಕೋನ". ನಾವು ನೋಡುವ ದೃಷ್ಟಿಕೋನದಿಂದ ನಮ್ಮ ನಡತೆ ಮತ್ತು ಮನಸ್ಥಿತಿಗಳು ಬದಲಾಗುತ್ತವೆ. ಅಂದರೆ ನಾವು ನೋಡುವ "ದೃಷ್ಟಿಕೋನ" ನಮ್ಮ ಪರಿಸರವನ್ನು ಬದಲಾಯಿಸುತ್ತೆ. ಅಂತೆಯೇ ಇದರ ಇನ್ನೊಂದು ಭಾಗವಾಗಿ ನಮ್ಮ ಪರಿಸರದಲ್ಲಿ ಬದಲಾವಣೆ ಆದಂತೆ ನಮ್ಮ ದೃಷ್ಟಿಕೋನವೂ ಬದಲಾಗುತ್ತದೆ. ನಿಜ ಒಂದೇ ವಿಷಯಕ್ಕೆ ಎರಡು ಮುಖಗಳಿರುತ್ತವೆ. ಈ ಕೆಳಗಿನ ಎರಡು ವಾಕ್ಯಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ,
"ಅವಳು ಸುಂದರವಾಗಿದ್ದಾಳೆ, ಹಾಗಾಗಿ ನೀನವಳನ್ನು ಪ್ರೀತಿಸುತ್ತಿಯೆ."
ಅಥವಾ
"ನೀನವಳನ್ನು ಪ್ರೀತಿಸುತ್ತಿಯೆ, ಹಾಗಾಗಿ ಅವಳು ನಿನಗೆ ಸುಂದರವಾಗಿ ಕಾಣುತ್ತಾಳೆ."

ಸ್ವಲ್ಪ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸೋಣ. ಸಿಂಪಲ್ ಆಗಿ ಹೇಳುತ್ತೇನೆ - ನಾವು ಚಿಕ್ಕಂದಿನಿಂದ ನೋಡಿ ಕಲಿತ ವಿಷಯಗಳೇ ನಮ್ಮ ಮೇಲೇ ಪ್ರಭಾವ ಬೀರಿದವು; ಅವು ನಮ್ಮಲ್ಲಿ ಪ್ರಭಾವ ಬೀರಿದ ಕಾರಣದಿಂದಾಗಿಯೇ ನಾವು ನೋಡುವ ದ್ರಷ್ಟಿಕೋನವೂ ಬದಲಾಗುತ್ತಾ ಹೋಗಿ ನಮ್ಮ ಈಗಿನ ಪರಿಸ್ಥಿತಿ ತಲುಪಿದ್ದೇವೆ. ಇದನ್ನು ನಿಮಗೆ ಒಂದೇ ಉದಾಹರಣೆಯಿಂದ ತಿಳಿಸಲು ಪ್ರಯತ್ನಿಸುತ್ತೇನೆ. ಈ ಕೆಳಗಿನ ಉದಾಹರಣೆಯಲ್ಲಿ ನಮ್ಮ ಮನಸ್ಸಿನಲ್ಲಿ ಕ್ಷಣದಲ್ಲಿ ಆದ ಬದಲಾವಣೆಗಳನ್ನು ನೋಡಿ. ನಮ್ಮ ದೃಷ್ಟಿಕೋನದಲ್ಲಿ ಆದ ಬದಲಾವಣೆಗಳು ಹೇಗೆ ನಮ್ಮ ಪರಿಸರದಲ್ಲಿ ಬದಲಾವಣೆ ತರುತ್ತವೆ, ಅದೇ ಪರಿಸರದಲ್ಲಿ ಆದ ಬದಲಾವಣೆ ನಮ್ಮ ದೃಷ್ಟಿಕೋನದ ಪುನರ್ ಬದಲಾವಣೆಗೆ ಹೇಗೆ ಸಾಧ್ಯವಾಯಿತು ಎಂದು ಗಮನಿಸಿ.
(ಇದೊಂದು ಕಾಲ್ಪನಿಕ ಉದಾಹರಣೆ)..
ಅದೊಂದು ಬೆಳಿಗ್ಗೆ, ನಾನು ಒಂದು ಪಾರ್ಕ್ ನಲ್ಲಿ ಬೆಂಚಿನಮೇಲೆ ಕುಳಿತಿದ್ದೆ. ಕೆಲವರು ಪಕ್ಕದ ಬೆಂಚಿನಮೇಲೆ ಕುಳಿತು 
ಪೇಪರ್ ಓದುತ್ತಿದ್ದರು, ಇನ್ನು ಕೆಲವರು ಕಣ್ಣು ಮುಚ್ಚಿ ರೆಸ್ಟ್ ತಗೋತ ಇದ್ದರು. ಆಗ ಒಬ್ಬ ಮನುಷ್ಯ ತನ್ನ ಮೂವರು ಚಿಕ್ಕ ಚಿಕ್ಕ ಮಕ್ಕಳೊಂದಿಗೆ ಬಂದು ನನ್ನ ಪಕ್ಕದಲ್ಲಿ ಕುಳಿತುಕೊಂಡು ಸುಮ್ಮನೆ ಆಕಾಶದ ಕಡೆ ನೋಡತೊಡಗಿದ. ಆತನ ಮಕ್ಕಳೋ ಶೈತಾನನ ಪುತ್ರರು, ಆತನಿಂದ ಜಾರಿಕೊಂಡು ಅಲ್ಲೆಲ್ಲ ಓಡಾಡತೊಡಗಿದರು. ಆತ ಏನೂ ಮಾಡಲಿಲ್ಲ, ಸುಮ್ಮನೆ ಕಣ್ಣು ಮುಚ್ಚಿಕೊಂಡ. ಆ ಮಕ್ಕಳ ತುಂಟತನ ಇನ್ನೂ ಜೋರಾಯಿತು. ಪಕ್ಕದ ಜನರ ಪೇಪರ್ ಎಳೆಯುವುದು, ಮಲಗಿದವರನ್ನು ಸುಮ್ಮನೆ ತಟ್ಟಿ ಎಬ್ಬಿಸುವುದು, ಹೀಗೆ ಮಾಡತೊಡಗಿದರು. ಕೀಟಲೆ ಹೆಚ್ಚಾಗತೊಡಗಿತು, ಜನರಿಗೆ ಇದು ಕಿರಿಕಿರಿ ಆಗತೊಡಗಿತು. ನಾನು ಆತನೆಡೆಗೆ ನೋಡಿದೆ, ಆತ ಇದಾವುದು ಪರಿವೆ ಇಲ್ಲದೆ ಸುಮ್ಮನೆ ಕಣ್ಣು ಮುಚ್ಚಿ ಕುಳಿತಿದ್ದ. ನಾನೂ ರೋಸಿ ಹೋದೆ. (ಇಲ್ಲಿಂದ ಮುಂದೆ ನನ್ನ ದೃಷ್ಟಿಕೋನ ನನ್ನ ನಡತೆ ಮತ್ತು ನನ್ನ ಮನಸ್ಥಿತಿ ಮೇಲೆ ಬೀರಿದ ಪರಿಣಾಮಗಳನ್ನು ನೋಡಿ) 'ಇದೆಂಥಾ ಪರಿ, ಮಕ್ಕಳನ್ನು ಇಲ್ಲಿಗೆ ತಂದು ಬಿಟ್ಟು ಅವನ್ನು ಸ್ವಲ್ಪವಾದರೂ ನಿಯಂತ್ರಣದಲ್ಲಿಡುವುದ ಬಿಟ್ಟು ಈ ಮನುಷ್ಯ ಕಣ್ಣು ಮುಚ್ಚಿ ತನಗೆ ಸಂಬಂಧವೆ ಇಲ್ಲದಂತೆ ಕೂತಿದ್ದಾನೆ. ನನ್ನನ್ನೂ ಸೇರಿ ಇಲ್ಲಿರುವ ಎಲ್ಲರಿಗೂ ಎಸ್ಟು ತೊಂದರೆ ಆಗುತ್ತಿದೆ'. ಕೊನೆಗೆ ಕಿರಿ ಕಿರಿ ಹೆಚ್ಚಾಗಿ ತಾಳಲಾರದೇ ಆತನನ್ನು ತಟ್ಟಿ ಎಬ್ಬಿಸಿ ಕೇಳಿಯೇ ಬಿಟ್ಟೆ, "ಏನಿದು, ಸ್ವಲ್ಪವಾದರೂ ಜವಾಬ್ದಾರಿ ಬೇಡವೇ. ನಿಮ್ಮ ಮಕ್ಕಳು ಇಲ್ಲಿ ಎಲ್ಲರಿಗೂ ತೊಂದರೆ ಕೊಡುತ್ತಿವೆ. ನೀವು ನೋಡಿದರೆ ಇಲ್ಲಿ ಕಣ್ಣು ಮುಚ್ಚಿ ತನಗೆ ಸಂಬಂಧವೆ ಇಲ್ಲ ಅನ್ನೋ ತರ ಕೂತಿದ್ದಿರಿ".
--- ಇದು ನಾನು ಆ ಮನುಷ್ಯನನ್ನು ನೋಡಿದ ದೃಷ್ಟಿಕೋನ ನನ್ನ ಮನಸ್ಸಿನಮೇಲೆ ಬೀರಿದ ಪರಿಣಾಮಗಳು. ಕಥೆ ಮುಂದುವರಿಯುತ್ತೆ. ಈಗ ಆ ಮನುಷ್ಯನ ಉತ್ತರ ಕೇಳಿ.

ಆತ ಹೇಳಿದ "ಹೌದೇ, ಕ್ಷಮಿಸಿ, ನಾನು ತುಂಬಾ ಚಿಂತೆಯಲ್ಲಿದ್ದೆ, ತಿಳಿಯಲಿಲ್ಲ. ಮೂರು ದಿನಗಳ ಹಿಂದೆಯಷ್ಟೆ ನನ್ನ ಹೆಂಡತಿ ತೀರಿಹೋದಳು, ಆ ಮಕ್ಕಳು ತಮ್ಮ ತಾಯಿಯನ್ನು ಕಳೆದುಕೊಂಡವು. ನಿನ್ನೆ ತಾನೆ ಅಂತ್ಯ ಕ್ರಿಯೆಗಳೆಲ್ಲ ಮುಗಿದವು, ನನಗೆ ಮುಂದೆ ಏನು ಮಾಡಬೇಕೆಂದು ತೋಚುತ್ತಿಲ್ಲ."
"...ಓಹ್..." ನಾನು ಉದ್ಗರಿಸಿದೆ. "ಕ್ಷಮಿಸಿ ನಾನು ನಿಮ್ಮನು ತಪ್ಪಾಗಿ ತಿಳಿದುಕೊಂಡೆ. ನನಗೆ ಈ ವಿಷಯ ತಿಳಿದಿರಲಿಲ್ಲ. ದಯವಿಟ್ಟು ಬೇಜಾರು ಮಾಡ್ಕೊಬೇಡಿ. ಪಾಪ ಮಕ್ಕಳು....."
ಪೂರ್ತಿ ಸನ್ನಿವೇಶ ಹೇಗೆ ಬದಲಾಯಿತು ನೋಡಿ. ಅದೇ ಒಂದು ಘಳಿಗೆಯ ಮೊದಲು ನಾನು ಅವನಲ್ಲಿ ತೋರಿದ್ದ ಸಿಟ್ಟು ಈಗ ಕ್ಷಣಾರ್ಧದಲ್ಲಿ ಮಾಯ. ನನ್ನ ದೃಷ್ಟಿಕೋನ ಕ್ಷಣದಲ್ಲಿ ಬದಲಾಯಿಸಿತು. ನನ್ನ ಮನಸ್ಸಿನ ಮೇಲೆ ಆದ ಪರಿಣಾಮ ಅವನ ಮೇಲಿನ ನನ್ನ ಭಾವನೆಯನ್ನು ಬದಲಾಯಿಸಿತು.
ಅಂದರೆ, ನಾವು ನೋಡುವ ದೃಷ್ಟಿಕೋನ ನಮ್ಮ ಪರಿಸರವನ್ನು ಬದಲಾಯಿಸುತ್ತೆ. ಅಂತೆಯೇ ನಮ್ಮ ಪರಿಸರದಲ್ಲಿ ಬದಲಾವಣೆ ಆದಂತೆ ನಮ್ಮ ದೃಷ್ಟಿಕೋನವೂ ಬದಲಾಗುತ್ತದೆ. ಇದನ್ನು ನಾವು ಅರ್ಥ ಮಾಡಿಕೊಳ್ಳಬೇಕು.

ಸರಿ, ಇದರ ಸುಧಾರಣೆ ಹೇಗೆ? ನನ್ನನ್ನು ನಾನು ಪ್ರಶ್ನಿಸಿಕೊಂಡೆ.

ನನ್ನ, ನಿಮ್ಮ ಮತ್ತು ಬಹಳಷ್ಟು ಜನರ ಮನೋವ್ಯಾಧಿ ನೋಡಿ,
ನಮಗೆ "ಸಮಸ್ಯೆ" ಇದೆ ಎಂಬುದು ಅರಿವಾಗುತ್ತೆ (ಅಸ್ಟು ಬುದ್ದಿ ಇದೆ ನಮಗೆ), ಆದರೆ ಅದರ ಪರಿಹಾರಕ್ಕೆ ನಾವು ಅವಲಂಬಿಸುವ ಮಾರ್ಗ ಮಾತ್ರ ಅನುಪಯುಕ್ತ (ಯೂಸ್ ಲೆಸ್). ಹೆಚ್ಚಿನ ಜನ ಒಂದು ಸಮಸ್ಯೆ ಇದೆ ಎಂದಾದರೆ ಆ ಸಮಸ್ಯೆಯ ಕಡೆ ಕೇಂದ್ರೀಕೃತವಾಗಿ (ಫೋಕಸ್) ಪರಿಹಾರಕ್ಕೆ ಪ್ರಯತ್ನಿಸುತ್ತಾರೆಯೇ ಹೊರತು, ಆ ಸಮಸ್ಯೆಯ ಮೂಲ ಎಲ್ಲಿಂದ ಎಂದು ಆಲೋಚಿಸುವುದಿಲ್ಲ. ಉದಾಹರಣೆಗೆ ನನ್ನಲ್ಲಿ ಹಣದ ಸಮಸ್ಯೆ ಇದೆ ಎಂದಾದರೆ ನಾನು ಹಣ ಮಾಡುವುದು ಹೇಗೆ.. ಹಣ ಹೇಗೆ ಪಡೆಯುವುದು.. ಎಂದು ಹಣದ ಮೇಲೆ ಫೋಕಸ್ ಮಾಡುತ್ತೇನೆ ಹೊರತು, ನನ್ನ ಹಣದ ಸಮಸ್ಯೆ ಹೇಗೆ ಶುರುವಾಯಿತು? ಆ ಶುರುವಾದ ಜಾಗವನ್ನ ಹೇಗೆ ಸರಿಪಡಿಸುವುದು ಎಂದು ಯಾವತ್ತೂ ಯೋಚಿಸುವುದಿಲ್ಲ. ಆ ಸಮಸ್ಯೆಗೆ ಮೂಲವಾದ ಜಾಗವನ್ನು ಸರಿಪಡಿಸದ ಹೊರತು ನಾನು ಎಸ್ಟು ಹಣ ಸಂಪಾದಿಸಿದರು ಅದು ನನ್ನಲ್ಲಿ ಉಳಿಯುವುದಿಲ್ಲ. ನಿಜ ತಾನೆ...

ಹಾಗೆಯೇ ನಾನು ಮೇಲೆ ಹೇಳಿದ ಸಮಸ್ಯೆಗೆ ಮೂಲವನ್ನು ಹುಡುಕಬೇಕು. ಈಗ ನಮ್ಮಲ್ಲಿ ಎರಡು ಚಾಯಿಸ್ ಇವೆ, ನಮ್ಮ ಪರಿಸರ ಬದಲಾದರೆ ನಮ್ಮ ದೃಷ್ಟಿಕೋನವನ್ನು ಬದಲಾಯಿಸಬಹುದು. ಅಥವಾ, ನಮ್ಮ ದೃಷ್ಟಿಕೋನ ಬದಲಾದಂತೆ ನಮ್ಮ ಪರಿಸರವೂ ಬದಲಾಗುತ್ತೆ. ಇವೆರಡರಲ್ಲಿ ಯಾವುದು ಸಮಂಜಸ?
ಮೊದಲನೆಯದು ಪರಿಸರವನ್ನು ಬದಲಾಯಿಸುವುದು.. ಇದು ಕಷ್ಟಸಾಧ್ಯ. ಎಲ್ಲ ಸಮಯದಲ್ಲೂ ನಮಗೆ ಅನುಕೂಲವಾದ ಪರಿಸರ ದೊರೆಯುವುದು ಕಷ್ಟ. ಹಾಗೂ ಹೀಗೂ ಪ್ರಯತ್ನ ಪಟ್ಟು ನಮ್ಮ ಪರಿಸರವನ್ನು ಬದಲಾಯಿಸ ಹೊರಟರೆ ಅದು ಬ್ರಹ್ಮ್ಹ ದಂಡ. ಏಕೆಂದರೆ ನಾನು ಮೊದಲೇ ಹೇಳಿದಂತೆ ಸಮಸ್ಯೆಯ ಮೂಲ ಇರುವುದು ನಮ್ಮ ದೃಷ್ಟಿಕೋನದಲ್ಲಿ, ಆದರೆ ನಾವು ಪ್ರಯತ್ನ ಪಡುತ್ತಿರುವುದು ನಮ್ಮ ಪರಿಸರ (ನಮ್ಮ ನಡತೆ ಮತ್ತು ನಮ್ಮ ಮನಸ್ಥಿತಿ) ಬದಲಾಯಿಸಲು. ಇದಕ್ಕೆ ಉತ್ತಮ ಉದಾಹರಣೆ ಕೊಡಲು ಬಯಸುತ್ತೇನೆ. ಹೇಗೆ ನಾವು ನಮ್ಮ ನಡತೆ ಮತ್ತು ಮನಸ್ಥಿತಿ ಬದಲಾಯಿಸುವುದರಿಂದ ಸಮಸ್ಯೆ ಪರಿಹಾರ ಆಗುವುದಿಲ್ಲ ಎಂದು ನೋಡೋಣ.

ನೀವು ಮೊದಲಬಾರಿಗೆ ಬೆಂಗಳೂರಿಗೆ ಬಂದಿದ್ದೀರಿ ಎಂದು ಇಟ್ಟುಕೊಳ್ಳೋಣ. ನಿಮಗೆ ಇಲ್ಲಿಯ ಮಾರ್ಗಗಳ ಪರಿಚಯ ಇಲ್ಲ. ನೀವು ಒಂದು ಅಂಗಡಿಗೆ ಹೋಗಿ ಒಂದು ಬೆಂಗಳೂರಿನ ನಕ್ಷೆ (ಮ್ಯಾಪ್) ಕೊಳ್ಳುತ್ತೀರಿ. ಆದರೆ ಆ ಮ್ಯಾಪ್ ನಲ್ಲಿ ಸಣ್ಣ ತಪ್ಪಾಗಿ, ಮೈಸೂರಿನ ನಕ್ಷೆಗೆ ಬೆಂಗಳೂರು ಎಂದು ಬರೆದಿದ್ದಾರೆ. ಅಂಗಡಿಯಾತ ತಿಳಿಯದೆ ನಿಮಗೆ ಆ ಮ್ಯಾಪ್ ಕೊಟ್ಟಿದ್ದಾನೆ. -- ಇಲ್ಲಿದೆ ಸಮಸ್ಯೆಯ ಮೂಲ, ಇಲ್ಲಿಂದ ಮುಂದೆ ಗಮನಿಸಿ.
ನಿಮಗೆ ಗೊತ್ತಾಗಿದೆ 'ತನಗೆ ಬೆಂಗಳೂರಿನ ಪರಿಚಯ ಇಲ್ಲ, ನಾನು ಒಂದು ರೀತಿಯ ಸಮಸ್ಯೆಯನ್ನು ಅನುಭವಿಸುತ್ತಿದ್ದೇನೆ'.
ಮೈಸೂರಿನ ಮ್ಯಾಪ್ ಇಟ್ಟುಕೊಂಡು ಬೆಂಗಳೂರಿನಲ್ಲಿ ತಿರುಗಾಡುವುದು ಸಾಧ್ಯವಿಲ್ಲ. ಸರಿ, ಈಗ ನಮ್ಮ ಫಾರ್ಮುಲಾದಂತೆ, ನಮ್ಮ ಪರಿಸರದಲ್ಲಿ ಬದಲಾವಣೆ ಮಾಡಲು ಪ್ರಯತ್ನಿಸೋಣ.
ಮೊದಲನೆಯದು ನಮ್ಮ ನಡತೆ ಯಲ್ಲಿ ಬದಲಾವಣೆ ತರೋಣ - 'ನೀವಂದುಕೊಳ್ಳುತ್ತೀರಿ ಬಹುಶಃ ಈ ರೋಡ್ ಆದ ನಂತರ ನನಗೆ ಬೇಕಾದ ರೋಡ್ ಬರಬಹುದು. ಸರಿ ನಾನು ಸ್ವಲ್ಪ ವೇಗವಾಗಿ ನಡೆಯುತ್ತೇನೆ (ನಡತೆಯಲ್ಲಿ ಬದಲಾವಣೆ) -- ಏನಾದರೂ ಫಲಿತಾಂಶ ದೊರೆಯುವುದೇ? ನಿಮ್ಮ ನಡತೆಯಲ್ಲಿ ಬದಲಾವಣೆ ತಂದುಕೊಂಡಿರಿ. ನಿಮಗೆ ಈಗ ಮೈಸೂರಿನ ಮ್ಯಾಪ್ ಇಟ್ಟುಕೊಂಡು ಬೆಂಗಳೂರು ತಿರುಗಬಹುದೇ? ಇಲ್ಲ, ಯಾಕಂದ್ರೆ ಸಮಸ್ಯೆ ನಿಮ್ಮ ನಡತೆಯದ್ದಲ್ಲ.
ಎರಡನೆಯದಾಗಿ ನಮ್ಮ ಮನಸ್ಥಿತಿಯಲ್ಲಿ ಬದಲಾವಣೆ ತರೋಣ. ನನ್ನ ಉದಾಹರಣೆಗೆ ಒಂದುರೀತಿಯ ಮನಸ್ಥಿತಿ ತೆಗೆದುಕೊಳ್ಳುತ್ತೇನೆ. - ನೀವು ಉದಾತ್ತ ಮನಸ್ಕರು. ನೀವು ಅಂದುಕೊಳ್ಳುತ್ತೀರಿ, ಸರಿ ಇದೆಲ್ಲ ದೇವರ ಇಚ್ಚೆ. ಹೇಗೆ ಅವನು ನಡೆಸುತ್ತಾನೋ ಅದರಂತೆ ನಡೆಯಲಿ. ನಾನು ಈ ಸಮಯದಲ್ಲಿ ಧೈರ್ಯಗೆಡಬಾರದು. ಮರಳಿ ಪ್ರಯತ್ನವ ಮಾಡು (ಬೇಕಾದರೆ ಭಗವ್ದ್ ಗೀತೆ ಸೇರಿಸೋಣ "ಕರ್ಮಣ್ಯೆ ವಾದಿಕಾರಸ್ತೆ ಮಾಫಲೆಶು ಕದಾಚನ"). -- ನಿಮ್ಮ ಸಮಸ್ಯೆಗೆ ಪರಿಹಾರ ಸಿಕ್ಕಿತೇ? ನಿಮ್ಮ ಮನಸ್ಥಿತಿ ಬದಲಾಯಿಸಿದ ಮೇಲೆ ಮೈಸೂರಿನ ಮ್ಯಾಪ್ ಹಿಡಿದು ಬೆಂಗಳೂರು ಸುತ್ತಲು ಸಾಧ್ಯವಾಯಿತೇ? ಇಲ್ಲ, ಯಾಕಂದ್ರೆ ಸಮಸ್ಯೆ ನಿಮ್ಮ ಮನಸ್ಥಿತಿಯದಲ್ಲ.
ಕೆಲವೊಂದು ಸಲ ನಾವು ಇಂತಹ ಅನೇಕ ಸಮಸ್ಯೆಗಳಲ್ಲಿ ಸಿಲುಕಿ, ಸಮಸ್ಯೆಯ ಮೂಲವನ್ನು ಅರಿಯದೆ ಸುಮ್ಮನೆ ಗೋಳಾಡುತ್ತೇವೆ. ನಮ್ಮ ಮನಸ್ಥಿತಿ ಬದಲಾಯಿಸಿ ಸುಮ್ಮನೆ ವ್ಯರ್ಥ ಪ್ರಯತ್ನಗಳನ್ನು ಮಾಡಿ ಕೊನೆಗೆ ಫಲ ಸಿಗದೆ ಬೇರೆಯವರನ್ನು (ಕೊನೆಗೆ ದೇವರನ್ನೂ) ದೂರುತ್ತೇವೆ. ಇದನ್ನು ಮೂರ್ಖತನ ಎಂದು ಕರೆಯದೆ ಬೇರೇನೂ ಹೇಳಲಾಗದು (ನನ್ನನ್ನೂ ಸೇರಿಸಿ).
ಸಮಸ್ಯೆಯ ಪರಿಹಾರಕ್ಕೆ ನೀವಿಗ ನೋಡಬೇಕಾದ್ದು ಬೇರೆ. ನಿಮ್ಮ ದೃಷ್ಟಿಕೋನ. ಒಂದು ರೋಡ್ ಸರಿಯಿಲ್ಲ, ಸರಿ, ಬೇರೆಯೊಬ್ಬ ವ್ಯಕ್ತಿಯಲ್ಲಿ ವಿಚಾರಿಸಿ ನೋಡೋಣ. ಅಥವಾ ನಮಗೆ ಹೋಗಬೇಕಾದ ಜಾಗವನ್ನು ಬೇರೆಯವರಲ್ಲಿ ಮೊದಲು ವಿಚಾರಿಸಿ ಆ ಜಾಗ ನನ್ನ ಬಳಿ ಇರುವ ಮ್ಯಾಪ್ ನಲ್ಲಿ ಇದೆಯೇ ಎಂದು ಪರೀಕ್ಷಿಸೋಣ. ಅಂತೂ ಸಮಸ್ಯೆ ಮ್ಯಾಪ್ ನದ್ದು ಎಂದು ನಮಗೆ ಗೊತ್ತಾಗಬೇಕು ಅಸ್ಟೇ.

ನಾನಿಲ್ಲಿ ಏನನ್ನು ಸಮರ್ಥಿಸ ಹೊರಟಿದ್ದೆ ಎಂದರೆ, ನಮ್ಮ ಸಮಸ್ಯೆಗಳಿಗೆ ಹೆಚ್ಚಿನ ಪಾಲು ನಮ್ಮ ದೃಷ್ಟಿಕೋನವೇ ಮೂಲ ಕಾರಣ. ನಾವದನ್ನು ಅರ್ಥ ಮಾಡಿಕೊಳ್ಳಬೇಕು. ನಾನು ಮೊದಲು ಹೇಳಿದ ನನ್ನ ಸಿಟ್ಟು, ಸಿಡುಕುಗಳ ಸಮಸ್ಯೆಯೂ ಇದರಿಂದ ಹೊರತಲ್ಲ. ಮೊದಲು ನಮ್ಮ ನೋಡುವ ದೃಷ್ಟಿಕೋನ ಸರಿಪಡಿಸಿಕೊಳ್ಳೋಣ. ನಂತರ ಸಮಸ್ಯೆಗಳು ತಾನಾಗಿಯೇ ದೂರಾಗುತ್ತವೆ. ಇಂದಿನಿಂದ ಪ್ರತಿಯೊಂದಕ್ಕೂ ಕೊರಗುವುದು, ಪ್ರತೀ ವಿಷಯದಲ್ಲೂ ನ್ಯೂನ್ಯತೆ (ನೆಗೆಟಿವಿಟಿ) ಯನ್ನು ಕಾಣುವುದು  ಬಿಡೋಣ. ನಾನು ಬದಲಾದರೆ ಜಗತ್ತು ಬದಲಾಗುತ್ತೆ ಎಂಬ ಸತ್ಯವನ್ನು ಅರಿಯೋಣ.

ಓಂ ಶಾಂತಿಃ ಶಾಂತಿಃ ಶಾಂತಿಃThursday, August 25, 2011

ನಮಸ್ಕಾರ ಗೆಳೆಯರೆ...

ಎಲ್ಲರೊಳು ತಾನು ತನ್ನೊಳಗೆಲ್ಲರಿರುವರೋ |
ಲೆಲ್ಲೆಲ್ಲಿಯುo ನೋಡಿ ನಡೆದು ನಗುತಳುತ ||
ಬೆಲ್ಲ ಲೋಕಕ್ಕಾಗಿ ತನಗೆ ತಾಂ ಕಲ್ಲಾಗ |
ಬಲ್ಲವನೆ ಮುಕ್ತನಲ ಮಂಕುತಿಮ್ಮ ||
ನಿಜ, ನಿರ್ವಾಣವನ್ನು ಬಲ್ಲವನು (ಬಾಹು ಬಂಧನಗಳಿಂದ ಮುಕ್ತನಾದವನು) ಲೋಕದ ಸುಖಕ್ಕಾಗಿ ತನ್ನನು ತಾನು ಅರ್ಪಿಸಿಕೊಳ್ಳುತ್ತಾನೆ. ಎಲ್ಲರ ಸುಖವೆ ತನ್ನ ಸುಖ ಎಂಬ ಉದಾತ್ತ ಮನಸ್ಕನಾಗುತ್ತಾನೆ. ತನ್ನ ಸುಖಕ್ಕೆ ತಾನು ಬದುಕದೇ, ಪರರ ನೋವು ನಲಿವುಗಳಿಗೆ ಮಿಡಿಯುತ್ತಾನೆ.
ಇದು ನನ್ನ ಮೊದಲ ಕನ್ನಡ ಬ್ಲಾಗು. ಹೊಸ ದಿನ ಎಂದು ಇದಕ್ಕೆ ನಾಮಕರಣ ಮಾಡಿದ್ದೇನೆ. 'ಹೊಸ ದಿನ'ದ ಒಳಾರ್ಥ ಹೆಚ್ಚು ಹೊಸದೇನಲ್ಲ, ಆದರೆ ಇಲ್ಲಿಯ ಅನುಭವಗಳು ನನಗೆ ಹೊಸವು. ಮಾನವನು ತನ್ನ ಜೀವಿತದಲ್ಲಿ ಪ್ರತಿದಿನವೂ ಹೊಸ ಹೊಸ ವಿಷಯಗಳೊಂದಿಗೆ ಮುಖಾಮುಖಿ ಆಗುತ್ತಾನೆ. ಪ್ರತಿ ದಿನವೂ ಅವನ ಜೀವನದಲ್ಲಿ ಹೊಸ ಅನುಭವಗಳನ್ನು ಪಡೆಯುತ್ತಾನೆ. ಅಂತೆಯೇ ನನ್ನ ಜೀವನವು ಸಾಗುವ ಹಾದಿಯಲ್ಲಿ ನಾನು ಅನುಭವಿಸಿದ ವಿಷಯಗಳು, ಘಟನೆಗಳು, ಅವುಗಳ ಒಂದೊಂದು ತುಣುಕುಗಳನ್ನು ಇಲ್ಲಿ ಹಂಚಿಕೊಳ್ಳಲು ಇಚ್ಚಿಸುತ್ತೇನೆ.